ಸಿಡಿಲು ಬಡಿದು ರೈತ ಸಾವು !

0 715

ಸಿಡಿಲು ಬಡಿದು ರೈತ ಸಾವು !

ಎನ್‌.ಆರ್. ಪುರ : ತಾಲೂಕಿನಲ್ಲಿ ಇಂದು ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದೆ. ಮಳೆ ಜೊತೆಗೆ ಗುಡುಗು ಸಿಡಿಲು ಕೂಡ ಸಂಭವಿಸಿದೆ.

ತೋಟಕ್ಕೆ ಹೋಗಿದ್ದ ರೈತನಿಗೆ ಸಿಡಿಲು ಬಡಿದು ಮೃತಪಟ್ಟಿದ್ದು ಮೃತನನ್ನು ಅರಳಿಕೊಪ್ಪದ ಶಂಕರ್ (48) ಎಂದು ಗುರುತಿಸಲಾಗಿದೆ.

ಸಂಜೆಯಿಂದ ಗುಡುಗು ಮಿಂಚು ಸಹಿತ ಧಾರಾಕಾರವಾಗಿ ಎನ್ ಆರ್ ಪುರ ತಾಲೂಕಿನಲ್ಲಿ ಮಳೆ ಸುರಿದಿದೆ. ಶೃಂಗೇರಿ, ಎನ್‌.ಆರ್ ಪುರ, ಬಾಳೆಹೊನ್ನೂರು ಭಾಗದಲ್ಲೂ ನಿನ್ನೆ ಮಳೆಯಾಗಿದ್ದರೆ, ಕೊಪ್ಪದಲ್ಲಿ ಇಂದು ಸಾಧಾರಣ ಮಳೆಯಾಗಿದೆ. ಇತ್ತ ಬಯಲು ಭಾಗದ ತರೀಕೆರೆ ಪಟ್ಟಣದಲ್ಲಿ ಇಂದು ಉತ್ತಮ ಮಳೆಯಾಗಿದೆ. ರಸ್ತೆಗಳ ಮೇಲೆ ನೀರು ಹರಿದಿದೆ.

ರೈತಾಪಿ ವರ್ಗದಲ್ಲಿ ಸಂತಸ:

ಚಿಕ್ಕಮಗಳೂರು ನಗರ ಸೇರಿದಂತೆ ಕೆಲವಡೆ ಸಾಧಾರಣ ಮಳೆಯಾಗಿದ್ದರೆ, ತರೀಕೆರೆ, ಆಲ್ದೂರು ಇತರೆಡೆಗಳಲ್ಲಿ ಉತ್ತಮ ಪ್ರಮಾಣದ ಮಳೆ ಸುರಿದಿದೆ. ರೈತರ ಭರವಸೆಯ ಮಳೆಯಾದ ರೇವತಿ ಕೊನೆಗೂ ಕರುಣೆ ತೋರಿದ್ದು, ಬಿಸಿಲ ಧಗೆಗೆ ಹೈರಾಣಾಗಿದ್ದ ಜನತೆಗೆ ಸಮಾಧಾನ ಉಂಟು ಮಾಡಿದೆ.

ಚಿಕ್ಕಮಗಳೂರು ನಗರದಲ್ಲಿ ಮಧ್ಯಾಹ್ನ ಜೋರಾಗಿ ಆರಂಭವಾದ ಮಳೆ ಭರವಸೆ ಮೂಡಿಸಿತ್ತಾದರೂ ಕೆಲವೇ ಕ್ಷಣದಲ್ಲಿ ಬಿರುಸು ಕಳೆದುಕೊಂಡಿತು. ಆದರೆ ಸಂಜೆ ವರೆಗೂ ತುಂತುರು ಹನಿ ಹಾಕುತ್ತಾ ಇಡೀ ವಾತಾವರಣವನ್ನು ತಣ್ಣಗಾಗಿಸಿತು. ಹಲವಾರು ತಿಂಗಳುಗಳಿಂದ ಬಿಸಿಲ ಬೇಗೆಗೆ ಸೊರಗಿದ್ದ ಜನರು ಅಂತೂ ವರುಣ ಕಣ್ಣು ತೆರೆದ ಎಂದು ನಿಟ್ಟುಸಿರು ಬಿಟ್ಟರು.

ಚಿಕ್ಕಮಗಳೂರಿನ ಅರೆಮಲೆನಾಡು ಭಾಗ ಕಳಸಾಪುರ ಸೇರಿದಂತೆ ಮಲ್ಲೇನಹಳ್ಳಿ, ಖಾಂಡ್ಯ ಹಾಗೂ ಮುತ್ತೋಡಿ ಅರಣ್ಯ ಭಾಗದಲ್ಲೂ ಮಳೆಯಾಗಿರುವುದು ಸಂತಸ ಮೂಡಿಸಿದೆ.

Leave A Reply

Your email address will not be published.

error: Content is protected !!