ಹೊಸನಗರ: “ಧರ್ಮಗ್ರಂಥಗಳಲ್ಲಿ ಅಡಗಿರುವ ಮೌಲ್ಯಗಳು ಹಾಗೂ ಉಪದೇಶಗಳು ಪ್ರತಿಯೊಬ್ಬರ ಬದುಕಿಗೆ ದಾರಿದೀಪವಾಗಿವೆ. ಸನಾತನ ಧರ್ಮದ ಈ ಜ್ಞಾನವನ್ನು ಮುನಿಗಳು, ಆರ್ಯಿಕೆಯರು ಹಾಗೂ ಭಟ್ಟಾರಕರು ಇಂದಿಗೂ ಸಮಾಜದಲ್ಲಿ ಜೀವಂತವಾಗಿರಿಸಿದ್ದಾರೆ” ಎಂದು ಹೊಂಬುಜ ಜೈನಮಠದ ಪೀಠಾಧೀಶರಾದ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಅವರು ನುಡಿದರು.
ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ಉತ್ಸವದ ಎರಡನೇ ದಿನದಂದು ಭಕ್ತರನ್ನುದ್ದೇಶಿಸಿ ಅವರು ಆಶೀರ್ವಚನ ನೀಡಿದರು. ಸಮಾಜಕ್ಕೆ ಎದುರಾಗುವ ಕಂಟಕಗಳನ್ನು ಹಾಗೂ ಸಂಕಷ್ಟಗಳನ್ನು ನಿವಾರಿಸುವ ಶಕ್ತಿ ಜೈನಾಗಮದ ತತ್ವಗಳಲ್ಲಿದೆ ಎಂದು ಅವರು ತಿಳಿಸಿದರು.
ವಿಶೇಷ ಪೂಜಾ ಕಾರ್ಯಕ್ರಮಗಳು:
ಕ್ಷೇತ್ರದ ಆರಾಧ್ಯ ದೈವಗಳಾದ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಹಾಗೂ ಶ್ರೀ ಪದ್ಮಾವತಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿಯ ಅಂಗವಾಗಿ ಹೂವು-ಹಣ್ಣುಗಳ ಸಮರ್ಪಣೆ, ಜಿನ ಸ್ತೋತ್ರಗಳ ಪಠಣ ಹಾಗೂ ಷೋಡಶೋಪಚಾರ ಪೂಜೆಗಳು ಭಕ್ತಿಭಾವದಿಂದ ನೆರವೇರಿದವು. ಇದರೊಂದಿಗೆ ಶ್ರೀ ನೇಮಿನಾಥ ಸ್ವಾಮಿ, ಕೂಷ್ಮಾಂಡಿನಿ ದೇವಿ, ಸರಸ್ವತಿ ದೇವಿ, ಮಹಾವೀರ ಸ್ವಾಮಿ, ಆದಿನಾಥ ಸ್ವಾಮಿ, ಕ್ಷೇತ್ರಪಾಲ ಹಾಗೂ ನಾಗದೇವರ ಸನ್ನಿಧಿಯಲ್ಲೂ ಭಕ್ತರು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ವಾದ್ಯಗೋಷ್ಠಿ ಹಾಗೂ ಸಾಮೂಹಿಕ ಭಜನೆಯೊಂದಿಗೆ ಸಂಗೀತ ಪೂಜೆ ಜರುಗಿದ್ದು, ಸ್ಥಳೀಯರು ಹಾಗೂ ಪರವೂರಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ರಾತ್ರಿಯ ವೇಳೆ ಅಷ್ಟಾವಧಾನ ಸೇವೆ, ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ಸಂಪನ್ನಗೊಂಡಿತು.
ಸಂಪ್ರದಾಯದಂತೆ ಶ್ರೀಗಳವರ ಪಟ್ಟದ ಪೀಠವನ್ನು ಸುಂದರವಾಗಿ ಅಲಂಕರಿಸಿ, ಹಿಂದಿನ ಭಟ್ಟಾರಕರುಗಳನ್ನು ಸ್ಮರಿಸಲಾಯಿತು. ವಿಶೇಷ ಮುತ್ತಿನ ಅಲಂಕಾರವು ಈ ಬಾರಿಯ ಆಕರ್ಷಣೆಯಾಗಿತ್ತು. ಕಾರ್ಯಕ್ರಮದಲ್ಲಿ ಸೇವಾಕರ್ತರಾದ ಮೂಡಬಿದಿರೆಯ ಶ್ರೀ ಶ್ರುತಾಂಜನ್ ಅವರ ಕುಟುಂಬದವರನ್ನು ಗೌರವಿಸಲಾಯಿತು. ಕೊನೆಯಲ್ಲಿ ಶ್ರೀಗಳು ನೆರೆದಿದ್ದ ಎಲ್ಲಾ ಭಕ್ತರಿಗೂ ಶ್ರೀಫಲ ಹಾಗೂ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

