RIPPONPETE ; ಇಲ್ಲಿನ ಪರಿಶಿಷ್ಟ ಜಾತಿ, ಪಂಗಡದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಕ್ಕೆ ಶಿವಮೊಗ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೇಮಂತ್ ಎನ್ ಭೇಟಿ ನೀಡಿ ಪರಿಶೀಲನೆ ನಡೆಸಿ, ವಸತಿ ನಿಲಯದಲ್ಲಿನ ಮಕ್ಕಳಿಗೆ ಗ್ರಂಥಾಲಯದಲ್ಲಿ ಸಣ್ಣ ನೀತಿ ಕಥೆಗಳ ಪುಸ್ತಕ ಹಾಗೂ ಕಂಪ್ಯೂಟರ್ ಅಳವಡಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ರಿಪ್ಪನ್‌ಪೇಟೆಯ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಕ್ಕೆ ಇಂದು ಗುರುವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ವಸತಿ ನಿಲಯದ ಸ್ವಚ್ಚತೆ ಮತ್ತು ಅಡುಗೆ ಕೊಠಡಿ ಹಾಗೂ ಆಹಾರ ದಾಸ್ತಾನು ಸೇರಿದಂತೆ ಶೌಚಾಲಯ ವಿದ್ಯಾರ್ಥಿಗಳ ಕೊಠಡಿಯನ್ನು ವಿಕ್ಷೀಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈಗಾಗಲೇ ಕೊಠಡಿಯ ಸ್ವಚ್ಚತೆಗಾಗಿ ತರಿಸಲಾಗಿರುವ “ಕ್ಲೀನಿಂಗ್ ಪ್ರೆಶರ್ ಪಂಪ್’’ ಪರಿಶೀಲನೆ ನಡೆಸಿ ಇದರಿಂದ ಎಣ್ಣೆ, ಇನ್ನಿತರ ಕೊಳಕು ವಸ್ತುಗಳು ತಕ್ಷಣ ಕರಗಿ ಸ್ವಚ್ಚಗೊಳುವುದೆಂದು ತಿಳಿಸಿ, ಬೇರೆ ಬೇರೆ ವಸತಿ ನಿಲಯಗಳಿಗೂ ಅಳವಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಬರವೆ ಗ್ರಾಮದಲ್ಲಿ ಜೆಜೆಎಂ ಓವರ್‌ಹೆಡ್ ಟ್ಯಾಂಕ್ ಕಾಮಗಾರಿಯನ್ನು ಪರಿಶೀಲನೆ ನಡೆಸುವ ಮೂಲಕ ನೀರು ಸರಬರಾಜು ಕುರಿತು ಸ್ಥಳದಲ್ಲಿ ನೀರು ಎಷ್ಟು ಪ್ರಮಾಣದಲ್ಲಿ ಹರಿದು ಬರುವುದೆಂಬ ಬಗ್ಗೆ ಖುದ್ದಾಗಿ ಪರಿಶೀಲಿಸಿದರು. ಅಲ್ಲದೆ ನರೇಗಾ ಕಾಮಗಾರಿಯ ಬಗ್ಗೆ ಗ್ರಾಮಾಡಳಿತದವರ ಬಳಿ ಚರ್ಚಿಸಿ ಇನ್ನೂ ಮೂರು ನಾಲ್ಕು ತಿಂಗಳಲ್ಲಿ ಗೊಬ್ಬರ ಗುಂಡಿ ಇನ್ನಿತರ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚಿಸಿದಾಗ ವೈಯಕ್ತಿಕವಾಗಿ ಗೊಬ್ಬರಗುಂಡಿ ಮಾಡಿಕೊಳ್ಳಲು ಸಾಕಷ್ಟು ರೈತರು ಮುಂದೆ ಬಂದಿದ್ದಾರೆ. ಆದರೆ, ನಮಗೆ ಇರುವುದು ಕೇವಲ ಬೆರಳೆಣಿಕೆಯಷ್ಟು ಎಂದು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ ಪ್ರಸ್ತಾಪಿಸಿದಾಗ ಸ್ಥಳದಲ್ಲಿದ ತಾಲ್ಲೂಕು ಉದ್ಯೋಗಖಾತ್ರಿ ಅಧಿಕಾರಿಗೆ ಮತ್ತು ತಾಲ್ಲೂಕು ಪಂಚಾಯ್ತಿ ಇಓರಿಗೆ ವೈಯಕ್ತಿಕ ಗೊಬ್ಬರ ಗುಂಡಿಗಳಿಗೆ ಆದ್ಯತೆ ನೀಡಲು ಸೂಚಿಸಿದರು.
