ಹೊಸನಗರ ; ಇಲ್ಲಿನ ಸಿಡಿಪಿಒ ಕಛೇರಿ ವತಿಯಿಂದ ತಾಲೂಕಿನ ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಪೋಷಣ್ ಅಭಿಯಾನ ಯೋಜನೆಯಡಿ ಪೋಷಣ್ ಮಾಸಾಚರಣೆ ಹಾಗೂ ಮಾತೃ ವಂದನ ಸಪ್ತಾಹ ಹಮ್ಮಿಕೊಳ್ಳಲಾಗಿತ್ತು.
ಸಿಡಿಪಿಒ ಕಚೇರಿ ಮೇಲ್ವಿಚಾರಕಿ ಕು|| ದಿವ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಬಾಲ್ಯವಿವಾಹ, ಪೋಕ್ಸೋ ಹಾಗು ಬಾಲಾಪರಾಧ ಪ್ರಕರಣಗಳು ಅತಿಹೆಚ್ಚಾಗಿ ಕಂಡುಬರುತ್ತಿದ್ದು ಶಿವಮೊಗ್ಗ ಜಿಲ್ಲೆಯೂ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂಬ ಆತಂಕ ವ್ಯಕ್ತಪಡಿಸಿದರು.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳನ್ನು ಕಿಶೋರಿಯರು ಎಂದು ಸರ್ಕಾರ ಪರಿಗಣಿಸಿದ್ದು, ಅವರ ರಕ್ಷಣೆಗೆ ಅನೇಕ ಕಾನೂನುಗಳನ್ನು ಜಾರಿಗೆ ತಂದಿದೆ. ಇತ್ತೀಚೆಗೆ ಕಿಶೋರಿಯರ ಅಪಹರಣ ಹೆಚ್ಚುತ್ತಿದ್ದು, ದೂರದ ರಾಜ್ಯಗಳಿಗೆ ಅವರನ್ನು ಹಣಕ್ಕೆ ಮಾರಿ, ಅವರನ್ನು ಮನೆಯಲ್ಲೆ ಬಂಧಿಸಿಟ್ಟು ಜೀತದಾಳುಗಳಂತೆ ದುಡಿಸಿಕೊಳ್ಳಲಾಗುತ್ತಿದೆ. ಕಿಶೋರಿಯರನ್ನು ಕುರಿತಂತೆ ಪೋಷಕರು ಸಾಕ್ಷಷ್ಟು ಜಾಗೃತಿ ವಹಿಸಬೇಕಿದೆ. ಬಾಲಕರಿಗೆ 21 ಹಾಗೂ ಬಾಲಕಿಯರಿಗೆ 18 ವರ್ಷ ತುಂಬಿದ ಮೇಲೆಯೇ ವಿವಾಹಕ್ಕೆ ಅರ್ಹರಾಗಿದ್ದು, ತಪ್ಪಿದಲ್ಲಿ ಕಾನೂನಿನಲ್ಲಿ ಇದು ಗಂಭೀರ ಶಿಕ್ಷಾರ್ಹ ಅಪರಾಧವಾಗಿದೆ. ಬಾಲ್ಯವಿವಾಹಗಳ ತಡೆಗಾಗಿ ಸರ್ಕಾರ ಸುರಕ್ಷಾ ಅಭಿಯಾನ ಜಾರಿಗೊಳಿಸಿದೆ ಎಂದರು.
