ಹೊಸನಗರ: ತಾಲೂಕಿನ ಹಡ್ಲುಬೈಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಕಲಾವತಿ ಹೊಸನಗರ ತಾಲೂಕು ಮಟ್ಟದ ‘ಉತ್ತಮ ಶಿಕ್ಷಕಿ’ ಪ್ರಶಸ್ತಿಗೆ ಭಾಜನರಾಗಿರುವ ಹಿನ್ನೆಲೆಯಲ್ಲಿ, ಶಾಲಾ ಆವರಣದಲ್ಲಿ ಅವರಿಗೆ ಅಭಿನಂದನಾ ಸಮಾರಂಭವನ್ನು ಭಾವಪೂರ್ಣವಾಗಿ ಹಮ್ಮಿಕೊಳ್ಳಲಾಗಿತ್ತು.
ಶಿಕ್ಷಕಿಯಾಗಿ ಹಲವು ವರ್ಷಗಳಿಂದ ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆ ಹಾಗೂ ಕರ್ತವ್ಯನಿಷ್ಠೆಯನ್ನು ಗುರುತಿಸಿ ಗ್ರಾಮಸ್ಥರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳು ಕಲಾವತಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ಎಸ್. ಶ್ರೀಧರಮೂರ್ತಿ, “ಕಲಾವತಿ ಅವರ ನಿಸ್ವಾರ್ಥ ಸೇವೆ ಹಾಗೂ ವೃತ್ತಿಯ ಮೇಲಿನ ಕರ್ತವ್ಯನಿಷ್ಠೆ ಎಲ್ಲರಿಗೂ ಮಾದರಿಯಾಗಿದೆ. ಅವರು ಕೇವಲ ಮಕ್ಕಳಿಗೆ ಅಕ್ಷರ ಜ್ಞಾನ ನೀಡುವುದಷ್ಟೇ ಅಲ್ಲದೆ, ಅವರ ಭವಿಷ್ಯ ರೂಪಿಸುವಲ್ಲಿಯೂ ಮಹತ್ವದ ಪಾತ್ರ ವಹಿಸಿದ್ದಾರೆ,” ಎಂದು ಶ್ಲಾಘಿಸಿದರು.
ಇದೇ ವೇಳೆ ಪೋಷಕರಿಗೆ ಕಿವಿಮಾತು ಹೇಳಿದ ಅವರು, ಮಹಾತ್ಮ ಗಾಂಧೀಜಿಯವರ ‘ಮೂರು ಕೋತಿಗಳ’ ತತ್ವವನ್ನು ಉದಾಹರಿಸಿ (ಕೆಟ್ಟದ್ದನ್ನು ನೋಡಬೇಡ, ಕೇಳಬೇಡ, ಮಾತನಾಡಬೇಡ) ಮಕ್ಕಳನ್ನು ಉತ್ತಮ ಸಂಸ್ಕಾರ ಹಾಗೂ ಮೌಲ್ಯಗಳೊಂದಿಗೆ ಬೆಳೆಸುವಲ್ಲಿ ಪೋಷಕರ ಜವಾಬ್ದಾರಿ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಸಮೂಹ ಸಂಪನ್ಮೂಲ ವ್ಯಕ್ತಿ (CRP) ತೀರ್ಥಪ್ಪ ಮಾತನಾಡಿ, “ಶಿಕ್ಷಣ ಕ್ಷೇತ್ರದಲ್ಲಿ ಕಲಾವತಿ ಅವರು ಸುದೀರ್ಘ ಕಾಲದಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಈ ಗೌರವ ಬಹಳ ಹಿಂದೆಯೇ ದೊರೆಯಬೇಕಿತ್ತು. ತಡವಾಗಿಯಾದರೂ ಅರ್ಹ ಶಿಕ್ಷಕಿಗೆ ಪ್ರಶಸ್ತಿ ಸಂದಿರುವುದು ಶಿಕ್ಷಕ ಸಮುದಾಯಕ್ಕೆ ಹೆಮ್ಮೆಯ ಸಂಗತಿ,” ಎಂದರು.
ಭಾವುಕರಾದ ಶಿಕ್ಷಕಿ ಕಲಾವತಿ :
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕಿ ಕಲಾವತಿ, ತಮ್ಮ ಸುದೀರ್ಘ ಸೇವಾವಧಿಯ ಹಳೆಯ ನೆನಪುಗಳನ್ನು ಹಾಗೂ ಶಾಲೆಯೊಂದಿಗಿನ ಅವಿನಾಭಾವ ಸಂಬಂಧವನ್ನು ಮೆಲುಕು ಹಾಕಿ ಭಾವುಕರಾದರು.
“ಈ ಪ್ರಶಸ್ತಿ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಊರಿನವರು, ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ತೋರಿಸುತ್ತಿರುವ ಪ್ರೀತಿ ಮತ್ತು ಗೌರವವೇ ನನಗೆ ದೊರೆತ ಅತಿದೊಡ್ಡ ಪ್ರಶಸ್ತಿ,” ಎಂದು ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೋಕೇಶ್ ವಹಿಸಿದ್ದರು. ಲಕ್ಷ್ಮಣ್, ಅರುಣ್, ಲಿಂಗಪ್ಪ, ರಾಘವೇಂದ್ರ, ನಾಗರಾಜ ಸೇರಿದಂತೆ ಶಾಲಾಭಿವೃದ್ಧಿ ಸಮಿತಿ (SDMC) ಸದಸ್ಯರು, ಗ್ರಾಮಸ್ಥರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಶಿಕ್ಷಕ ಚಂದ್ರಶೇಖರ್ ಅಚ್ಚುಕಟ್ಟಾಗಿ ನಿರೂಪಿಸಿದರು. ಊರಿನ ಜನರೆಲ್ಲ ಒಗ್ಗೂಡಿ ತಮ್ಮ ನೆಚ್ಚಿನ ಶಿಕ್ಷಕಿಯನ್ನು ಗೌರವಿಸಿದ್ದು ಕಾರ್ಯಕ್ರಮದ ವಿಶೇಷ ಮೆರುಗಾಗಿತ್ತು.

