ಬಿಪಿಎಲ್ ಕಾರ್ಡ್ ರದ್ದುಪಡಿಸಲ್ಲ ; ಸಚಿವ ಕೆ.ಹೆಚ್. ಮುನಿಯಪ್ಪ

Written by Mahesha Hindlemane

Updated on:

ಶಿವಮೊಗ್ಗ ; ರಾಜ್ಯದಲ್ಲಿ ಯಾವುದೇ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸುವುದಿಲ್ಲ. ಆದರೆ ಕೇಂದ್ರ ಸರ್ಕಾರದ ನಿಯಮಾವಳಿಗಳಂತೆ ಆದಾಯ ತೆರಿಗೆ ಕಟ್ಟುವವರಿಗೆ ಮತ್ತು ಸ್ವಂತ ಕಾರು ಇದ್ದು ಬಿಪಿಎಲ್ ಕಾರ್ಡ್ ಪಡೆದವರ ಕಾರ್ಡ್‌ಗಳನ್ನು ಅನರ್ಹಗೊಳಿಸಲಾಗುವುದು. ಅವರಿಗೆ ಎಪಿಎಲ್ ಕಾರ್ಡ್ ಅನ್ನು ನೀಡಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್ ಮುನಿಯಪ್ಪ ಹೇಳಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/15efbj5Gri/

ಅವರು ಶಿವಮೊಗ್ಗದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಣಾಳಿಕೆಯಲ್ಲಿ ಭರವಸೆ ನೀಡಿದ ಹಾಗೆ 10 ಕೆಜಿ ಅಕ್ಕಿ ನೀಡುತ್ತಿದ್ದೇವೆ, ಕೇಂದ್ರದಿಂದ ಅಕ್ಕಿ ಬಾರದೇ ಇದ್ದಾಗ ಅದರ ಬದಲಿಗೆ ಹಣ ನೀಡಿದ್ದೇವೆ. ವಚನದಂತೆ 5 ಕೆಜಿ ಅಕ್ಕಿ ಕೊಟ್ಟಿದ್ದೇವೆ. ಇತ್ತೀಚೆಗೆ ಕಾಳಸಂತೆಯಲ್ಲಿ ಅಕ್ಕಿ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದ ತಕ್ಷಣ ಉತ್ತರ ಕರ್ನಾಟಕ ಭಾಗದಲ್ಲಿ 3 ಕೆ.ಜಿ ಅಕ್ಕಿ, 2 ಕೆ.ಜಿ ಜೋಳ, ಇನ್ನು ಕೆಲವೆಡೆ 3 ಕೆ.ಜಿ ಅಕ್ಕಿ 2 ಕೆ.ಜಿ ರಾಗಿ ಶಿವಮೊಗ್ಗದಲ್ಲಿ 5 ಕೆ.ಜಿ ಅಕ್ಕಿ ನೀಡುತ್ತಿದ್ದೇವೆ. ಕಾನೂನು ಪ್ರಕಾರ ಟೆಂಡರ್ ಕರೆದು ಗುಣಮಟ್ಟದ ಪದಾರ್ಥಗಳ ಕಿಟ್ಟನ್ನು ಮುಂದಿನ ತಿಂಗಳಿಂದ ಎಲ್ಲಾ ಗ್ರಾಹಕರಿಗೂ ನೀಡಲಿದ್ದೇವೆ, ಸರ್ವೇ ಮಾಡಿದಾಗ ಗ್ರಾಹಕರ ಅಪೇಕ್ಷೆಯಂತೆ ಬೇಳೆ, ಅಡುಗೆ ಎಣ್ಣೆ ಸಕ್ಕರೆ, ಉಪ್ಪು ಇರುವ ಕಿಟ್ಟನ್ನು ಕೊಡಲಾಗುವುದು ಎಂದರು.

ಪಡಿತರ ವಿತರಕರಿಗೆ ಮೇ ತಿಂಗಳಿಂದ ಕಮಿಷನ್ ಬಾಕಿ ಇದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರದ ಕಮಿಷನ್ ಬರಲು ತಡವಾಯಿತು ಕೇಂದ್ರ ಮತ್ತು ರಾಜ್ಯ ಸರ್ಕಾರ ಇಬ್ಬರು ಸೇರಿ ಸೆಪ್ಟೆಂಬರ್ ತಿಂಗಳವರೆಗಿನ ಕಮಿಷನ್ ಕೊಡಲು ತೀರ್ಮಾನವಾಗಿದ್ದು ಈ ವಾರದೊಳಗೆ ಎಲ್ಲಾ ಪಡಿತರ ವಿತರಕರಿಗೆ ಕಮಿಷನ್ ನೀಡಲಿದ್ದೇವೆ ಎಂದರು.

ಶಿವಮೊಗ್ಗದಲ್ಲಿ ಇಲಾಖೆ ಅಧಿಕಾರಿಗಳು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ತೂಕ ಮತ್ತು ಅಳತೆ ಅಧಿಕಾರಿಗಳಿಗೆ ಸಂಶಯ ಬಂದ ಖಾಸಗಿ ಗೋಡಾನ್ ಗಳಲ್ಲೂ ಕೂಡ ರೇಷನ್ ಅಕ್ಕಿ ಇರುವ ಮಾಹಿತಿ ಸಿಕ್ಕರೆ ದಿಢೀರ್ ದಾಳಿ ನಡೆಸುವ ಅಧಿಕಾರವಿದೆ ಎಂದರು.

