CHIKKAMAGALURU ; ಇಲ್ಲಿಯ ಜಿಲ್ಲಾಸ್ಪತ್ರೆಯ ಕರ್ತವ್ಯನಿರತ ವೈದ್ಯರ ಮೇಲೆ ಮಹಿಳೆಯೊಬ್ಬರು ಚಪ್ಪಲಿ ಎಸೆದು ಅವರನ್ನು ಎಳೆದಾಡಿದ್ದು, ವೈದ್ಯರು ಮತ್ತು ಸಿಬ್ಬಂದಿ ಹೊರ ರೋಗಿ ವಿಭಾಗ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಹಲ್ಲೆ ನಡೆಸಿದ ಆರೋಪದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದರು.
ಗಲಾಟೆಯೊಂದರಲ್ಲಿ ಗಾಯಗೊಂಡಿದ್ದ ಇರ್ಫಾನ್ ಎಂಬುವರು ಅರಳುಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ಬಂದಿದ್ದರು. ತುರ್ತು ಚಿಕಿತ್ಸಾ ವಿಭಾಗದಲ್ಲಿದ್ದ ಮೂಳೆ ತಜ್ಞ ಬಿ.ಎಸ್. ವೆಂಕಟೇಶ್ ಅವರು ತಪಾಸಣೆ ನಡೆಸಿ ಚಿಕಿತ್ಸೆ ನೀಡುತ್ತಿದ್ದರು. ಈ ವೇಳೆ ಗಾಯಾಳು ಕಡೆಯವರು ಒಟ್ಟಿಗೇ ಒಳಗೆ ಬಂದಿದ್ದು, ಹೊರ ಹೋಗುವಂತೆ ವೈದ್ಯರು ತಿಳಿಸಿದಾಗ ಮಾತಿಗೆ ಮಾತು ಬೆಳೆದಿದೆ. ಕುಪಿತಗೊಂಡ ಗಾಯಾಳು ಸಂಬಂಧಿ ತಸ್ಲಿಮಾ ವೈದ್ಯರ ಕೊರಳ ಪಟ್ಟಿ ಹಿಡಿದು ಎಳೆದಿದ್ದಾರೆ. ಅಲ್ಲದೆ ಚಪ್ಪಲಿ ಬಿಚ್ಚಿ ಎಸೆದಿದ್ದಾರೆ ಎಂದು ಅಲ್ಲಿದ್ದವರು ತಿಳಿಸಿದ್ದಾರೆ.
ಅಲ್ಲೇ ಇದ್ದ ಕೆಲವರು ಈ ಘಟನೆಯನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕೂಡಲೇ ಹೊರರೋಗಿ ವಿಭಾಗ ಬಂದ್ ಮಾಡಿದ ವೈದ್ಯರು ಮತ್ತು ಸಿಬ್ಬಂದಿ, ಜಿಲ್ಲಾ ಶಸ್ತ್ರಚಿಕಿತ್ಸಕರ ಕಚೇರಿ ಎದುರು ಜಮಾಯಿಸಿದರು. ವೈದ್ಯರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಇಲ್ಲದೆ ತಪಾಸಣೆಗೆ ಬಂದಿದ್ದ ರೋಗಿಗಳು ಪರದಾಡಿದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೃಷ್ಣಮೂರ್ತಿ, ಉಪವಿಭಾಗಾಧಿಕಾರಿ ದಲ್ಜೀತ್‌ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥಬಾಬು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮೋಹನ್‌ಕುಮಾರ್ ಪ್ರತಿಭಟನಕಾರರ ಮನವೊಲಿಸಲು ಪ್ರಯತ್ನಿಸಿದರು.
ಪ್ರಕರಣ ದಾಖಲಾಗಿ ಆರೋಪಿಗಳನ್ನು ಬಂಧಿಸುವ ತನಕ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ವೈದ್ಯಕೀಯ ಸಿಬ್ಬಂದಿ ಪಟ್ಟು ಹಿಡಿದರು. ಎಲ್ಲರೂ ನಗರ ಠಾಣೆವರೆಗೆ ಮೆರವಣಿಗೆಯಲ್ಲಿ ಸಾಗಿ ದೂರು ಸಲ್ಲಿಸಿದರು. ಠಾಣೆ ಬಳಿ ಜಮಾಯಿಸಿದ ಬಜರಂಗದಳ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿದರು. ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು, ತಸ್ಲಿಮಾ, ಇರ್ಫಾನ್ ಅವರನ್ನು ಬಂಧಿಸಿದ್ದಾರೆ.
ತಸ್ಲಿಮಾ ಅವರು ಮಹಿಳಾ ಠಾಣೆಗೆ ದೂರು ನೀಡಿದ್ದು, ಡಾ.ವೆಂಕಟೇಶ್ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮಹಿಳಾ ಠಾಣೆ ಎದುರು ಮುಸ್ಲಿಂ ಮುಖಂಡರು ಜಮಾಯಿಸಿದ್ದರು. ಡಾ. ವೆಂಕಟೇಶ್ ವಿರುದ್ಧ ಪೊಲೀಸರು ಗುರುತರವಲ್ಲದ ಅಪರಾಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.