ಹೊಸನಗರ: ಕಸ್ತೂರಿ ರಂಗನ್ ವರದಿ ಜಾರಿಯನ್ನು ವಿರೋಧಿಸಿ ಪಶ್ಚಿಮಘಟ್ಟ ರೈತ ಸಹಕಾರಿ ವೇದಿಕೆ ವತಿಯಿಂದ ಹೊಸನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಮಲೆನಾಡು ರೈತರ ಬದುಕು, ಕೃಷಿ ಭೂಮಿ ಮತ್ತು ಜನವಸತಿ ಪ್ರದೇಶಗಳ ಮೇಲೆ ವರದಿಯ ಪರಿಣಾಮದ ಬಗ್ಗೆ ಪ್ರತಿಭಟನೆಯಲ್ಲಿ ತೀವ್ರ ಆತಂಕ ವ್ಯಕ್ತವಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಕಸ್ತೂರಿ ರಂಗನ್ ವರದಿ ಜಾರಿಯನ್ನು ತಡೆಯಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು, ಎಲ್ಲಾ ಜನಪ್ರತಿನಿಧಿಗಳು ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದರು.

ಶಿವಮೊಗ್ಗ ಜಿಲ್ಲೆಯ ವಾಸ್ತವ ಸ್ಥಿತಿಯನ್ನು ಸರಿಯಾದ ದಾಖಲೆಗಳೊಂದಿಗೆ ನ್ಯಾಯಾಲಯ ಹಾಗೂ ಹಸಿರು ಪೀಠದ ಮುಂದೆ ಮಂಡಿಸುವ ಅಗತ್ಯವಿದೆ. ಒಂದು ಗ್ರಾಮದಲ್ಲಿ ಶೇ.20ರಷ್ಟು ಅರಣ್ಯವಿದೆ ಎಂಬ ಕಾರಣಕ್ಕೆ ಇಡೀ ಗ್ರಾಮವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಲೇಖನವನ್ನು ಮುಂದುವರಿಸಿ ಓದಿ
ಶಿವಮೊಗ್ಗ ಜಿಲ್ಲೆಯ ಭೌಗೋಳಿಕ ಪರಿಸ್ಥಿತಿ, ಅರಣ್ಯ ಪ್ರದೇಶ, ಕೃಷಿ ಭೂಮಿ, ಜನವಸತಿ ಪ್ರದೇಶ ಮತ್ತು ತೋಟಗಾರಿಕೆ ಬದುಕಿನ ನೈಜ ಚಿತ್ರಣವನ್ನು ಸ್ಪಷ್ಟವಾಗಿ ದಾಖಲಿಸಬೇಕು. ಮಲೆನಾಡಿನ ಜನರ ಜೀವನೋಪಾಯಕ್ಕೆ ಧಕ್ಕೆಯಾಗದಂತೆ ವರದಿ ಕುರಿತು ಸೂಕ್ತ ತಿದ್ದುಪಡಿ ಆಗಬೇಕು ಎಂದು ರಾಘವೇಂದ್ರ ಹೇಳಿದರು.
ಪಶ್ಚಿಮಘಟ್ಟ ರೈತ ಸಹಕಾರಿ ವೇದಿಕೆಯ ಅಧ್ಯಕ್ಷ ಡಾ. ಆರ್.ಎಂ. ಮಂಜುನಾಥಗೌಡ ಮಾತನಾಡಿ, ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ರೈತರು ನಿರ್ಣಾಯಕ ಹಂತದಲ್ಲಿದ್ದಾರೆ. ಇದು ಮಲೆನಾಡು ರೈತರ ಅಳಿವು–ಉಳಿವಿನ ಪ್ರಶ್ನೆಯಾಗಿದೆ ಎಂದು ಹೇಳಿದರು.
ಈಗಾಗಲೇ ಮಲೆನಾಡಿನ ಜನರು ಮುಳುಗಡೆ ಸಮಸ್ಯೆ, ಹಕ್ಕುಪತ್ರ ಸಮಸ್ಯೆ, ಬಗರ್ ಹುಕುಂ ಜಮೀನು ಸೇರಿದಂತೆ ಹಲವು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಇಡೀ ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಗುರುತಿಸಿದರೆ ರೈತರು ಬದುಕು ಕಟ್ಟಿಕೊಳ್ಳುವುದು ಕಷ್ಟವಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ವರದಿ ತಯಾರಿಸುವ ಸಂದರ್ಭದಲ್ಲಿ ಸ್ಥಳಮಟ್ಟದ ಭೌತಿಕ ಸರ್ವೆ ನಡೆದಿಲ್ಲ. ಗ್ರಾಮಸಭೆಗಳಲ್ಲಿ ಸ್ಥಳೀಯರ ಅಭಿಪ್ರಾಯ ಪಡೆಯದೆ, ವಾಸ್ತವ ಸ್ಥಿತಿಗತಿಗಳನ್ನು ಅರಿಯದೆ ವರದಿ ರೂಪಿಸಿರುವುದು ಅವೈಜ್ಞಾನಿಕವಾಗಿದೆ ಎಂದು ಮಂಜುನಾಥಗೌಡ ಟೀಕಿಸಿದರು.
