ಹೊಸನಗರ

ಅಣು ವಿದ್ಯುತ್ ಸ್ಥಾವರ ನಿರ್ಮಾಣ ಮಲೆನಾಡಿಗೆ ಮಾರಕ, ಸಾಗರದಲ್ಲಿ ಮೇ 7ಕ್ಕೆ ಬೃಹತ್ ಪ್ರತಿಭಟನೆ ; ಇಂದೂಧರ್ ಗೌಡ

ಹೊಸನಗರ ; ತಾಲೂಕಿಗೆ ಹೊಂದಿಕೊಂಡಿರುವ ಸಾಗರ ತಾಲೂಕಿನ ಕೋಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಸೂರು ಗ್ರಾಮದಲ್ಲಿ ಅಣುವಿದ್ಯುತ್ ಸ್ಥಾವರ ನಿರ್ಮಿಸುವ ಕೇಂದ್ರ ಸರ್ಕಾರದ ಯೋಜನೆ ಮಲೆನಾಡಿಗೆ ಮರಣ ಶಾಸಕವಾಗಿದೆ ಎಂದು ಆಪ್ಸ್ಕೋಸ್ ಸಂಸ್ಥೆ ಅಧ್ಯಕ್ಷ ಇಂದೂಧರ್ ಗೌಡ ಹೇಳಿದರು.

WhatsApp Group Join Now
Telegram Group Join Now
Instagram Group Join Now

ಅವರು ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾದ ಎನ್‌ಟಿಪಿಸಿ ಕಂಪನಿ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ. ಜಾಗ ಮಂಜೂರಾತಿಗೆ ರಾಜ್ಯ ಸರ್ಕಾರವನ್ನು ಕೋರಿದೆ. ಕೇವಲ ಸಾಗರ ಹೊಸನಗರ ತಾಲೂಕಿಗಷ್ಟೇ ಅಲ್ಲ, ಇದರ ಪರಿಣಾಮ ಇಡೀ ಮಲೆನಾಡು ಭಾಗದ ಮೇಲೆ ಬೀರಲಿದೆ. ಸುಮಾರು 4000 ಮೆ.ವ್ಯಾಟ್ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಯಾದಲ್ಲಿ ಸಾಂಸ್ಕೃತಿಕ ನಗರವೆನಿಸಿರುವ ಸಾಗರ ಹಾಗೂ ಜಿಲ್ಲೆಯ ಮಲೆನಾಡು ನಡುಮನೆ ಹೊಸನಗರ ಸಂಪೂರ್ಣ ವಿನಾಶದತ್ತ ಸಾಗುವುದು ನಿಶ್ಚಿತ ಎಂದು ಆತಂಕ ವ್ಯಕ್ತಪಡಿಸಿದರು.

ಅಣು ವಿದ್ಯುತ್ ಸ್ಥಾವರದಿಂದ ಆಗುವ ದುಷ್ಪರಿಣಾಮಗಳು ಎಲ್ಲರಿಗೂ ಗೊತ್ತಿದೆ. ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣಕ್ಕೆ ಜನತೆ ಹೆಚ್ಚೇನು ವಿರೋಧ ವ್ಯಕ್ತಪಡಿಸಿರಲಿಲ್ಲ. ಆದರೆ ಅಣು ವಿದ್ಯುತ್ ಅಪಾಯಕಾರಿ. ಮುಳುಗಡೆಯಿಂದ ಬದುಕು ಮೂರಾಬಟ್ಟೆಯಾಗಿರುವ ಮಲೆನಾಡಿನ ಜನರ ಸಮಸ್ಯೆ ಬಗೆಹರಿಯುವ ಮುನ್ನವೇ ಮತ್ತೊಂದು ಯೋಜನೆಗೆ ಸರ್ಕಾರ ಮುಂದಾಗಿರುವುದು ಅಕ್ಷಮ್ಯ ಎಂದರು.

