ಹೊಸನಗರ : ತಾಲೂಕಿನ ಕೋಡೂರು ಹಾಗೂ ಮುಂಬಾರು ಗ್ರಾಮ ಪಂಚಾಯಿತಿಯ ನಡುವಿನ ಆಡಳಿತದಲ್ಲಿ ಅಡಕತ್ತರಿಯಲ್ಲಿ ಸಿಲುಕಿಕೊಂಡ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಹಾಗೂ ಹಿಂದುಳಿದವರು, ಸೇರಿದಂತೆ ಆ ಭಾಗದಲ್ಲಿ ವಾಸಿಸುತ್ತಿರುವ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ಸರ್ಕಾರದ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿ ಜೀವನ ನಡೆಸುತ್ತಿದ್ದು, ಬೇಸತ್ತ ಗ್ರಾಮಸ್ಥರು ಇಂದು ತಮ್ಮ ಗ್ರಾಮಕ್ಕೆ ಸಂಪರ್ಕಿಸುವ ಗೌಡಕೊಪ್ಪ – ದೊಡ್ಲಿಮನೆ ಸಂಪರ್ಕ ರಸ್ತೆಯನ್ನು ಗ್ರಾಮಸ್ಥರೇ ಒಗ್ಗೂಡಿ ದುರಸ್ತಿಗೊಳಿಸುತ್ತಿರುವ ಮೂಲಕ ಸರ್ಕಾರದ ವ್ಯವಸ್ಥೆ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದರು.

ಈ ಪ್ರತಿಭಟನೆಯಲ್ಲಿ ಗ್ರಾಮದ ಕೇಶವ, ದಿನೇಶ, ರಾಜೇಶ, ಬಾಲಚಂದ್ರ, ಓಂಕಾರಪ್ಪ, ಮಾಸ್ತೆಯಪ್ಪ, ಮಂಜು, ಯುವರಾಜ್, ಸುದರ್ಶನ್, ಸೀನ ಕುಲಾಲ, ರಂಗಪ್ಪ, ರಾಜಪ್ಪ, ರಾಜೇಂದ್ರ, ಮಂಜುನಾಥ್, ನಾರಾಯಣ ಭಟ್ ಸೇರಿದಂತೆ ಹಲವರು ಭಾಗಿಯಾಗಿ, ತಮ್ಮ ದೈನಂದಿನ ಕೆಲಸ ಕಾರ್ಯ ಬಿಟ್ಟು ತಮ್ಮೂರಿನ ಜನರಿಗೆ ಮೂಲಭೂತವಾಗಿ ಬೇಕಾಗಿರುವ ರಸ್ತೆ ಸಂಪರ್ಕವನ್ನು ತಾವೇ ಸ್ವತಃ ನಿರ್ಮಿಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ ಬಾರಿಸಿ ಗ್ರಾಮಕ್ಕೆ ಅಗತ್ಯವಿರುವ ವಿವಿಧ ಮೂಲಭೂತ ಸೌಕರ್ಯ ದೊರಕದಿದ್ದಲ್ಲಿ ಮುಂಬರುವ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವ ನಿರ್ಧಾರವನ್ನು ವ್ಯಕ್ತಪಡಿಸಿದರು.
ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/1CUpihfEoU/
ಈ ರಸ್ತೆ ಮೂಲಕ ಪ್ರತಿದಿನ ಹತ್ತಾರು ಶಾಲಾ ಮಕ್ಕಳು, ವಯೋವೃದ್ಧರು, ಅನಾರೋಗ್ಯ ಪೀಡಿತ ಗ್ರಾಮಸ್ಥರು, ಆಸ್ಪತ್ರೆ, ಕಚೇರಿಗಳಿಗೆ ತೆರಳುತ್ತಿರುವ ಕಾರಣ ಕೂಡಲೇ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಸಾಮಾನ್ಯ ಜನರಂತೆ ಬದುಕಲು ಬಿಡುವಂತೆ ಆಗ್ರಹಿಸಿದರು.

ಈ ಗ್ರಾಮೀಣ ರಸ್ತೆಯ ಮೂಲಕ ಪ್ರತಿದಿನ ಕಲ್ಲು, ಮರಳು ತುಂಬಿದ ಹಲವಾರು ಟಿಪ್ಪರ್ ಲಾರಿಗಳು ರಾಜಾರೋಷವಾಗಿ ಪ್ರಭಾವಿ ರಾಜಕಾರಣಿಗಳ ಕೈಗೊಂಬೆಯಾಗಿ ಓಡಾಡುತ್ತಿದ್ದು, ಈ ರಾಜಕಾರಣಿಗಳು ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲೇ ಕಲ್ಲು ಕಂಬದ ಬೇಲಿ ನಿರ್ಮಿಸಿ ಅರಣ್ಯ ಭೂಮಿಯನ್ನು ಕಬಳಿಸಲು ಹುನ್ನಾರ ನಡೆಸಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂತು.
ಜಿಲ್ಲಾಧಿಕಾರಿಗಳು ಈ ಪ್ರದೇಶಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಮೂಲಭೂತ ಸೌಲಭ್ಯ ಒದಗಿಸಬೇಕು. ಇಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದರು. ತಪ್ಪಿದಲ್ಲಿ ಮುಂಬರುವ ದಿನಗಳಲ್ಲಿ ತಹಸೀಲ್ದಾರ್ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





