ಅರಿವು ಸಂಸ್ಕಾರ ಪಡೆಯಲು ಧರ್ಮ ಪೀಠಗಳ ಮಾರ್ಗದರ್ಶನ ಬಹಳ ಮುಖ್ಯ ; ಗೃಹ ಸಚಿವ ಆರಗ ಜ್ಞಾನೇಂದ್ರ

ಎನ್.ಆರ್ ಪುರ: ಅರಿವು ಸಂಸ್ಕಾರ ಪಡೆಯಲು ಧರ್ಮ ಪೀಠಗಳ ಮಾರ್ಗದರ್ಶನ ಬಹಳ ಮುಖ್ಯ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಅವರು ಶ್ರೀ ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಜರುಗಿದ ಶ್ರೀ ವೀರಭದ್ರಸ್ವಾಮಿ ವಿಜಯೋತ್ಸವ ಹಾಗೂ ಜಾನಪದ ಹಬ್ಬ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಬಹು ಜನ್ಮದ ಪುಣ್ಯ ಫಲದಿಂದ ಮಾನವ ಜೀವನ ಪ್ರಾಪ್ತವಾಗಿದೆ. ಅರಿವು ಸಂಸ್ಕಾರ ಪಡೆಯಲು ಧರ್ಮ ಪೀಠಗಳ ಮಾರ್ಗದರ್ಶನ ಬಹಳ ಮುಖ್ಯ. ಶ್ರೀ ರಂಭಾಪುರಿ ಪೀಠ ನೀಡಿರುವ ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಸಂದೇಶ ಸಮಾಜದಲ್ಲಿ ಸಾಮರಸ್ಯ ಬೆಳೆಸಲು ಕಾರಣವಾಗಿದೆ. ವೀರಭದ್ರಸ್ವಾಮಿ ವಿಜಯೋತ್ಸವ-ಜನಪದ ಹಬ್ಬದ ವಿಶಿಷ್ಠ ಸಮಾರಂಭ ಉದ್ಘಾಟಿಸಿದ್ದು ನನ್ನ ಪೂರ್ವ ಜನ್ಮದ ಸುಕೃತ. ಸಮಾಜವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ನಿರಂತರ ಪ್ರವಾಸ ನಡೆಯುತ್ತಿದೆ. ಮಾನವೀಯ ನೆಲೆಯನ್ನು ಅರಳಿಸುವ ನಿಟ್ಟಿನಲ್ಲಿ ಕಾರ್ಯ ನಡೆಸಿದ್ದಾರೆ. ಶ್ರೀ ರಂಭಾಪುರಿ ಜಗದ್ಗುರುಗಳು ರಾಜಕೀಯದಲ್ಲಿ ತಪ್ಪಾಗಿ ನಡೆದಾಗ ಖಂಡಿಸಿದ್ದಾರೆ. ಒಳ್ಳೆಯ ಕೆಲಸ ಮಾಡಿದಾಗ ಪ್ರಶಂಸೆ ಮಾಡಿದ್ದಾರೆ. ಭಾರತದಲ್ಲಿರುವ ಆದರ್ಶ ಪರಂಪರೆಗಳಿಂದಾಗಿ ನಾವು ಇಡೀ ಜಗತ್ತಿಗೆ ಶ್ರೇಷ್ಠರಾಗಿ ಕಾಣುತ್ತಿದ್ದೇವೆ. ಪರಕೀಯರ ದಬ್ಬಾಳಿಕೆ ದೇಶದ ಮೇಲೆ ನಿರಂತರವಾಗಿ ನಡೆಯುತ್ತ ಬಂದಾಗ್ಯೂ ಧರ್ಮ ಉಳಿದಿದೆ ಎಂದರೆ ನಮ್ಮ ಧರ್ಮಾಚಾರ್ಯರು ಕಾರಣ. ಜನತೆಯಲ್ಲಿ ಆತ್ಮ ವಿಶ್ವಾಸ ಬೆಳೆಸುವ ಕಾರ್ಯ ಮಾಡಿದ್ದಾರೆ ಎಂದರು.

