ರಿಪ್ಪನ್‌ಪೇಟೆ : ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನೆ ಕ್ರೀಡಾಪಟುಗಳಲ್ಲಿ ಮುಖ್ಯವಾಗದೆ. ಕ್ರೀಡೆ ಕೇವಲ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲದೆ ಓದಿನ ಏಕಾಗ್ರತೆಗೂ ಮಾನಸಿಕವಾದ ಆರೋಗ್ಯಕ್ಕೂ ಪೂರಕವಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಗಣೇಶ್ ಹೇಳಿದರು.
ರಿಪ್ಪನ್‌ಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜ್‌ನ ಚಿನ್ನೇಗೌಡ ಕ್ರೀಡಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿ ಶಾಲಾ ಶಿಕ್ಷಣ ಇಲಾಖೆ ಹೊಸನಗರ ಹಾಗೂ ಅರಸಾಳು, ಕೆಂಚನಾಲ, ರಿಪ್ಪನ್‌ಪೇಟೆ, ಬೆಳ್ಳೂರು, ಬಾಳೂರು, ಚಿಕ್ಕಜೇನಿ, ಕೋಡೂರು, ಪುರಪ್ಪೆಮನೆ, ಹರತಾಳು, ಹರಿದ್ರಾವತಿ ಸಮೂಹ ಸಂನ್ಮೂಲ ಕೇಂದ್ರ ಅರಸಾಳು ಇವರ ಸಂಯುಕ್ತಾಶ್ರಯದಲ್ಲಿ 2026-27ನೇ ಸಾಲಿನ ಕೆರೆಹಳ್ಳಿ ಹೋಬಳಿ ವಲಯ ಮಟ್ಟದ 14 ವರ್ಷ ವಯೋಮಿತಿಯೊಳಗಿನ ಬಾಲಕ/ಬಾಲಕಿಯರ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾಭ್ಯಾಸದೊಂದಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳ ಸದಾ ಕ್ರಿಯಾಶೀಲವಾಗಿ ಆರೋಗ್ಯ ಪೂರ್ಣ ವ್ಯಕ್ತಿತ್ವವನ್ನು ರೂಪಿಸುತ್ತದೆಂದರು.
ದೈಹಿಕ ಶಿಕ್ಷಣಾಧಿಕಾರಿ ಚಂದ್ರಕಾಂತ ಕ್ರೀಡಾಕೂಟ ಸಮಾರಂಭವನ್ನು ಉದ್ಘಾಟಿಸಿ ಕ್ರೀಡೆ ದೋಷ ಭಾವನೆಯನ್ನು ದೂರಮಾಡಿ ಸ್ನೇಹವನ್ನು ಬೆಳಸುವ ಸಾಧನವಾಗಿದೆ ಎಂದರು.
ಲೇಖನವನ್ನು ಮುಂದುವರಿಸಿ ಓದಿ
ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿ ರಂಗನಾಥ, ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸೋಮಣ್ಣ ಬಂಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ, ಕಾರ್ಯದರ್ಶಿ ಶಿವಪ್ಪ ಹೆಚ್.ಸಿ, ಸರ್ಕಾರಿ ನೌಕರ ಸಂಘದ ಖಜಾಂಚಿ ಜಗದೀಶ ಕಾಗಿನಲ್ಲಿ, ಸರ್ಕಾರಿ ನೌಕರ ಸಂಘದ ನಿರ್ದೇಶಕ ಶಿವಮೂರ್ತಿ, ಅರಸಾಳು ಕ್ಲಸ್ಟರ್ ಸಿ.ಆರ್.ಪಿ ನಾಗರಾಜ, ರಿಪ್ಪನ್‌ಪೇಟೆ ಕ್ಲಸ್ಟರ್ ಸಿ.ಆರ್.ಪಿ. ಮಂಜುನಾಥ, ಉದಯಕುಮಾರ್, ಉಮೇಶ್, ಮಹೇಶ್ ಹುಳಿಗದ್ದೆ, ಇನ್ನಿತರರು ಪಾಲ್ಗೊಂಡಿದ್ದರು.
ಸಿ.ಆರ್.ಪಿ.ನಾಗರಾಜ್ ಸ್ವಾಗತಿಸಿದರು. ಮಂಜುನಾಥ ನಿರೂಪಿಸಿ, ವಂದಿಸಿದರು.

