Accident

ಅಡಿಕೆ ಲಾರಿಗಳ ತಡೆಯಿಂದ ರಾಜ್ಯದಲ್ಲಿ ವ್ಯಾಪಾರವೇ ಸ್ಥಗಿತಗೊಳ್ಳುವ ಪರಿಸ್ಥಿತಿ ನಿರ್ಮಾಣ : ಶಾಸಕ ಆರಗ ಜ್ಞಾನೇಂದ್ರ

ಶಿವಮೊಗ್ಗ : ಕರ್ನಾಟಕದಿಂದ ಮಹಾರಾಷ್ಟ್ರದ ರಾಷ್ಟ್ರೀಯ ಹೆದ್ದಾರಿಯ ಮೂಲಕ ಇತರೆ ರಾಜ್ಯಗಳಿಗೆ ಸಾಗುವ ಅಡಿಕೆ ಲಾರಿಗಳನ್ನು ಮಹಾರಾಷ್ಟ್ರದ ಎಫ್‌ಡಿಎ ಅಧಿಕಾರಿಗಳು ತಡೆಹಿಡಿದಿರುವ ಘಟನೆ ರಾಜ್ಯದಲ್ಲಿ ಅಡಿಕೆ ವ್ಯಾಪಾರ ಸ್ಥಗಿತಕ್ಕೆ ಕಾರಣವಾಗಿದೆ ಎಂದು ಕರ್ನಾಟಕ ರಾಜ್ಯ ಅಡಿಕೆ ಸಹಕಾರ ಸಂಘಗಳ ಸಹಕಾರ ಮಹಾಮಂಡಳದ ಅಧ್ಯಕ್ಷ ಹಾಗೂ ಶಾಸಕ ಆರಗ ಜ್ಞಾನೇಂದ್ರ ಗಂಭೀರ ಆತಂಕ ವ್ಯಕ್ತಪಡಿಸಿದರು.

WhatsApp Group Join Now
Telegram Group Join Now
Instagram Group Join Now

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 50ಕ್ಕೂ ಹೆಚ್ಚು ಅಡಿಕೆ ಲಾರಿಗಳನ್ನು ಮಹಾರಾಷ್ಟ್ರದ ಅಧಿಕಾರಿಗಳು ಅಡ್ಡಗಟ್ಟಿದ್ದು, ಇದರಿಂದಾಗಿ ರಾಜ್ಯದ ಅಡಿಕೆ ವ್ಯಾಪಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಮಹಾಮಂಡಳವು ಈ ತಡೆ ಕ್ರಮವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಚೊಗರು ಮಿಶ್ರಿತ ಅಡಿಕೆಯನ್ನು ರಾಸಾಯನಿಕ ಮಿಶ್ರಿತ ಅಡಿಕೆ ಎಂದು ಪರಿಗಣಿಸುವುದು ಮತ್ತು ಯಂತ್ರದಿಂದ ಸುಲಿದ ಅಡಿಕೆಯನ್ನು ದ್ವಿತೀಯ ದರ್ಜೆಯ ಕಡಿಮೆ ಗುಣಮಟ್ಟದ ಅಡಿಕೆ ಎಂದು ಗುರುತಿಸುವುದಾಗಿ ವಿವಿಧ ಪ್ರಯೋಗಾಲಯಗಳಿಗೆ ಪರೀಕ್ಷೆಗೆ ಕಳುಹಿಸುವುದು ಅಸಮಂಜಸ ಕ್ರಮ ಎಂದು ಅವರು ಟೀಕಿಸಿದರು.

ಈ ಕುರಿತು ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿರುವ ಮಹಾಮಂಡಳವು, ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾನೂನಿನಡಿಯಲ್ಲಿ ಸಾಗುತ್ತಿರುವ ಅಡಿಕೆ ಲಾರಿಗಳನ್ನು ಅನಗತ್ಯವಾಗಿ ತಡೆಯದಂತೆ ಮತ್ತು ತಡೆಹಿಡಿದಿರುವ ಲಾರಿಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಮನವಿ ಮಾಡಿದೆ. ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ನಿರಂತರ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಮಹಾರಾಷ್ಟ್ರದ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗುವ ಅಡಿಕೆ ಲಾರಿಗಳನ್ನು ತಡೆಯದೆ ಇತರೆ ರಾಜ್ಯಗಳಿಗೆ ತಲುಪುವಂತೆ ಆಯಾ ರಾಜ್ಯಗಳ ಅಧಿಕಾರಿಗಳು ಪರಿಶೀಲಿಸುವುದು ಸೂಕ್ತ ಎಂದು ಮಹಾಮಂಡಳವು ಅಭಿಪ್ರಾಯಪಟ್ಟಿದೆ. ವಿದೇಶಗಳಿಂದ ಅಕ್ರಮವಾಗಿ ಅಡಿಕೆ ಆಮದು ನಡೆಯುತ್ತಿರುವುದನ್ನು ತಡೆಯಲು ಹಾಗೂ ಅಡಿಕೆ ಕನಿಷ್ಟ ಆಮದು ಬೆಲೆಯನ್ನು 351 ರೂ. ರಿಂದ 450 ರೂ.ಕ್ಕೆ ಹೆಚ್ಚಿಸುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದೆ. ಈ ಸಂಬಂಧ ಸಚಿವರಿಂದ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಗಿದೆ.

