ಹೊಸನಗರ ; ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ರಹಿತರ ಸಂಖ್ಯೆ ಸಾಕಷ್ಟಿರುವ ಕಾರಣಕ್ಕೆ ನೂತನ ಆಶ್ರಯ ಬಡಾವಣೆ ನಿರ್ಮಾಣ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕಳೂರು ಗ್ರಾಮದಲ್ಲಿ ಬಡಾವಣೆ ನಿರ್ಮಾಣಕ್ಕಾಗಿ 10 ಎಕರೆ ಭೂ ಮಂಜೂರಾತಿಗೆ ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಆಶ್ರಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಪಟ್ಟಣ ವ್ಯಾಪ್ತಿಯಲ್ಲಿ ಈಗಿರುವ ಬಡಾವಣೆಗಳಲ್ಲಿನ ಎಲ್ಲಾ ನಿವೇಶನಗಳನ್ನೂ ಹಂಚಿಕೆ ಮಾಡಲಾಗಿದೆ. ಇನ್ನೂ 300ಕ್ಕೂ ಅಧಿಕ ಮಂದಿ ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಭೂಮಿಯ ಅಗತ್ಯವಿರುವ ಕಾರಣಕ್ಕೆ ಕಂದಾಯ ಭೂಮಿಯನ್ನು ಪರಿವರ್ತನೆ ಮಾಡಲು ಕೋರಿಕೆ ಸಲ್ಲಿಸುವ ಅಗತ್ಯವಿದೆ ಎಂದರು.

ಮುಳುಗುಡ್ಡೆ ಗ್ರಾಮದ ಆಶ್ರಯ ಬಡಾವಣೆಯ ಟೌನ್ ಪ್ಲಾನಿಂಗ್ ತಪ್ಪಾಗಿರುವುದನ್ನು ಸರಿಪಡಿಸಲು ಅಗತ್ಯ ಕ್ರಮ ವಹಿಸುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದರು. ಈಗಾಗಲೇ ಬಹುತೇಕ ಎಲ್ಲಾ ಮನೆಗಳು ನಿರ್ಮಾಣವಾಗಿರುವ ಕಳೂರುಕಟ್ಟೆಯ ಆಶ್ರಯ ಬಡಾವಣೆಯಲ್ಲಿ ಮೂಲಸೌಕರ‍್ಯಗಳ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ತಹಸೀಲ್ದಾರ್ ಎಚ್.ಜೆ.ರಶ್ಮಿ, ಪಟ್ಟಣ ಪಂಚಾಯಿತಿ ಮುಖ್ಯಾಕಾರಿ ಹರೀಶ್, ಅಧ್ಯಕ್ಷ ನಾಗಪ್ಪ, ಆಶ್ರಯ ಸಮಿತಿ ಸದಸ್ಯರಾದ ಬಿ.ಆರ್.ಪ್ರಭಾಕರ, ನಾಸೀರ್, ರಾಧಿಕ ರತ್ನಾಕರಶೆಟ್ಟಿ, ಮೂರ್ತಿ ಪಟ್ಟಣ ಪಂಚಾಯತಿ ಸಿಬ್ಬಂದಿಗಳಾದ ಮಂಜುನಾಥ್, ಪರಶುರಾಮ, ಬಸವರಾಜ್, ಗಿರೀಶ್, ನೇತ್ರಾ, ಆಸ್ಮಾ, ಉಮಾ ಶಂಕರ್, ಶೃತಿ, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಚಂದ್ರಪ್ಪ, ಸರೋಜ ಇನ್ನೂ ಮುಂತಾದವರು ಉಪಸ್ಥಿತರಿದ್ದರು.