ರಿಪ್ಪನ್‌ಪೇಟೆ: ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ 59ನೇ ವರ್ಷದ ಗಣಪತಿ ಮೂರ್ತಿಯ ಅದ್ದೂರಿ ವಿಸರ್ಜನಾ ಮೆರವಣಿಗೆ ಸತತ 19 ಗಂಟೆಗಳ ಕಾಲ ನಡೆದ ರಾಜಬೀದಿ ಉತ್ಸವದ ಬಳಿಕ ಶುಕ್ರವಾರ ಹೊಸನಗರ ರಸ್ತೆಯಲ್ಲಿರುವ ತಾವರೆಕೆರೆಯಲ್ಲಿ ಜಲಸ್ಥಂಭನದೊಂದಿಗೆ ಸಂಪನ್ನಗೊಂಡಿತು.
ಗುರುವಾರ ಸಂಜೆ 5.45ಕ್ಕೆ ತಿಲಕ್ ಮಂಟಪದಿಂದ ಆರಂಭಗೊಂಡ ಗಣಪತಿ ಮೆರವಣಿಗೆಯಲ್ಲಿ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಹೆಸರಾಂತ ಜಾನಪದ ಕಲಾತಂಡಗಳು ತಮ್ಮ ಕಲಾಪ್ರದರ್ಶನ ನೀಡಿದವು. ಮೆರವಣಿಗೆಯುದ್ದಕ್ಕೂ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಕಲಾ ವೈಭವವನ್ನು ಕಣ್ತುಂಬಿಕೊಂಡರು.
ಗಣಪತಿ ಮೆರವಣಿಗೆ ವಿನಾಯಕ ವೃತ್ತಕ್ಕೆ ಆಗಮಿಸಿದ ಸಂದರ್ಭದಲ್ಲಿ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಪಾಲ್ಗೊಂಡು ಗಣಪತಿಗೆ ಮಾಲಾರ್ಪಣೆ ಮಾಡಿದರು. ನಾಡಿನಲ್ಲಿ ಉತ್ತಮ ಮಳೆ-ಬೆಳೆ ಹಾಗೂ ಜನರ ಸಮೃದ್ಧಿಗಾಗಿ ಭಗವಂತನಲ್ಲಿ ಪ್ರಾರ್ಥಿಸಿದರು.
ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಶುಕ್ರವಾರ ಬೆಳಗ್ಗೆ ಹೊಸನಗರಕ್ಕೆ ಕಾರ್ಯಕ್ರಮವೊಂದಕ್ಕೆ ತೆರಳುವ ಮಾರ್ಗಮಧ್ಯೆ ವಿಸರ್ಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಣಪತಿಯ ದರ್ಶನ ಪಡೆದರು.
ತೀರ್ಥಹಳ್ಳಿ ಡಿವೈಎಸ್‌ಪಿ ಭಾನುಪ್ರಕಾಶ್, ವೃತ್ತ ನಿರೀಕ್ಷಕ ಗೌಡರ ಗೌಡಪ್ಪ, ಪಿಎಸ್‌ಐ ರಾಜುರೆಡ್ಡಿ ಹಾಗೂ ಪೊಲೀಸ್ ಸಿಬ್ಬಂದಿ, ತಹಶೀಲ್ದಾರ್ ಭರತ್‌ರಾಜ್ ಹಾಗೂ ಸಿಬ್ಬಂದಿ, ಮುಸ್ಲಿಂ ಮುಖಂಡರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಗಣಪತಿಗೆ ಮಾಲಾರ್ಪಣೆ ಮಾಡಿ ದರ್ಶನ ಪಡೆದರು.