ಜೀವನದಲ್ಲಿ ಸಂಬಂಧಗಳನ್ನು ಬೆಸೆಯುವ ಕೆಲಸವಾಗಬೇಕು :

ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ನೀತಿ ಧರ್ಮಗಳು ಮನುಷ್ಯನನ್ನು ಬಂಧಿಸುವುದಿಲ್ಲ. ಅವು ನಮ್ಮನ್ನು ಸದಾ ರಕ್ಷಿಸುತ್ತವೆ. ಮಾನವೀಯ ಸಂಬಂಧಗಳು ಸಡಿಲಗೊಳ್ಳುತ್ತಿರುವ ಇಂದಿನ ದಿನಮಾನಗಳಲ್ಲಿ ಬೆಸೆಯುವ ಕೆಲಸವಾಗಬೇಕೆಂದು ಅಭಿಪ್ರಾಯಪಟ್ಟರು.

ಮನುಷ್ಯನಿಗೆ ಸಂಪತ್ತು ನಷ್ಟವಾದರೆ ಆರೋಗ್ಯ ಕೆಟ್ಟರೆ ಚಿಂತಿಸಬೇಕಾಗಿಲ್ಲ. ಆದರೆ ಚಾರಿತ್ರ್ಯ ಎಂದಿಗೂ ಕೆಡದಂತೆ ಇರುವುದು ಶ್ರೇಯಸ್ಕರ. ಮನಸ್ಸಿನ ಶುದ್ಧೀಕರಣದ ಹೊರತು ವ್ಯಕ್ತಿ ಪರಿಪೂರ್ಣನಾಗಲಾರ. ಒಳ್ಳೆಯವರು ಸಂತೋಷ ಕೊಟ್ಟರೆ ಕೆಟ್ಟವರು ಅನುಭವ ನೀಡುತ್ತಾರೆ. ದುಷ್ಟರಿಂದ ಪಾಠ ಕಲಿತರೆ ಉತ್ತಮರು ಸವಿನೆನಪು ತಂದು ಕೊಡಬಲ್ಲರು. ಜೀವನದಲ್ಲಿ ನೀವೇನು ಮಾಡಿದ್ದೀರಿ ಸಾಧಿಸಿದ್ದೀರಿ ಎಂಬುದಕ್ಕಿಂತ ಆ ಹಾದಿಯಲ್ಲಿ ನೀವೆಷ್ಟು ಅಡೆ ತಡೆಗಳನ್ನು ದಾಟಿ ಬಂದಿದ್ದೀರಿ ಎಂಬುದು ಬಹು ಮುಖ್ಯ. ಸಂಪತ್ತು ದಾನಕ್ಕಾಗಿ ವಿದ್ಯೆ ಪುಣ್ಯ ಕಾರ್ಯಕ್ಕಾಗಿ ಯಾರು ವಿನಿಯೋಗಿಸುವರೋ ಅವರು ಎಲ್ಲೆಲ್ಲಿಯೂ ಮಾನ್ಯರಾಗಿ ಬಾಳುತ್ತಾರೆ. ಅಗತ್ಯಕ್ಕೆ ಬಳಕೆಯಾಗದ ಹಣ ಸಂಪತ್ತಲ್ಲ. ಉಪಯೋಗಕ್ಕೆ ಬಾರದ ಅರಿವು ಜ್ಞಾನವಲ್ಲ. ಸಾವಿರ ಕಾಗೆಗಳು ಕೂಗಾಡಿದರೂ ಕೋಗಿಲೆಯ ಧ್ವನಿಗೆ ಸಮನಾಗದು. ಸಾವಿರ ಜನ ಕೊಂಕಾಡಿದರೂ ಒಂದು ಒಳ್ಳೆಯ ವ್ಯಕ್ತಿತ್ವವನ್ನು ವಿರೂಪಗೊಳಿಸಲು ಸಾಧ್ಯವಾಗುವುದಿಲ್ಲ. ದುಷ್ಟರ ಸಂಹಾರ ಶಿಷ್ಟರ ಪರಿಪಾಲನೆ ಮಾಡುವುದೇ ವೀರಭದ್ರ ಸ್ವಾಮಿಯ ಅವತಾರದ ಮೂಲ ಉದ್ದೇಶ. ಸಮಾಜದಲ್ಲಿ ದುಷ್ಟ ಶಕ್ತಿಗಳನ್ನು ತಗ್ಗಿಸಿ ಸಾತ್ವಿಕ ಶಕ್ತಿ ಬೆಳೆಸುವುದೇ ವೀರಭದ್ರ ವಿಜಯೋತ್ಸವದ ಮಹತ್ವದ ಉದ್ದೇಶವಾಗಿದೆ. ಹಳ್ಳಿಯ ಜನರು ಸಹಜವಾಗಿ ಬೆಳೆಸಿದ ಸಾಹಿತ್ಯವೇ ಜಾನಪದ ಸಂಪತ್ತು. ಜಾನಪದ ಸಾಹಿತ್ಯದಲ್ಲಿ ಅಡಗಿರುವ ಅರ್ಥಪೂರ್ಣವಾದ ಧ್ವನಿ ಜೀವನದ ಉಜ್ವಲ ಭವಿಷ್ಯಕ್ಕೆ ಪ್ರೇರಕ ಶಕ್ತಿಯಾಗಿದೆ. ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಜಾನಪದ ಸಾಹಿತ್ಯ ಬಹು ದೊಡ್ಡ ಕೊಡುಗೆಯನ್ನು ಕೊಟ್ಟಿದೆ ಎಂದರು.