ಮಾಧ್ಯಮ ಪ್ರತಿನಿಧಿಯೊಬ್ಬರು ಈಗಾಗಲೇ ಭೂಪರಿವರ್ತನೆ ಮಾಡಿಕೊಂಡ ಹಲವು ವರ್ಷಗಳಾಗಿದ್ದು ಅಂತಹವರು ಪಂಚಾಯ್ತಿಗೆ 9&11 ಮಾಡಿಕೊಡುವಂತೆ ಅರ್ಜಿ ಸಲ್ಲಿಸಲಾಗಿ ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸಹ ಮಾಡಬಹುದೆಂದು ಅನುಮೋದಿಸಲಾದರೂ ಕೂಡಾ ತಾಂತ್ರಿಕ ತೊಂದರೆಯ ನೆಪ ಹೇಳುತ್ತಾರೆಂಬ ಬಗ್ಗೆ ತಿಳಿಸಿದಾಗ ನಗರ ಯೋಜನಾ ವ್ಯಾಪ್ತಿಗೆ ಬರುವಂತಹ ವಿಷಯ ಎಂದು ಹೇಳುತ್ತಿದ್ದಂತೆ 1983 ರಿಂದ 1995 ರಲ್ಲಿ ಹಿಂದಿನ ಸರ್ಕಾರ ಉಪವಿಭಾಗಾಧಿಕಾರಿಗಳಿಂದ ಆದೇಶಿಸಲಾಗಿರುವ ಭೂ ಪರಿವರ್ತನೆಯಾಗಿರುವ ಬಗ್ಗೆ ಗಮನಸೆಳೆದಾಗ ತಾಲ್ಲೂಕು ಪಂಚಾಯ್ತಿ ಇಓ ಮತ್ತು ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಇಓ ನರೇಂದ್ರಕುಮಾರ್, ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಸಹಾಯಕ ನಿರ್ದೇಶಕಿ ಗೀತಾ, ಪಿಡಿಓ ನಾಗರಾಜ್, ಕೆಡಿಪಿ ಸದಸ್ಯರಾದ ಆಸಿಫ್, ಎನ್.ಚಂದ್ರೇಶ್, ಪಂಚಾಯ್ತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಸದಸ್ಯರಾದ ಡಿ.ಈ.ಮಧುಸೂದನ್, ಜಿ.ಡಿ.ಮಲ್ಲಿಕಾರ್ಜುನ, ಸುಂದರೇಶ, ಪ್ರಕಾಶ ಪಾಲೇಕರ್, ಗಣಪತಿ ಗವಟೂರು, ತಾಲೂಕು ಮಟ್ಟದ ಜೆಜೆಎಂ ಇಲಾಖೆಯ ಅಧಿಕಾರಿಗಳು ಹಾಗೂ ಉದ್ಯೋಗಖಾತ್ರಿ ಅಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ಮೇಲ್ವಿಚಾರಕ ರಾಘವೇಂದ್ರ, ಲಕ್ಷ್ಮಿ ಇನ್ನಿತರ ಅಧಿಕಾರಿಗಳು ಪಂಚಾಯಿತ್ ಸಿಬ್ಬಂದಿ ವರ್ಗ ಹಾಜರಿದ್ದರು.