ಹೊಸನಗರ ; ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಾಲೇಜು ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ವಸವೆ ಗ್ರಾಮದಲ್ಲಿ ನಡೆದಿದೆ.
ವಸವೆ ಗ್ರಾಮದ ನಿವಾಸಿ ರಚನಾ (20) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈಕೆ ಹೊಸನಗರದ ಪ್ರತಿಷ್ಠಿತ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಂ ಪದವಿ ವ್ಯಾಸಂಗ ಮಾಡುತ್ತಿದ್ದಳು. ಪ್ರತಿದಿನದಂತೆ ನಿನ್ನೆ ಕೂಡ ಕಾಲೇಜಿಗೆ ಹೋಗಿ ಸಂಜೆ ಮನೆಗೆ ಮರಳಿದ್ದಳು ಎನ್ನಲಾಗಿದೆ.

ರಚನಾ ಕಾಲೇಜಿನಿಂದ ಮನೆಗೆ ಬಂದ ಸಮಯದಲ್ಲಿ ಕುಟುಂಬದ ಸದಸ್ಯರು ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಇದೇ ಸಮಯವನ್ನು ಬಳಸಿಕೊಂಡ ವಿದ್ಯಾರ್ಥಿನಿ, ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾಳೆ. ಮನೆಯವರು ಮರಳಿ ಬಂದಾಗ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣವೇ ಗಾಬರಿಗೊಂಡ ಕುಟುಂಬಸ್ಥರು ರಕ್ಷಣೆಗೆ ಮುಂದಾದರೂ ಅಷ್ಟರಲ್ಲಾಗಲೇ ರಚನಾ ಕೊನೆಯುಸಿರೆಳೆದಿದ್ದಳು.
ವಿದ್ಯಾಭ್ಯಾಸ, ಆಟ-ಪಾಠ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಚುರುಕಾಗಿದ್ದ ವಿದ್ಯಾರ್ಥಿನಿ ರಚನಾ ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ಕೈಗೊಳ್ಳಲು ಕಾರಣವೇನು ಎಂಬುದು ಸದ್ಯಕ್ಕೆ ನಿಗೂಢವಾಗಿದೆ.

ಮನೆಯಲ್ಲಾಗಲಿ ಅಥವಾ ಕಾಲೇಜಿನಲ್ಲಾಗಲಿ ಯಾವುದೇ ರೀತಿಯ ತೊಂದರೆ ಇತ್ತೇ? ಅಥವಾ ಇನ್ಯಾವುದೇ ವೈಯಕ್ತಿಕ ವಿಚಾರಕ್ಕೆ ಆಕೆ ಮನನೊಂದಿದ್ದಳೇ? ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.
ಘಟನಾ ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಲಭ್ಯವಾಗಿರುವ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಹೊಸನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನಡೆಸಲಾಗಿದೆ.

ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





