ಚಿಕ್ಕಮಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗುರುವಾರ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಮತ್ತು ಶೃಂಗೇರಿ ದೇವಸ್ಥಾನಕ್ಕೆ ಕಟುಂಬ ಸಮೇತರಾಗಿ ಭೇಟಿ ನೀಡಿ ದೇವರ ದರ್ಶನ ಪಡೆದರು.
ಬುಧವಾರ ಬೆಳಗ್ಗೆ ಧರ್ಮಸ್ಥಳ ಮುಂಜುನಾಥ ಸ್ವಾಮಿಯ ದರ್ಶನ ಪಡೆದು ಸಂಜೆ ವೇಳೆಗೆ ಕುದುರೆಮುಖಕ್ಕೆ ಭೇಟಿ ನೀಡಿದ್ದ ಅವರು, ಕುದುರೆಮುಖದ ಲಕ್ಯಾ ಡ್ಯಾಮ್ ಹಿನ್ನೀರು ಪ್ರದೇಶವನ್ನು ವೀಕ್ಷಿಸಿ ನಂತರ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಭದ್ರಾ ನೇಚರ್ ಕ್ಯಾಂಪ್‍ನ ಜಂಗಲ್ ಲಾಡ್ಜ್ ನಲ್ಲಿ ತಂಗಿದ್ದರು.
ಗುರುವಾರ ಬೆಳಗ್ಗೆ ಹೊರನಾಡು ಅನ್ನಪೂಣೇಶ್ವರಿ ದೇವಸ್ಥಾನಕ್ಕೆ ಕುಟುಂಬ ಸಹಿತರಾಗಿ ಭೇಟಿ ನೀಡಿದ್ದ ಅವರು, ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದರು. ಹೊರನಾಡು ಭೇಟಿ ಬಳಿಕ ಶೃಂಗೇರಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ರಾಜ್ಯಪಾಲರ ಭೇಟಿ ಹಿನ್ನೆಲೆಯಲ್ಲಿ ಕುದುರೆಮುಖದಿಂದ ಹೊರನಾಡು ಗ್ರಾಮದವರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ರಾಜ್ಯಾಪಾಲರು ಹೊರನಾಡಿಗೆ ಬಂದು ಹೋಗುವವರೆಗೆ ಬೇರೆ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಶೃಂಗೇರಿ ಭೇಟಿ ಬಳಿಕ ಅವರು ಬೆಂಗಳೂರಿಗೆ ಹಿಂದಿರುಗಿದರು.
ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಹೊರನಾಡು ಧರ್ಮಕರ್ತ ಜಿ.ಭೀಮೇಶ್ವರ ಜೋಷಿ, ಎಸ್ಪಿ ಉಮಾ ಪ್ರಶಾಂತ್, ಎಸಿ ರಾಜೇಶ್, ತಹಶೀಲ್ದಾರ್ ಹೇಮಂತ್ ಕುಮಾರ್ ಉಪಸ್ಥಿತರಿದ್ದರು.