ಇನ್ಮುಂದೆ ರಾಜ್ಯದ ಎಲ್ಲಾ ಪಡಿತರ ಅಂಗಡಿಗಳಲ್ಲಿ 10ನೇ ತಾರೀಖಿನಂದು ಪಡಿತರ ಬಿಡುಗಡೆಗೊಳಿಸಲಾಗುವುದು. ರಾಜ್ಯದಲ್ಲಿ ಒಟ್ಟು ಒಂದು ಕೋಟಿ 25 ಲಕ್ಷದ 95,000 ಅಂತ್ಯೋದಯ ಕಾರ್ಡುಗಳಿದ್ದು ನಾಲ್ಕು ಕೋಟಿ 50 ಲಕ್ಷ ಜನರಿಗೆ ಪ್ರಯೋಜನ ಸಿಗುತ್ತಿದೆ ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 3,81000 ಕಾರ್ಡ್‌ಗಳಿದ್ದು 17 ಲಕ್ಷ ಗ್ರಾಹಕರಿದ್ದಾರೆ ಸಕಾಲಕ್ಕೆ ಪಡಿತರ ನೀಡುತ್ತಿದ್ದೇವೆ. ಪಡಿತರ ಕಿಟ್ ನೀಡಲು ಕೂಡ ಕಾನೂನು ಪ್ರಕಾರ ಟೆಂಡರ್ ಮಾಡುತ್ತೇವೆ. ಜಿಲ್ಲೆಯಲ್ಲಿ 6,200 ಬಿಪಿಎಲ್ ಕಾರ್ಡ್‌ಗಳು ಅನರ್ಹಗೊಂಡಿದೆ. ಅವರಿಗೂ ಎಪಿಎಲ್ ಕಾರ್ಡ್ ನೀಡಲಾಗುವುದು ಎಂದರು.

ಒಟ್ಟು ರಾಜ್ಯದಲ್ಲಿ ಕೇಂದ್ರ ಸರ್ಕಾರದ ನಿಯಮ ವಳಿಗಳಂತೆ 15 ಶೇಕಡ ಬಿಪಿಎಲ್ ಕಾರ್ಡ್‌ಗಳು ಅನರ್ಹಗೊಂಡಿವೆ. ನಿರ್ಗತಿಕರಿಗೆ ಕೂಡ ಅನ್ನ ಸುವಿದ ಯೋಜನೆ ಅಡಿ ಆಹಾರ ನೀಡಲಾಗುತ್ತಿದ್ದು ಜಿಲ್ಲೆಯಲ್ಲಿ 200 ಜನರಿಗೆ ನೀಡಲಾಗುತ್ತಿದೆ ಎಂದರು. ಒನ್ ರೇಷನ್ ಒನ್ ಕಾರ್ಡ್ ಯೋಜನೆ ಅಡಿ ಬೇರೆ ರಾಜ್ಯಗಳಿಂದ ಬಂದ ಕಾರ್ಮಿಕರು ಮತ್ತು ನಾಗರಿಕರಿಗೆ ಕೂಡ ತಕ್ಷಣ ರೇಷನ್ ಕಾರ್ಡ್ ನೀಡಲಾಗುತ್ತದೆ ಎಂದರು.

ಈ ಬಗ್ಗೆ ಅಧಿಕಾರಿಗಳಲ್ಲಿ ಗೊಂದಲವಿದೆ ಕಾರ್ಡು ನೀಡುವುದಿಲ್ಲ ನಿರಾಕರಿಸುತ್ತಾರೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು ಅಂತವರಿಗೆ ಕೂಡಲೇ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರವೇ ಬಿಪಿಎಲ್ ಕಾರ್ಡ್‌ಗಳು ರದ್ದಾಗಿದೆ. ಅರ್ಹರು ಆತಂಕ ಪಡುವುದು ಬೇಡ ಎಂದರು.

ನವೆಂಬರ್ ಕ್ರಾಂತಿ ಮತ್ತು ಸಂಪುಟ ವಿಸ್ತರಣೆಯ ಬಗ್ಗೆ ಕೇಳಿದ ಪ್ರಶ್ನೆಗೆ, “ನಾನು ಉತ್ತರ ಕೊಡಲಾರೆ ನನ್ನಿಂದ ಬಾಯಿ ಬಿಡಿಸಬೇಡಿ ಯಾವುದೇ ಕಾರಣಕ್ಕೂ ನಾನು ಈ ಪ್ರಶ್ನೆಗೆ ಉತ್ತರಿಸುವುದಿಲ್ಲ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಕಾದು ನೋಡಿ” ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಎಸ್ ಸಿ ವಿಭಾಗದ ಮುಖಂಡರು, ಆಹಾರ ಮತ್ತು ತೂಕ ಅಳತೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Comment