ಮೂಡಿಗೆರೆ: ಜಿಂಕೆ ಮರಿ ಸಾಕಲು ಹೋಗಿ ಕಾಫಿ ಎಸ್ಟೇಟ್ ಮಾಲೀಕ ಪೇಚಿಗೆ ಸಿಲುಕಿರುವ ಘಟನೆ ನಡೆದಿದೆ.
ತಾಲೂಕಿನ ಕೆ ತಲಗೂರು ಗ್ರಾಮದ ಕಾಫಿ ಎಸ್ಟೇಟ್ ಮಾಲೀಕ ತಿಮೋತಿ ಮಿಸ್ಕಿತ್ ಅವರ ತೋಟದ ಮನೆಯಲ್ಲಿ ಸಾಕಿದ್ದ ಚುಕ್ಕಿ ಜಿಂಕೆ ಮರಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡು ಕಾಫಿ ಎಸ್ಟೇಟ್ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಿಮೋತಿ ಮಿಸ್ಕಿತ್ ಅವರ ಮನೆಯಲ್ಲಿ ಜಿಂಕೆಯ ಉಗುರು ಸೇರಿದಂತೆ ಅಲಂಕಾರಿಕ ವಸ್ತುಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಈ ವೇಳೆ ಅವರ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗಿದೆ.
ನಿರೀಕ್ಷಕಿ ಸುನಿತಾ ಅವರ ನೇತೃತ್ವದ ತಂಡ ಖಚಿತ ಮಾಹಿತಿಯನ್ನಾಧರಿಸಿ ದಾಳಿ ನಡೆಸಿದ್ದಾರೆ. ಜಿಂಕೆ ಮರಿಯನ್ನು ವಶಪಡಿಸಿಕೊಂಡಿದ್ದಾರೆ. ತೋಟದಲ್ಲಿ ಸಿಕ್ಕಿದ್ದ ಜಿಂಕೆ ಮರಿಯನ್ನು ಸಾಕಲು ಹೋಗಿ ಈಗ ತೋಟದ ಮಾಲೀಕರು ಪೇಚಿಗೆ ಸಿಲುಕಿದ್ದಾರೆ.