ಮುಂದುವರಿದ ದೇಶಗಳು ಸಹಾ ಅಣುವಿದ್ಯುತ್ ಉತ್ಪಾದನೆಗೆ ಹಿಂದೇಟು ಹಾಕುತ್ತಿವೆ. ಆದರೆ ನಮ್ಮಲ್ಲಿ ಅದರಲ್ಲಿಯೂ ಹಸಿರು ತಾಣವಾಗಿರುವ ಪಶ್ಚಿಮಘಟ್ಟ ಪ್ರದೇಶದಲ್ಲಿ ಯೋಜನೆ ಕೈಗೊಳ್ಳಲು ಮುಂದಾಗಿರುವುದು ಸಂಪೂರ್ಣ ಅವೈಜ್ಞಾನಿಕವಾಗಿದೆ. ಸ್ಥಳೀಯ ಜನರನ್ನು ಪರಿಹಾರ ನೀಡಿ ಸರ್ಕಾರ ಒಕ್ಕಲೆಬ್ಬಿಸಬಹುದು ಆದರೆ ಅಕ್ಕಪಕ್ಕದ ಸಾವಿರಾರು ಎಕರೆ ಜಾಗ ವಿಕರಣಕ್ಕೆ ತೆರೆದುಕೊಳ್ಳುವ ಅಪಾಯವಿದೆ. ಈ ಹಿಂದೆ ಕೈಗಾ ಅಣುಕೇಂದ್ರ ವ್ಯಾಪ್ತಿಯಲ್ಲಿ ಕ್ಯಾನ್ಸರ್ ಹಾಗೂ ಇತರ ಮಾರಕ ರೋಗಗಳು ಹೆಚ್ಚಿರುವ ಕುರಿತು ತಜ್ಞರೇ ವರದಿ ನೀಡಿದ್ದಾರೆ. ಇಷ್ಟಾದರೂ ಸರಕಾರ ಯೋಜನೆ ಜಾರಿಗೆ ಮುಂದಾಗಿರುವುದು ಖಂಡನೀಯ ಎಂದರು.

ಸಾಗರ ತಾಲೂಕಿನ ಒಟ್ಟು 9 ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ. ಜನಸಾಮಾನ್ಯರು ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ. ಹೊಸನಗರ ತಾಲೂಕಿನಲ್ಲಿಯೂ ಗ್ರಾಮ ಸಭೆಗಳ ಮೂಲಕ ಜನರ ವಿರೋಧವನ್ನು ಸರ್ಕಾರಕ್ಕೆ ತಿಳಿಸಲಾಗುವುದು. ಪರಿಸ್ಥಿತಿ ಕೈ ಮೀರಿದಲ್ಲಿ ಕಾನೂನು ಹೋರಾಟಕ್ಕೂ ಚಿಂತನೆ ನಡೆದಿದೆ. ಜಿಲ್ಲಾ ಮಟ್ಟದ ಎಲ್ಲಾ ಜನಪ್ರತಿನಿಧಿಗಳಿಗೂ ಮಾಹಿತಿ ನೀಡಲಾಗಿದೆ. ಈ ಯೋಜನೆಯನ್ನು ಕೂಡಲೇ ಸ್ಥಗಿತಗೊಳಿಸಲು ಒತ್ತಡ ಹೇರುವ ಉದ್ದೇಶದಿಂದ ಸಾಗರ ಪಟ್ಟಣದಲ್ಲಿ ಮೇ 7ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಜನರು ಯೋಜನೆಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಲು ಮುಂದಾಗಬೇಕಿದೆ ಎಂದು ಅವರು ತಿಳಿಸಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಈ ಪ್ರತಿಭಟನೆಯಲ್ಲಿ ಮೂಲೆಗದ್ದೆ ಆಶ್ರಮದ ಅಭಿನವ ಚನ್ನಬಸವ ಸ್ವಾಮೀಜಿಯವರು ಸೇರಿದಂತೆ ಅನೇಕ ಸ್ವಾಮೀಜಿಯವರು ಜೊತೆಗೆ ಪಕ್ಷತೀತವಾಗಿ ಎಲ್ಲ ರಾಜಕೀಯ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದು ಹೊಸನಗರ ತಾಲ್ಲೂಕಿಗೆ ಕೇವಲ 20 ಕಿ.ಮೀ. ಅಂತರದಲ್ಲಿ ಅಣು ಸ್ಥಾವರ ನಿರ್ಮಿಸುತ್ತಿರುವುದರಿಂದ ಇದರ ಅಪಾಯ ಹೊಸನಗರ ತಾಲ್ಲೂಕಿನ ಜನತೆಗೆ ತಟ್ಟುತ್ತಿರುವುರಿಂದ ಹೊಸನಗರ ತಾಲ್ಲೂಕಿನ ಎಲ್ಲ ಜನರು ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ಕೇಳಿಕೊಂಡ ಅವರು, ಪರಿಸರವಾದಿ ಸೀತಾರಾಮ್ ಸ್ಥಾವರದಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಕುರಿತು ವಿವರ ನೀಡಿದರು.

ಗೋಷ್ಠಿಯಲ್ಲಿ ಕಳೂರು ಸೊಸೈಟಿ ಅಧ್ಯಕ್ಷ ದುಮ್ಮ ಡಿ.ಆರ್. ವಿನಯ್‌ಕುಮಾರ್, ಪ್ರಮುಖರಾದ ಎಚ್.ಬಿ.ಕಲ್ಯಾಣಪ್ಪಗೌಡ, ಶಿವಾನಂದಗೌಡ, ಎಂ.ವಿ.ಜಯರಾಮ್, ಪರಿಸರವಾದಿ ಸೀತಾರಾಮ್ ಮತ್ತಿತರರು ಇದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!