ವೇದಿಕೆಯ ಸಂಚಾಲಕ ವಾಟಗೋಡು ಸುರೇಶ್ ಮಾತನಾಡಿ, ಕಳೆದ ಒಂದು ದಶಕದಿಂದ ಮಲೆನಾಡಿನ ಜನರು ಈ ವರದಿ ಭೀತಿಯಲ್ಲಿ ಬದುಕುತ್ತಿದ್ದಾರೆ. ಜನಪ್ರತಿನಿಧಿಗಳು ಈ ವಿಚಾರದಲ್ಲಿ ತಮ್ಮ ನಿಲುವು ಮತ್ತು ಮುಂದಿನ ಕ್ರಮಗಳನ್ನು ಜನರ ಮುಂದೆ ಸ್ಪಷ್ಟವಾಗಿ ಹೇಳಬೇಕು ಎಂದು ಒತ್ತಾಯಿಸಿದರು.
ಸಂಚಾಲಕ ಬಿ.ಆರ್. ಜಯಂತ್ ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿಯಾದರೆ ಹಳ್ಳಿಗಳ ಮೇಲೆ ಕಠಿಣ ನಿರ್ಬಂಧ ಬರುವ ಆತಂಕವಿದೆ. ಮನೆ, ರಸ್ತೆ, ತೋಟ, ಕೃಷಿ ಮತ್ತು ಮೂಲಸೌಕರ್ಯಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹೇಳಿದರು.
ವಿಜ್ಞಾನಿ ಪ್ರಕಾಶ್ ಕಮ್ಮರಡಿ ಮಾತನಾಡಿ, ಹಳೆಯ ವರದಿಯನ್ನು ಇಂದಿನ ಪರಿಸ್ಥಿತಿಗೆ ಹೋಲಿಕೆ ಮಾಡದೆ ಜಾರಿಗೊಳಿಸುವುದು ಸರಿಯಲ್ಲ. ಹೆಚ್ಚಿನ ತಜ್ಞರ ಅಭಿಪ್ರಾಯ, ಹೊಸ ಸರ್ವೆ ಮತ್ತು ಸ್ಥಳೀಯರ ಅಭಿಪ್ರಾಯದ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಈ ವಿಚಾರದಲ್ಲಿ ಪಕ್ಷಾತೀತ ಹೋರಾಟ ಅಗತ್ಯವಿದೆ. ಮಲೆನಾಡಿನ ಜನರ ಬದುಕಿಗೆ ಧಕ್ಕೆಯಾಗುವ ನಿರ್ಧಾರಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.
ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ರೈತರ ಸಂಕಷ್ಟಗಳನ್ನು ಸರ್ಕಾರದ ಮಟ್ಟದಲ್ಲಿ ಪ್ರಸ್ತಾಪಿಸಲಾಗುವುದು. ಕಂದಾಯ ಮತ್ತು ಅರಣ್ಯ ಭೂಮಿಯ ಜಂಟಿ ಸರ್ವೆ ಮೊದಲು ನಡೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ವೀರೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಕಸ್ತೂರಿ ರಂಗನ್ ವರದಿಗೆ ಆಕ್ಷೇಪಣೆ ಸಲ್ಲಿಸಲು ರೈತರು, ಸಾರ್ವಜನಿಕರು ಮತ್ತು ಸಂಘಟನೆಗಳು ಮುಂದಾಗಬೇಕು ಎಂದು ವೇದಿಕೆ ಕರೆ ನೀಡಿತು.
ಪ್ರತಿಭಟನೆಯಲ್ಲಿ ಮಾಜಿ ಸಂಸದ ಆಯನೂರು ಮಂಜುನಾಥ್, ಮಾಜಿ ಶಾಸಕ ಬಿ. ಸ್ವಾಮಿರಾವ್, ಶಿಮುಲ್ ಅಧ್ಯಕ್ಷ ಗುರುಶಕ್ತಿ ವಿದ್ಯಾಧರ್, ಕಲಗೋಡು ರತ್ನಾಕರ್, ಸುಮಾ ಸುಬ್ರಮಣ್ಯ, ಡಿ.ಆರ್. ವಿನಯ್, ಶ್ವೇತಾ ಬಂಡಿ, ಎಂ.ಎಂ. ಪರಮೇಶ್, ಮಾಸ್ತಿಕಟ್ಟೆ ಸುಬ್ರಮಣ್ಯ, ಪೂರ್ಣೇಶ್, ಮುರಳೀಧರ, ಎನ್.ಆರ್. ದೇವಾನಂದ, ಬಿ.ಜಿ. ಚಂದ್ರಮೌಳಿ, ಪ್ರಶಾಂತ್ ಶಿವಪ್ಪ ಸೇರಿದಂತೆ ಹಲವು ಮುಖಂಡರು ಮತ್ತು ರೈತರು ಭಾಗವಹಿಸಿದ್ದರು.

