ರಿಪ್ಪನ್‌ಪೇಟೆ ; ಹೊಸನಗರ ತಾಲೂಕಿನ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಸಾನಿ ಗ್ರಾಮದಲ್ಲಿ ಥಲಸೇಮಿಯಾ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ನೆರವಿಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ರಕ್ತನಿಧಿ ಘಟಕ ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರ ಆಯೋಜಿಸಲಾಯಿತು.
ಕೇವಲ 34 ಮನೆಗಳಷ್ಟೇ ಇರುವ ಈ ಸಣ್ಣ ಗ್ರಾಮದಲ್ಲಿ ನಡೆದ ಶಿಬಿರದಲ್ಲಿ 30ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹಣೆ ನಡೆದಿದ್ದು, ಗ್ರಾಮಸ್ಥರ ಮಾನವೀಯತೆ ಮತ್ತು ಸಾಮಾಜಿಕ ಜವಾಬ್ದಾರಿಯ ನಿದರ್ಶನವಾಗಿ ಪರಿಣಮಿಸಿದೆ.
ಥಲಸೇಮಿಯಾ ಒಂದು ವಂಶಪಾರಂಪರ್ಯ ರಕ್ತರೋಗವಾಗಿದ್ದು, ಹತ್ತಿರದ ಸಂಬಂಧಿಯವರ ಜೊತೆಯಲ್ಲಿ ವಿವಾಹವಾದರೆ ಈ ಕಾಯಿಲೆ ಹೆಚ್ಚಾಗಿ ಕಂಡುಬರುತ್ತದೆ. ಈ ಕಾಯಿಲೆಯಿಂದ ಬಳಲುವವರು ಜೀವನಪೂರ್ತಿ ನಿಯಮಿತವಾಗಿ ರಕ್ತ ಪಡೆಯಬೇಕಾಗುತ್ತದೆ. ರಕ್ತದಾನಿಗಳ ಕೊರತೆಯಿಂದ ಅನೇಕ ರೋಗಿಗಳು ಸಂಕಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿಯೇ ಹಿರೇಸಾನಿ ಗ್ರಾಮದ ಯುವಕರ ಈ ಕಾರ್ಯವು ರಾಜ್ಯದಾದ್ಯಂತ ಮಾದರಿಯಾಗಿದೆ.

ಶಿಬಿರದ ವೈದ್ಯಾಧಿಕಾರಿ ಡಾ. ಗಣೇಶ್ ಡಿ. ಮಾತನಾಡಿ, “ಥಲಸೇಮಿಯಾ ರೋಗಿಗಳಿಗೆ ಪ್ರತಿಮಾಸವೂ ರಕ್ತದ ಅಗತ್ಯವಿರುತ್ತದೆ. ಹಿರೇಸಾನಿಯಂತಹ ಸಣ್ಣ ಗ್ರಾಮದಲ್ಲೂ ಜನರು ಪ್ರೇರಣೆಯಿಂದ ಮುಂದೆ ಬಂದು ರಕ್ತದಾನ ಮಾಡಿರುವುದು ಶ್ಲಾಘನೀಯ. ಇಂತಹ ಶಿಬಿರಗಳು ಇತರ ಗ್ರಾಮಗಳಿಗೂ ಮಾದರಿಯಾಗಬೇಕು,” ಎಂದರು.
ಹಿರೇಸಾನಿ ಕುಗ್ರಾಮಕ್ಕೆ ಇಂದಿಗೂ ಸರಿಯಾದ ಸಂಪರ್ಕ ರಸ್ತೆ, ಸಾರಿಗೆ ವ್ಯವಸ್ಥೆ, ಮೊಬೈಲ್ ನೆಟ್‌ವರ್ಕ್ ಸೌಕರ್ಯವಿಲ್ಲ. ಚಿಮಣಿ ಬುಡ್ಡಿಯಂತೆ ಉರಿಯುವ ವಿದ್ಯುತ್ ದೀಪಗಳೇ ಆಸರೆಯಾಗಿದ್ದು ಗ್ರಾಮದ ಯುವಕರನ್ನು ವರಿಸಲು ಹೆಣ್ಣು ಸಿಗುತ್ತಿಲ್ಲ. ಈ ಎಲ್ಲ ಸಮಸ್ಯೆಗಳ ನಡುವೆಯೂ ಗ್ರಾಮದ ಯುವಕರು ಉತ್ಸಾಹದಿಂದ ಏನಾದರೂ ಸಾಧನೆ ಮಾಡುವ ಮೂಲಕ ಮಾದರಿ ಗ್ರಾಮವನ್ನಾಗಿ ಮಾಡಿ ಜನಪ್ರತಿನಿಧಿಗಳ ಗಮನಸೆಳೆಯುವ ಸಣ್ಣ ಪ್ರಯತ್ನವನ್ನು ರೂಪಿಸಿಕೊಂಡು ಥಲಸೇಮಿಯಾ ಅನುವಂಶೀಯ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗಾಗಿ ರಕ್ತವನ್ನು ದಾನ ಮಾಡುವ ಮೂಲಕ ಮಾನವೀಯತೆಯನ್ನು ಮೆರೆಯುವತ್ತ ದಾಪುಗಾಲು ಇಡುವುದರೊಂದಿಗೆ ರಾಜ್ಯಕ್ಕೆ ಮಾದರಿಯಾಗಿದ್ದಾರೆ.

ಕೇವಲ 34 ಮನೆಗಳಷ್ಟೇ ಇರುವ ಪುಟ್ಟ ಹಳ್ಳಿಯಲ್ಲಿ ಇಂತಹ ಶಿಬಿರವನ್ನು ಆಯೋಜಿಸಿ ಯಾವುದೇ ರಾಜಕೀಯ ಪಕ್ಷಗಳ ಸಂಘ ಸಂಸ್ಥೆಗಳ ನೆರವನ್ನು ನಿರೀಕ್ಷಿಸದೆ 30ಕ್ಕೂ ಅಧಿಕ ಯುನಿಟ್ ರಕ್ತದಾನವನ್ನು ಮಾಡುವ ಮೂಲಕ ಮಾನವೀಯತೆಗೆ ಹೆಸರಾಗಿದ್ದಾರೆ.
ಈ ಶಿಬಿರವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ರಕ್ತನಿಧಿ ಘಟಕದವರ ಮಾರ್ಗದರ್ಶನದಲ್ಲಿ ಹಿರೇಸಾನಿ ಗ್ರಾಮದ ಮಲ್ನಾಡ್ ಬಾಯ್ಸ್ ಗ್ರೂಪ್ ಹಾಗೂ ಗ್ರಾಮಸ್ಥರ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು. ಡಾ. ಗಣೇಶ್ ಡಿ., ಡಾ. ಗಣೇಶ್ ವೈ., ರೂಪಾನಂದಮೂರ್ತಿ, ಸುಷ್ಮಾ ಡಿಸೋಜಾ, ವೇದಮೂರ್ತಿ, ಮಂಜುನಾಥ್ ಕಲ್ಯಾಣ್, ಗಣೇಶ್, ಕುಮಾರಿ ಹಜರಿಯ, ಹನುಮಂತಪ್ಪ ಸೇರಿದಂತೆ ಅನೇಕರು ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