ಹೂಲಿಕೆರೆ ವಿರೂಪಾಕ್ಷಲಿಂಗ ಶಿವಾಚಾರ್ಯರು ಶ್ರೀ ಪೀಠದ ದಾಖಲೆ ಸಂಪುಟ-2ನ್ನು ಬಿಡುಗಡೆಗೊಳಿಸಿದರು. ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಎಸ್.ಜಾನಪದ ಬಾಲಾಜಿ, ಜಿಲ್ಲಾಧ್ಯಕ್ಷ ಎಸ್.ಹೆಚ್.ಪೂರ್ಣೇಶ್, ಬಾಳೆಹೊನ್ನೂರು ಹೋಬಳಿ ಅಧ್ಯಕ್ಷ ಸುನೀಲರಾಜ್ ಭಂಡಾರಿ, ಉಡುಪಿಯ ಬನ್ನಂಜೆ ಗೋವಿಂದ ಭಂಡಾರಿ ಪಾಲ್ಗೊಂಡಿದ್ದರು.
ಅ.ಭಾ.ವೀರಶೈವ ಶಿವಾಚಾರ್ಯ ಸಂಸ್ಥೆ ಗೌರವಾಧ್ಯಕ್ಷ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರು ನೇತೃತ್ವ ವಹಿಸಿ ಮಾತನಾಡಿ, ಜನಮನ ಶುದ್ಧೀಕರಣಕ್ಕೆ ಹಲವು ಹತ್ತು ದಾರಿ. ಅವುಗಳಲ್ಲಿ ಧರ್ಮ ದಾರಿ ಬಹಳ ಮುಖ್ಯ. ಧರ್ಮದಲ್ಲಿರುವ ದೂರದರ್ಶಿತ್ವ ಭಾವೈಕ್ಯತೆಯ ಚಿಂತನ ಬೇರೆಲ್ಲಿಯೂ ಕಾಣಲಾಗದೆಂದರು.


ಮಳಲಿ ಸಂಸ್ಥಾನ ಮಠದ ಡಾ.ನಾಗಭೂಷಣ ಶಿವಾಚಾರ್ಯರು ಪ್ರಾಸ್ತಾವಿಕ ಮಾತನಾಡಿ ಶ್ರೀ ಪೀಠದಲ್ಲಿ ಸಂಯೋಜಿಸಿರುವ ಧಾರ್ಮಿಕ ಸಾಮಾಜಿಕ ಮತ್ತು ಶೈಕ್ಷಣಿಕ ಚಿಂತನ ಧಾರೆಗಳು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅಗಾಧ ಪರಿಣಾಮ ಬೀರುತ್ತವೆ ಎಂದರು.