ಸಾರ್ವಜನಿಕ ಆಸ್ಪತ್ರೆಯ ಆಪ್ತ ಸಮಾಲೋಚಕಿ ಸುಷ್ಮಾ ಹೆಬ್ಬಾರ್ ಮಾತನಾಡಿ, ಇತ್ತೀಚೆಗೆ ಜನಸಾಮಾನ್ಯರು ಸಹ ಹೆಚ್ಐವಿ ರೋಗಕ್ಕೆ ತುತ್ತಾಗುತ್ತಿದ್ದಾರೆ. 2030ರ ಅಂತ್ಯಕ್ಕೆ ರೋಗವನ್ನು ಸಂಪೂರ್ಣ ನಿಯಂತ್ರಣಕ್ಕೆ ತರಲು ಸರ್ಕಾರ ಕ್ರಮಕೈಗೊಂಡಿದ್ದು, ಅದಕ್ಕಾಗಿ ಹೆಚ್ಐವಿ ರೋಗ ಕುರಿತಂತೆ ಜನಜಾಗೃತಿ ಅಭಿಯಾನಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಹೆಚ್ಐವಿ ಎಂಬುದು ಒಂದು ಸಣ್ಣ ವೈರಸ್. ಅದರೆ ಅದು ಹೆಚ್ಚು ತೊಂದರೆ ನೀಡುತ್ತದೆ. ಒಮ್ಮೆ ವ್ಯಕ್ತಿಯ ದೇಹ ಹೊಕ್ಕರೆ ಖಾಯಿಲೆ ನಿಯಂತ್ರಣದಲ್ಲಿ ಇಡಬಹುದೇ ವಿನಃ ಮುಕ್ತನಾಗುವ ಅವಕಾಶ ತೀರಾ ಕಡಿಮೆ. ಅಸುರಕ್ಷತಾ ಲೈಂಗಿಕತೆ, ಹೆಚ್ಐವಿ ಖಾಯಿಲೆ ಹೊಂದಿರುವ ತಾಯಿಯಿಂದ ಮಗುವಿಗೆ, ಹಾಗು ರೋಗವಿರುವ ವ್ಯಕ್ತಿಗೆ ಚುಚ್ಚಿದ ಸಿರಿಂಜ್ಗಳ ಮರು ಬಳಕೆ ಹಾಗೂ ಹೆಚ್ಐವಿ ಖಾಯಿಲೆ ಹೊಂದಿರುವ ವ್ಯಕ್ತಿಯ ರಕ್ತವನ್ನು ದಾನದ ಮೂಲಕ ಪಡೆದ ವ್ಯಕ್ತಿಗೆ ಖಾಯಿಲೆ ಹರಡುವ ನಾಲ್ಕು ಪ್ರಮುಖ ವಿಧಗಳಾಗಿವೆ ಎಂದರು.
ಗರ್ಭಿಣಿಯರು ಹೆಚ್ಚೆಚ್ಚು ಹಸಿರು ಸೊಪ್ಪು, ಕಾಯಿಪಲ್ಯೆಗಳ ಜೊತೆಗೆ ಪೌಷ್ಠಿಕ ಆಹಾರ ಸೇವಿಸುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕು. ಅಂಗನವಾಡಿಯಲ್ಲಿ ನೀಡುವ ಪ್ರೋಟೀನ್, ವಿವಿಧ ವಿಟಮಿನ್ ಹಾಗು ಖನಿಜಾಂಶ ಬರಿತ ಆಹಾರದ ಪ್ಯಾಕೇಟ್ಗಳನ್ನು ಉಪಯೋಗಿಸಬೇಕು. ಇದು ಮಗುವಿನ ದೈಹಿಕ ಬೆಳವಣಿಗೆಗೆ ಸಹಕಾರಿ ಆಗಲಿದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಜಿ.ಎನ್. ಪ್ರವೀಣ್ ತಿಳಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಪ್ರಮೋದ್ ಹಾಜರಿದ್ದು ಮಕ್ಕಳ ಸುರಕ್ಷತೆ ಕುರಿತಂತೆ ಅನೇಕ ಉಪಯುಕ್ತ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ವಿವಿಧ ಗ್ರಾಮಗಳ ಹಲವು ಮಹಿಳೆಯರಿಗೆ ಸೀಮಂತ ಶಾಸ್ತç ನೆರವೇರಿತು.
ವೇದಿಕೆಯಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಸುಧಾ, ಸದಸ್ಯರಾದ ಸತೀಶ್ ಕಾಲಸಸಿ, ಸವಿತಾ ರಮೇಶ್, ದಿವ್ಯ ಪ್ರವೀಣ್, ನಿರ್ಮಲ ರಾಘವೇಂದ್ರ, ಪಿಡಿಒ ಯೋಗೀಶ್. ಆರೋಗ್ಯ ಇಲಾಖೆಯ ಪಿಹೆಚ್ಸಿಒ ಜಯಮ್ಮ, ಕೋಡೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|| ಎವೆಲಿನ್, ಅಂಗನವಾಡಿ ಕಾರ್ಯಕರ್ತೆಯರಾದ ಎಸ್.ಎನ್, ಗೀತಾರವಿ, ಮಂಜುಳಾ, ಸುಮಿತ್ರ, ಶೋಭ, ಉಮಾ ರುಕ್ಷ್ಮಿಣಿ, ಕವಿತಾ, ಕಲಾವತಿ, ಸುಜಾವತಿ, ಶಾಂಭವಿ, ಹೇಮಾವತಿ ಸೇರಿದಂತೆ ಅಗ್ನಿಶಾಮಕ ಠಾಣೆಯ ಅಧಿಕಾರಿ ಆನಂದಪ್ಪ, ಸಿಬ್ಬಂದಿಗಳಾದ ಭೀಷ್ಮಾಚಾರಿ, ಮಂಜುನಾಥ್, ನರೇಶ್, ಶಿವರಾಜ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.