ವೈಭವದ ಶ್ರೀ ರೇಣುಕಾಂಬ ದೇವಿ ಬನ್ನಿ ಉತ್ಸವಕ್ಕೆ ಜಾನಪದ ಕಲಾತಂಡಗಳ ಮೆರಗು

Written by malnadtimes.com

Published on:

SORABA ; ಪುರಾಣ ಹಾಗೂ ಇತಿಹಾಸ ಪ್ರಸಿದ್ಧ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿಯ ಬನ್ನಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವೋಪೇತವಾಗಿ ಜರುಗಿತು.

WhatsApp Group Join Now
Telegram Group Join Now
Instagram Group Join Now

ದೇವಸ್ಥಾನದಿಂದ ಆರಂಭವಾದ ಶ್ರೀ ದೇವಿಯ ಪಲ್ಲಕ್ಕಿ ಮೆರವಣಿಗೆ ಸಕಲ ವಾದ್ಯ ಮೇಳಗಳೊಂದಿಗೆ ನ್ಯಾರ್ಶಿಯ ಬನ್ನಿ ಮಂಟಪಕ್ಕೆ ತೆರಳಿತು. ಪಲ್ಲಕ್ಕಿಯನ್ನು ಬನ್ನಿ ಮಂಟಪದಲ್ಲಿ ಇರಿಸಿಲಾಯಿತು. ಶ್ರೀ ರೇಣುಕಾಂಬ ದೇವಿಯ ಬನ್ನಿ ಮುಡಿಯುವ ಆಚರಣೆ ನಿಮಿತ್ತ ವಿಶೇಷ ಪೂಜೆ ಸಲ್ಲಿಸಿ ವಿವಿಧ ಧಾರ್ಮಿಕ ಆಚರಣೆಗಳನ್ನು ನಡೆಸಲಾಯಿತು. ಸಾಂಪ್ರದಾಯಿಕ ಪದ್ಧತಿಯಂತೆ ಮಾರಿಕೊಪ್ಪದ ಭಕ್ತರು ಶ್ರೀ ದೇವಿಗೆ ಬನ್ನಿ ಅರ್ಪಿಸಿದರು.

ಬನ್ನಿ ಉತ್ಸವಕ್ಕೆ ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿ ಪ್ರಮೀಳ ಕುಮಾರಿ, ಗ್ರಾಪಂ ಅಧ್ಯಕ್ಷೆ ಸರಿತಾ ಕಷ್ಣಪ್ಪ, ಉಪಾಧ್ಯಕ್ಷ ಎಂ.ಬಿ. ರೇಣುಕಾ ಪ್ರಸಾದ್, ನ್ಯಾರ್ಶಿ ಗ್ರಾಪಂ ಅಧ್ಯಕ್ಷ ಧನಂಜಯ ಡಿ. ನಾಯ್ಕ್ ಚಾಲನೆ ನೀಡಿದರು. ಇದಕ್ಕೂ ಮೊದಲು ಮೃಗ ಬೇಟೆ ನಡೆಸಲಾಯಿತು.

ನಂತರ ವಿವಿಧ ಜನಪ್ರತಿನಿಧಿಗಳು, ಇಲಾಖೆ ಅಧಿಕಾರಿಗಳು ಹಾಗೂ ಭಕ್ತರಿಗೆ ಬನ್ನಿ ವಿತರಿಸಲಾಯಿತು. ಬನ್ನಿ ಮಂಟಪದಿಂದ ಶ್ರೀ ದೇವಿಯ ಪಲ್ಲಕ್ಕಿ ಉತ್ಸವ ಆಗಮ ಶಾಸ್ತ್ರದ ವಿಧಿವಿಧಾನಗಳೊಂದಿಗೆ ನಡೆಸಲಾಯಿತು. ಸಲಾಂ ಕಟ್ಟೆಬಳಿ ಅಧಿಕಾರಿಗಳು ಶ್ರೀ ದೇವಿಗೆ ಭಕ್ತಿ ಪೂರ್ವಕವಾಗಿ ಗೌರವ ಸಲ್ಲಿಸಿದರು.

ವಿಜಯದಶಮಿಯ ಬಹುಮುಖ್ಯ ಘಟ್ಟವಾದ ಬನ್ನಿ ಉತ್ಸವದಲ್ಲಿ ಸಾವಿರಾರು ಭಕ್ತರು ಬನ್ನಿ ಮುಡಿಯುವ ಮೂಲಕ ಶ್ರೀ ದೇವಿಗೆ ಉಧೋ.. ಉಧೋ.. ಎಂದು ಜೈಕಾರ ಹಾಕಿದರು.