ಹಲಗೂರು ಬೃಹನ್ಮಠದ ರುದ್ರಮುನಿ ಶಿವಾಚಾರ್ಯರು, ಚಿಕ್ಕಮಗಳೂರಿನ ಚಂದ್ರಶೇಖರ ಶಿವಾಚಾರ್ಯರು, ನುಗ್ಗೇಹಳ್ಳಿ ಡಾ.ಮಹೇಶ್ವರ ಶಿವಾಚಾರ್ಯರು ಉಪದೇಶಾಮೃತ ನೀಡಿದರು.

ಮಸೂತಿ ಪ್ರಭುಕುಮಾರ ಶಿವಾಚಾರ್ಯರು, ಬೊಮ್ಮನಹಳ್ಳಿ ಗುರುಶಾಂತ ಶಿವಾಚಾರ್ಯರು, ಗಬ್ಬೂರು ಬೂದಿಬಸವೇಶ್ವರ ಶಿವಾಚಾರ್ಯರು, ತಡವಲಗಾದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಆಲಮೇಲ ಚಂದ್ರಶೇಖರ ಶಿವಾಚಾರ್ಯರು, ಹೊನ್ನಕಿರಣಗಿಯ ಚಂದ್ರಗುಂಡ ಶಿವಾಚಾರ್ಯರು, ತೊನಸನಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯರು, ಹೆಡಗಿಮುದ್ರಾ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.


ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಚಿಕ್ಕಮಗಳೂರಿನ ಬಿ.ಎ.ಶಿವಶಂಕರ್ ಇವರಿಂದ ಸ್ವಾಗತ, ಬೆಂಗಳೂರಿನ ಶಿವಶಂಕರ ಶಾಸ್ತ್ರಿಗಳಿಂದ ಸಂಗೀತ, ಶಿವಮೊಗ್ಗದ ಕುಮಾರಿ ಜಿ.ಜಿ.ರಕ್ಷಿತಾ ಇವರಿಂದ ಭರತ ನಾಟ್ಯ ಜರುಗಿತು. ರಂಭಾಪುರಿ ಪೀಠದ ವೀರೇಶ ಕುಲಕರ್ಣಿ ಹಾಗೂ ಮೈಸೂರಿನ ಸಿ.ಹೆಚ್.ರೇಣುಕಾಪ್ರಸಾದ್ ಇವರಿಂದ ನಿರೂಪಣೆ ನಡೆದವು.


ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳವರ ವೈಭವದ ಅಡ್ಡಪಲ್ಲಕ್ಕಿ ಮಹೋತ್ಸವ ಶ್ರೀ ಸೋಮೇಶ್ವರ ದೇವಸ್ಥಾನದಿಂದ ಶ್ರೀ ಪೀಠದ ವರೆಗೆ ಸಕಲ ಬಿರುದಾವಳಿ ವಾದ್ಯ ವೈಭವಗಳೊಂದಿಗೆ ಜರುಗಿತು. ವಿವಿಧ ಜಾನಪದ ಕಲಾ ಪ್ರಕಾರದ ತಂಡಗಳು ಭಾಗವಹಿಸಿದ್ದವು.

ಆರತಿ ಹಿಡಿದ ಮುತ್ತೈದೆಯರು ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
ಪ್ರಾತಃಕಾಲದಲ್ಲಿ ದೀಪೋತ್ಸವ-ಕುಂಕುಮೋತ್ಸವ ಹಾಗೂ ಶ್ರೀ ವೀರಭದ್ರಸ್ವಾಮಿ ಚಿಕ್ಕರಥೋತ್ಸವ ನಡೆಯಿತು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,755FollowersFollow
0SubscribersSubscribe
- Advertisement -spot_img

Latest Articles

error: Content is protected !!