ರಿಪ್ಪನ್‌ಪೇಟೆ ; ಶಾಂತಿ ಸೌಹಾರ್ದತೆಯ ಸಂಕೇತವಾದ ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿ ಠಾಣಾ ವ್ಯಾಪ್ತಿಯಲ್ಲಿ ಶಾಂತಿ ಕಾಪಾಡುವಂತೆ ರಿಪ್ಪನ್‌ಪೇಟೆ ಠಾಣೆಯ ಪಿಎಸ್‌ಐ ಪ್ರವೀಣ್ ಎಸ್.ಪಿ. ಮುಸ್ಲಿಂ ಮುಖಂಡರಲ್ಲಿ ಮನವಿ ಮಾಡಿದರು.
ಇದೇ 7 ರಂದು ಶನಿವಾರ ನಡೆಯುವ ಬಕ್ರೀದ್ ಹಬ್ಬದ ಅಂಗವಾಗಿ ಠಾಣೆಯಲ್ಲಿ ಪೊಲೀಸ್ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಲ್ಲಿನ ಮುಸ್ಲಿಂ ಮತ್ತು ಹಿಂದೂ ಸಹೋದರ ಭಾವದಿಂದ ಜೀವನ ನಡೆಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆದಿರುವ ನಿರ್ದೇಶನಗಳಿಲ್ಲ. ಹಿಂದೂ ಮುಸ್ಲಿಂ ಜನಾಂಗದವರು ತಮ್ಮ ತಮ್ಮ ಧರ್ಮದ ಹಬ್ಬಗಳಲ್ಲಿ ಸೌಹಾರ್ದತೆಯೊಂದಿಗೆ ಭಾವೈಕ್ಯತೆಯಿಂದ ನಡೆದುಕೊಳ್ಳುತ್ತಿರುವುದಕ್ಕೆ ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾ ಗಣೇಶೋತ್ಸವ ಮತ್ತು ರಂಜಾನ್ ಹಾಗೂ ಬಕ್ರೀದ್ ಹಬ್ಬಗಳಲ್ಲಿ ಎರಡು ಜನಾಂಗದವರು ಪರಸ್ಪರ ಸಮ್ಮೀಲನ ಮಾಡಿಕೊಂಡು ಇರುವುದು ಸಾಕ್ಷಿಯಾಗಿದೆ ಎಂದ ಅವರು ಹಬ್ಬದ ದಿನ ಆಚರಣೆಗಳ ವೇಳೆ ನಿಯಮಗಳನ್ನು ಪಾಲಿಸಬೇಕು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸಮುದಾಯದ ಜನರಿಗೆ ನೋವುಂಟು ಮಾಡುವ ಪೋಸ್ಟ್ ಗಳನ್ನು ಹರಿಬಿಡುವುದು ಇದು ಕಾನೂನು ಉಲ್ಲಂಘನೆಯಾಗುತ್ತದೆ. ಕಾನೂನು ನಿಯಮಗಳನ್ನು ಮೀರಿನಡೆದರೆ ನಿರ್ದಾಕ್ಷಿಣ್ಯವಾಗಿ ಕಟ್ಟು ನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಮುಸ್ಲಿಂ ಮುಖಂಡ ಆರ್.ಎ.ಚಾಬುಸಾಬ್ ಮಾತನಾಡಿ, ಮುಂಜಾನೆ ಜುಮ್ಮಾಮಸೀದಿಯಿಂದ ಸಾಗರ ರಸ್ತೆಯ ಈದ್ಗಾ ಮೈದಾನಕ್ಕೆ ಮೆರವಣಿಗೆ ತೆರಳಿ ಪ್ರಾರ್ಥನೆಗಾಗಿ ಶಾಂತಿಯಿಂದ ಹಬ್ಬವನ್ನು ಆಚರಿಸಲಾಗುವುದು ಎಂದರು.