ತಾಲೂಕು ಸೇರಿದಂತೆ ನೆರೆಯ ಹಾವೇರಿ, ಹಿರೇಕೆರೂರು, ಬ್ಯಾಡಗಿ, ದಾವಣಗೆರೆ, ರಾಣೆಬೆನ್ನೂರು ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಬನ್ನಿ ಉತ್ಸವವನ್ನು ಕಣ್ತುಂಬಿಕೊಂಡರು.

ಬನ್ನಿ ಉತ್ಸವದಲ್ಲಿ ಇದೇ ಮೊದಲ ಬಾರಿಗೆ ಶ್ರೀ ರೇಣುಕಾಂಬ ದೇವಿ ದಸರಾ ಉತ್ಸವ ಆಚರಣಾ ಸಮಿತಿಯಿಂದ ನಡೆದ ದಸರಾ ಜಂಬೂ ಸವಾರಿ ಮೆರವಣಿಗೆ ವಿಶೇಷವಾಗಿತ್ತು. ಬನ್ನಿ ಮಂಟಪದಿಂದ ಆರಂಭವಾದ ಜಂಬೂ ಸವಾರಿ ಗ್ರಾಮದ ಜನತೆಯ ಬಹುದಿನದ ಕನಸಾಗಿತ್ತು.

ಜಂಬೂ ಸವಾರಿಗೆ ಸಮಿತಿಯ ಅಧ್ಯಕ್ಷ ಡಾ. ಆರ್. ಶ್ರೀಧರ್ ಹುಲ್ತಿಕೊಪ್ಪ, ಸ್ಥಳೀಯ ಗ್ರಾಪಂ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಸದಸ್ಯರು ಮತ್ತು ದಸರಾ ಸಮಿತಿಯ ಪದಾಧಿಕಾರಿಗಳು, ಮುಖಂಡರು ಚಾಲನೆ ನೀಡಿದರು.

ಅಂಬಾರಿಯಲ್ಲಿ ಶ್ರೀದೇವಿಯ ಭಾವಚಿತ್ರವನ್ನಿರಿಸಿದ ಜಂಬೂ ಸವಾರಿ ಗ್ರಾಮವನ್ನು ಪ್ರವೇಶಿಸುತ್ತಿದ್ದಂತೆ ಭಕ್ತರು ಭಾವಪರವಶರಾದರು. ಡೊಳ್ಳುಕುಣಿತ, ನವದುರ್ಗೆಯರ ವೇಷಧರಿಸಿದವರು, ಚಂಡೆ ವಾದನ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರಗು ತಂದವು.

ಸೊರಬ ಸಿಪಿಐ ಎಲ್. ರಾಜಶೇಖರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಆನೆಯ ಸುರಕ್ಷತೆಗೆ ಹೆಚ್ಚಿನ ನಿಗಾವಹಿಸಿದ್ದರು.

ಮೆರವಣಿಗೆಯಲ್ಲಿ ತಾಪಂ ಮಾಜಿ ಅಧ್ಯಕ್ಷ ಎಚ್. ಗಣಪತಿ, ಮಾಜಿ ಸದಸ್ಯರಾದ ಸುನೀಲ್ ಗೌಡ, ಎನ್.ಜಿ. ನಾಗರಾಜ, ಗ್ರಾಪಂ ಸದಸ್ಯ ಎಂ.ಪಿ. ರತ್ನಾಕರ, ಪ್ರಮುಖರಾದ ರಘು ಸ್ವಾದಿ, ಉಮಾಪತಿ ತೌಡತ್ತಿ, ಷಣ್ಮುಖ ಚನ್ನಪಟ್ಟಣ, ಪ್ರದೀಪ ಬಾಡದಬೈಲು, ವಿನಾಯಕ ಹೆಗಡೆ,ಗಣೇಶ್ ಮರಡಿ, ಗುರು ಬರದವಳ್ಳಿ, ಮೋಹನ್ ಕಾನಡೆ, ದತ್ತು ಕಮಲಾಪುರ, ಪ್ರಜ್ವಲ್ ಚಂದ್ರಗುತ್ತಿ, ವಸಂತ್ ಶೇಟ್, ಕೃಷ್ಣಮೂರ್ತಿ, ಮಂಜಪ್ಪ, ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಊರ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Comment