ಹೊಸನಗರ: ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು ಗುರುತಿಸುವ ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಯಥಾವತ್ತಾಗಿ ಜಾರಿಗೊಳಿಸಬಾರದು ಎಂದು ಆಗ್ರಹಿಸಿ ಶಿವಮೊಗ್ಗ ಜಿಲ್ಲೆಯ ಸಹಕಾರಿ ಒಕ್ಕೂಟಗಳ ನೇತೃತ್ವದಲ್ಲಿ ಹೊಸನಗರದಲ್ಲಿ ಬೃಹತ್ ಪಾದಯಾತ್ರೆ ನಡೆಯಿತು.
ಹೊಸನಗರ ತಾಲೂಕಿನ ಐತಿಹಾಸಿಕ ಕಾರಣಗಿರಿ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಪಾದಯಾತ್ರೆ, ಹೊಸನಗರ ತಾಲೂಕು ಕೇಂದ್ರದವರೆಗೆ ಸಾಗಿತು. ಈ ಜಾಗೃತಿ ಜಾಥಾದಲ್ಲಿ ಹೊಸನಗರ ಹಾಗೂ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶಗಳ ರೈತರು, ಕೃಷಿಕರು, ಸಹಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ಕಸ್ತೂರಿ ರಂಗನ್ ವರದಿ ಜಾರಿಯಾದರೆ ಮಲೆನಾಡಿನ ರೈತರು, ಕೃಷಿ ಚಟುವಟಿಕೆಗಳು ಮತ್ತು ಸಾಮಾನ್ಯ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.
ಲೇಖನವನ್ನು ಮುಂದುವರಿಸಿ ಓದಿ
ಪಾದಯಾತ್ರೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ರೈತರೊಂದಿಗೆ ಹೆಜ್ಜೆ ಹಾಕಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಶಿವಮೊಗ್ಗ ಜಿಲ್ಲೆಯ ನೂರಾರು ಹಳ್ಳಿಗಳು ಈ ವರದಿ ವ್ಯಾಪ್ತಿಗೆ ಬರಲಿವೆ. ಇದರಿಂದ ಜನವಸತಿ ಪ್ರದೇಶಗಳು, ಕೃಷಿ ಭೂಮಿ, ಮನೆ ನಿರ್ಮಾಣ, ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಮೇಲೆ ಅನಗತ್ಯ ನಿರ್ಬಂಧಗಳು ಬರುವ ಆತಂಕವಿದೆ ಎಂದು ಹೋರಾಟಗಾರರು ಹೇಳಿದರು.

ಶಿವಮೊಗ್ಗ ಜಿಲ್ಲೆಯ ಸುಮಾರು 447 ಗ್ರಾಮಗಳ ಜನರ ಮೇಲೆ ಕಸ್ತೂರಿ ರಂಗನ್ ವರದಿ ತೂಗುಗತ್ತಿಯಂತೆ ಪರಿಣಮಿಸಿದೆ. ವರದಿಯನ್ನು ಜಾರಿಗೆ ತರುವ ಮುನ್ನ ಸ್ಥಳೀಯ ಜನರ ಅಭಿಪ್ರಾಯ, ಕೃಷಿ ಪರಿಸ್ಥಿತಿ ಮತ್ತು ಮಲೆನಾಡಿನ ವಾಸ್ತವ ಜೀವನವನ್ನು ಗಮನಿಸಬೇಕು ಎಂದು ಅವರು ಒತ್ತಾಯಿಸಿದರು.
ಕಸ್ತೂರಿ ರಂಗನ್ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವುದಕ್ಕೆ ಬದಲು, ಕೇರಳ ಮಾದರಿಯಲ್ಲಿ ಜನವಸತಿ ಪ್ರದೇಶಗಳು ಮತ್ತು ಕೃಷಿ ಭೂಮಿಯನ್ನು ಹೊರಗಿಟ್ಟು ಮಾರ್ಪಾಡು ಮಾಡಬೇಕು ಎಂಬ ಬೇಡಿಕೆ ಪಾದಯಾತ್ರೆಯಲ್ಲಿ ಕೇಳಿಬಂದಿತು.
ಮಲೆನಾಡಿನ ರೈತರು ಹಾಗೂ ಸ್ಥಳೀಯರ ಬದುಕಿಗೆ ಧಕ್ಕೆಯಾಗುವ ಯಾವುದೇ ನಿರ್ಧಾರವನ್ನು ಒಪ್ಪಲು ಸಾಧ್ಯವಿಲ್ಲ. ವರದಿಯಲ್ಲಿ ಸೂಕ್ತ ತಿದ್ದುಪಡಿ ಆಗುವವರೆಗೆ ಜನಪರ ಹೋರಾಟ ಮುಂದುವರಿಯಲಿದೆ ಎಂದು ಪಾದಯಾತ್ರೆ ನೇತೃತ್ವ ವಹಿಸಿದ್ದ ಮುಖಂಡರು ಎಚ್ಚರಿಕೆ ನೀಡಿದರು.