ಗಾಂಜಾ ಹಾಗೂ ಅಕ್ರಮ ಮದ್ಯ ಮಾರಾಟದಿಂದಾಗಿ ಇಂದಿನ ಯುವಕರು ದಾರಿ ತಪ್ಪುತ್ತಿದ್ದಾರೆಂದು ಪತ್ರಕರ್ತರು ಪ್ರಸ್ತಾಪಿಸಿದಾಗ ಈಗಾಗಲೇ ಗಾಂಜಾ ಸೇವನೆ ಮಾಡಿದವರ ವಿರುದ್ದ ನಾಲ್ಕು ಕೇಸ್ ದಾಖಲಿಸಲಾಗಿದೆ. ಉಳಿದಂತೆ ಎಲ್ಲಿಂದ ಬರುತ್ತದೆ? ಮಾರಾಟ ಮಾಡುವವರು ಯಾರು? ಎಂಬುದರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ ಆವರ ಹೆಸರನ್ನು ಬಹಿರಂಗಗೊಳಿಸದೆ ಗೌಪ್ಯವಾಗಿ ಇಡುವುದರೊಂದಿಗೆ ಗಾಂಜಾ ಮಾರಾಟಕ್ಕೆ ಯಾವುದೇ ಮುಲಾಜು ಇಲ್ಲದೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲು ಹಿಂಜರಿಯುವುದಿಲ್ಲ ಎಂದ ಅವರು, ಅಕ್ರಮ ಮದ್ಯ ಮಾರಾಟದ ಬಗ್ಗೆ ಈಗಾಗಲೇ ಹಲವಾರು ಕೇಸ್ ದಾಖಲಿಸಿರುವುದಾಗಿ ವಿವರಿಸಿದರು.
ಇನ್ನೂ ಶಿವಮೊಗ್ಗ-ಹೊಸನಗರ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಸಾಕಷ್ಟು ಇದೆ ಆ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸಮಸ್ಯೆಯ ಕುರಿತು ಮಾಹಿತಿ ನೀಡಲಾಗಿದೆ ಇನ್ನೂ ಜಿಲ್ಲಾಧಿಕಾರಿಗಳವರ ಆದೇಶ ಬಂದ ತಕ್ಷಣ ಮೊದಲಿನಂತೆ ಒಂದೊಂದು ದಿನ ಒಂದೊಂದು ಕಡೆ ವಾಹನ ನಿಲುಗಡೆ ಮಾಡುವ ಬಗ್ಗೆ ಅಲ್ಲಲ್ಲಿ ನಾಮಫಲಕವನ್ನು ಅಳವಡಿಸಿ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಲ್ಪಿಸುವುದಾಗಿ ತಿಳಿಸಿದರು.
ಮೆಕ್ಕಾ ಮಸೀದಿಯ ಅಧ್ಯಕ್ಷ ಮಹಮದ್‌ರಫಿ, ಅಮ್ಮೀರ್, ನಜೀರ್ ಇನ್ನಿತರ ಮುಸ್ಲಿಂ ಮುಖಂಡರು ಹಾಗೂ ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾ ಸಮಿತಿಯ ಎಂ.ಸುರೇಶಸಿಂಗ್, ವೈ.ಜೆ.ಕೃಷ್ಣ,
ಮುರುಳಿಧರ ಕೆರೆಹಳ್ಳಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎನ್.ವರ್ತೇಶ್, ಸಾಮಾಜಿಕ ಕಾರ್ಯಕರ್ತ ಟಿ.ಆರ್.ಕೃಷ್ಣಪ್ಪ, ನರಸಿಂಹ, ಪಿಯೂಸ್‌ರೋಡ್ರಿಗಸ್, ಶ್ರೀಧರ, ಸಬಾಸ್ಟಿನ್ ಮ್ಯಾಥ್ಯೂಸ್, ಮಹಮದ್ ರಫಿ, ಪೊಲೀಸ್ ಸಿಬ್ಬಂದಿಗಳಾದ ಎಎಸ್‌ಐ ಹಾಲಪ್ಪ, ಪೇದೆಗಳಾದ ಉಮೇಶ, ಪರಮೇಶ, ಸಂತೋಷ, ಯೋಗೀಶ್ ಇನ್ನಿತರರು ಹಾಜರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





