ಹೊಸನಗರ : ಲಕ್ಷಾಂತರ ರೂಪಾಯಿ ವ್ಯಯಿಸಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿರುವ ಪೋಷಕರ ಬಿಪಿಎಲ್ (ಹಸಿರು) ಕಾರ್ಡ್‌ಗಳನ್ನು ರದ್ದುಗೊಳಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಎಂದು ಆಗ್ರಹಿಸಿ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಯುವಕನೊಬ್ಬ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಹೊಸನಗರ ತಾಲೂಕಿನ ಪುಣಜೆ ಗ್ರಾಮದ ಬ್ರಹ್ಮೇಶ್ವರದ ಚಿಕ್ಕಮಣತಿ ನಿವಾಸಿ ರೋಹಿತ್.ಸಿ ಎಂಬ ಯುವಕ ಈ ಕುರಿತು ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ.
ಯುವಕ ಬರೆದ ಪತ್ರದಲ್ಲೇನಿದೆ ?
ಖಾಸಗಿ ಶಾಲೆಯ ವ್ಯಾಮೋಹ:
ಇತ್ತೀಚಿನ ದಿನಗಳಲ್ಲಿ ಆಂಗ್ಲ ಮಾಧ್ಯಮದ ಹುಚ್ಚಾಸೆಯಿಂದಾಗಿ ಪೋಷಕರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಇವರಲ್ಲಿ ಬಿಪಿಎಲ್ ಸೌಲಭ್ಯ ಪಡೆಯುತ್ತಿರುವವರೂ ಇದ್ದಾರೆ.
ಬಿಪಿಎಲ್ ರದ್ದತಿ ಎಚ್ಚರಿಕೆ:
ಬಿಪಿಎಲ್ ಕಾರ್ಡ್ ಹೊಂದಿರುವ ವ್ಯಕ್ತಿಗಳು ಕಡ್ಡಾಯವಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲೇ ಓದಿಸಬೇಕು. ಒಂದು ವೇಳೆ ಖಾಸಗಿ ಶಾಲೆಗೆ ಸೇರಿಸಿದರೆ, ಅಂಥವರ ಬಿಪಿಎಲ್ ಕಾರ್ಡ್ ರದ್ದು ಮಾಡುವ ಆದೇಶವನ್ನು ಸರ್ಕಾರ ಹೊರಡಿಸಬೇಕು. ಈ ಕಟ್ಟುನಿಟ್ಟಿನ ಕ್ರಮದಿಂದ ಮಾತ್ರ ಸರ್ಕಾರಿ ಶಾಲೆಗಳನ್ನು ಸಂರಕ್ಷಿಸಲು ಸಾಧ್ಯ.
ಜ್ಞಾನಪೀಠ ಪುರಸ್ಕೃತರ ಆಶಯ:
ಸರ್ಕಾರಿ ಶಾಲೆಯಲ್ಲಿಯೇ ವಿದ್ಯಾಭ್ಯಾಸ ಮಾಡಿ ರಾಜ್ಯಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ತಂದುಕೊಟ್ಟ ಮಹನೀಯರ ಆಶಯವನ್ನು ಈ ಮೂಲಕ ಕಾಪಾಡಬೇಕಿದೆ. ಸರ್ಕಾರಿ ಶಾಲೆಗಳು ಸರ್ಕಾರದ ಪವಿತ್ರ ಆಸ್ತಿಯಾಗಿದ್ದು, ಅವುಗಳ ಸಂರಕ್ಷಣೆ ಸರ್ಕಾರದ ಮುಖ್ಯ ಕರ್ತವ್ಯವಾಗಿದೆ.
ಸರ್ಕಾರಿ ಶಾಲೆಯಲ್ಲೇ ಆಂಗ್ಲ ಮಾಧ್ಯಮ:
ಖಾಸಗಿ ಶಾಲೆಗಳ ಒತ್ತಡಕ್ಕೆ ಮಣಿಯದೆ, ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲ ಮಾಧ್ಯಮ ಶಿಕ್ಷಣವನ್ನೂ ಆರಂಭಿಸಬೇಕು. ಇದಕ್ಕಾಗಿ ಉತ್ತಮ ತರಬೇತಿ ಹೊಂದಿದ ಶಿಕ್ಷಕರನ್ನು ನೇಮಿಸಿ ಶಾಲೆಗಳನ್ನು ಬಲಪಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಸರ್ಕಾರಿ ಶಾಲೆಗಳ ಉಳಿವಿಗಾಗಿ ರೋಹಿತ್ ಅವರು ವ್ಯಕ್ತಪಡಿಸಿರುವ ಈ ಕಾಳಜಿ ಹಾಗೂ ಕಠಿಣ ಕ್ರಮದ ಬೇಡಿಕೆಯು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಬಿಪಿಎಲ್ ಕಾರ್ಡ್‌ದಾರರಿಗೆ ಸರ್ಕಾರಿ ಶಾಲೆಯನ್ನು ಕಡ್ಡಾಯಗೊಳಿಸುವ ಈ ವಿನೂತನ ಪ್ರಸ್ತಾವನೆಗೆ ಸರ್ಕಾರ ಯಾವ ರೀತಿಯ ಸಕಾರಾತ್ಮಕ ಸ್ಪಂದನೆ ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.

