ಹೊಸನಗರ : ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಇಲಾಖೆ ಮತ್ತು ತಾಲೂಕು ಕೃಷಿಕ ಸಮಾಜದ ಜಂಟಿ ಆಶ್ರಯದಲ್ಲಿ, ಕೃಷಿಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಿಸಿಕೊಂಡ ರೈತರಿಗೆ ಹಾಗೂ ಆಯ್ದ ಮಹಿಳಾ ಸ್ವಸಹಾಯ ಸಂಘಗಳಿಗೆ ‘ಮತ್ಸ್ಯ ಸಂಜೀವಿನಿ’ ಯೋಜನೆಯಡಿ ಉಚಿತವಾಗಿ ಮೀನುಮರಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎ.ವಿ. ಮಲ್ಲಿಕಾರ್ಜುನ್, ರೈತರು ಕೃಷಿ ಹೊಂಡಗಳನ್ನು ಕೇವಲ ಮಳೆನೀರು ಸಂಗ್ರಹಿಸಲು ಮಾತ್ರ ಬಳಸದೆ, ಅದರಲ್ಲಿ ಮೀನು ಸಾಕಾಣಿಕೆ ಮಾಡುವ ಮೂಲಕ ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೀನುಗಾರಿಕೆ ಮೇಲ್ವಿಚಾರಕಿ ಬಿ.ಎಂ. ಬಸಮ್ಮ, ಕೃಷಿ ಹೊಂಡಗಳಲ್ಲಿ ಮೀನು ಸಾಕುವ ವಿಧಾನಗಳ ಬಗ್ಗೆ ತಾಂತ್ರಿಕ ಮಾಹಿತಿ ಒದಗಿಸಿದರು. ಕೃಷಿಯ ಜೊತೆಗೆ ಮೀನು ಸಾಕಾಣಿಕೆಯನ್ನು ಒಂದು ಉಪಕಸುಬಾಗಿ ಅಳವಡಿಸಿಕೊಂಡರೆ ರೈತರಿಗೆ ಉತ್ತಮ ಹೆಚ್ಚುವರಿ ಆದಾಯ ಲಭ್ಯವಾಗಲಿದೆ ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ಬಿ.ಎಚ್. ವೀರಭದ್ರಪ್ಪ, ಕೃಷಿ ಅಧಿಕಾರಿ ಎಂ.ಎಸ್. ಮಾರುತಿ, ಆತ್ಮ ಯೋಜನೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕ ಎಂ. ವಿಕಾಸ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