ಭಾವೈಕ್ಯತೆ ಮೆರೆದ ಮುಸ್ಲಿಂ ಬಾಂಧವರು :
ಗಣಪತಿ ಮೆರವಣಿಗೆ ಹೊಸನಗರ ರಸ್ತೆಯಲ್ಲಿ ಸಾಗುತ್ತಿದ್ದ ಸಂದರ್ಭದಲ್ಲಿ ಜುಮ್ಮಾ ಮಸೀದಿಯ ಮುಸ್ಲಿಂ ಬಾಂಧವರು ಮಜ್ಜಿಗೆ ಹಾಗೂ ಕೇಕ್ ವಿತರಿಸುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದರು.
ಶಾಂತಿಯುತ ಮೆರವಣಿಗೆಗೆ ಸಹಕಾರ, ಕೃತಜ್ಞತೆ :
ಸತತ 19 ಗಂಟೆಗಳ ಕಾಲ ನಡೆದ ಗಣಪತಿ ರಾಜಬೀದಿ ಉತ್ಸವವು ಶಾಂತಿಯುತವಾಗಿ ಹಾಗೂ ಯಾವುದೇ ಅಹಿತಕರ ಘಟನೆಗಳಿಲ್ಲದೆ ಪೂರ್ಣಗೊಳ್ಳಲು ಸಹಕರಿಸಿದ ಹಿಂದೂ ಮಹಾಸಭಾ ಸಮಿತಿ ಹಾಗೂ ಕಾರ್ಯಕರ್ತರಿಗೆ ಡಿವೈಎಸ್‌ಪಿ ಭಾನುಪ್ರಕಾಶ್ ಮತ್ತು ಪಿಎಸ್‌ಐ ರಾಜುರೆಡ್ಡಿ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಿಂದೂ ಮಹಾಸಭಾ ಸಮಿತಿ ಅಧ್ಯಕ್ಷ ಸುಧೀಂದ್ರ ಪೂಜಾರಿ, ಕಾರ್ಯದರ್ಶಿ ಆರ್.ಎಂ. ನವೀನ್, ಎಂ.ಬಿ. ಮಂಜುನಾಥ, ಎಂ. ಸುರೇಶಸಿಂಗ್, ಆರ್. ರಾಘವೇಂದ್ರ, ಹೆಚ್.ಆರ್. ಆಶೋಕ್, ಡಿ.ಈ. ರವಿಭೂಷಣ, ಸುಂದೀಪ್ ಶೆಟ್ಟಿ, ಹೆಚ್.ಎನ್. ಚೋಳರಾಜ್, ಲಕ್ಷ್ಮಣ ಬಳ್ಳಾರಿ, ಶಾಂತಕುಮಾರ್, ಕಗ್ಗಲಿ ಲಿಂಗಪ್ಪ, ತೀರ್ಥೇಶ್ ಅಡಿಕಟ್ಟು, ಹೆಚ್.ಎನ್. ಉಮೇಶ್, ಸತೀಶ್ ಶೆಟ್ಟಿ, ಚಂದ್ರು ಸಿದ್ದಪ್ಪನಗುಡಿ, ನಾಗರಾಜ್ ಕೆದಲುಗುಡ್ಡೆ, ಶ್ರೀಧರ ಚಿಗುರು, ರಾಘ ಆರ್ಟ್ಸ್, ಚಂದ್ರಕುಮಾರ್ ಸೂರ್ಯಗೌಡ, ರಾಘವೇಂದ್ರ ಚಿಪ್ಪಳಿ, ರವಿಚಂದ್ರ, ಸತೀಶ್ ಎಂ., ಸುಹಾಸ್, ಲಕ್ಷ್ಮಣ ಅಟೋ, ಶ್ರೀನಿವಾಸ್ ಆಚಾರ್, ದೇವರಾಜ್ ಪವಾರ್, ಆರ್. ರಂಜನ್, ಮಂಜುನಾಥ ಆಚಾರ್, ಹೆಚ್.ವಿ. ಪ್ರಶಾಂತ, ಯೋಗೇಂದ್ರಗೌಡ ತರಕಾರಿ, ನಾಗರಾಜ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