ಇದೇ ರೀತಿಯಲ್ಲಿ, ಸ್ವೀಟ್ ಸುಪಾರಿ ವಾರ್ಷಿಕ ನವೀಕರಣದ ನಿಯಮವನ್ನು ಕೈಬಿಡಲು ಮತ್ತು ಅಡಿಕೆ ಸಂಶೋಧನೆಗೆ ಕೇಂದ್ರ ಕೃಷಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಉತ್ತರ ಪ್ರದೇಶ ಸರ್ಕಾರವು ಬೇರೆ ರಾಜ್ಯಗಳಿಂದ ಬರುವ ಅಡಿಕೆಗೆ ಮಂಡಿ ತೆರಿಗೆ ವಿಧಿಸಲು ಪ್ರಾರಂಭಿಸಿರುವುದರಿಂದ, ಅದಕ್ಕೆ ವಿನಾಯಿತಿ ನೀಡುವಂತೆ ಅಲ್ಲಿನ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ.

ಅಡಿಕೆ ಗುಣಮಟ್ಟ ಹಾಳು ಮಾಡುತ್ತಿರುವ ಕೆಲವು ವ್ಯಾಪಾರಿಗಳು ಹಾಗೂ ಕೇಣಿದಾರರು ರಾಸಾಯನಿಕ ಬಣ್ಣ ಬಳಸಿ ಮಾರುಕಟ್ಟೆಯನ್ನು ಗೊಂದಲಗೊಳಿಸುತ್ತಿದ್ದಾರೆ. ಇದರಿಂದ ಅಡಿಕೆ ಬೆಲೆ ಎರಡು ಸಾವಿರ ರೂ.ಗಳಷ್ಟು ಕುಸಿತವಾಗಿದೆ. ಅಡಿಕೆ ಬೆಳೆಗಾರರು ಆತಂಕ ಪಡಬಾರದು. ಮಹಾಮಂಡಳಿ ಅವರ ಬೆಂಬಲಕ್ಕೆ ಸದಾ ನಿಂತು ಸಹಾಯ ಮಾಡಲಿದೆ ಎಂದು ಜ್ಞಾನೇಂದ್ರ ಹೇಳಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಅಡಿಕೆ ಕೇಣಿದಾರರ ಸಭೆಯನ್ನು ಜೂನ್ 26ರಂದು ತೀರ್ಥಹಳ್ಳಿಯಲ್ಲಿ ಆಯೋಜಿಸಲಾಗಿದ್ದು, ರಾಜ್ಯ ಸರ್ಕಾರವು ಅಡಿಕೆಗೆ ಸಂಬಂಧಿಸಿದ ಕಾಯ್ದೆಗಳನ್ನು ಜಾರಿಗೆ ತರಬೇಕು ಎಂದು ಮಹಾಮಂಡಳಿ ಒತ್ತಾಯಿಸಿದೆ.

ಈ ಸಂದರ್ಭ ಮಹಾಮಂಡಳದ ಉಪಾಧ್ಯಕ್ಷ ಕೆ.ಎಂ. ಸೂರ್ಯನಾರಾಯಣ, ನಿರ್ದೇಶಕರು ಹೆಚ್‌.ಎನ್. ಶಿವಶಂಕರ, ಗೋಪಾಲಕೃಷ್ಣ ವಿ. ವೈದ್ಯ, ಗಣಪತಿ ಪರಮೇಶ್ವರ ಭಟ್, ಹೆಚ್‌.ಆರ್. ಅಶೋಕ ನಾಯ್ಕ್, ಸುಬ್ರಮಣ್ಯ ಭಟ್ ಮತ್ತು ಮಹಾಮಂಡಳ ಸಿಇಒ ಮಂಜುನಾಥ ಶರ್ಮ ಉಪಸ್ಥಿತರಿದ್ದರು.

ಕಳೆದ 60 ವರ್ಷಗಳ ಕಾಲ ದೇಶದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದ್ದರೂ ಆರ್‌ಎಸ್‌ಎಸ್ ನೋಂದಣಿ ಬಗ್ಗೆ ಪ್ರಶ್ನಿಸಿಲ್ಲ. ಹಾಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಈ ಕುರಿತು ಸುಖಾಸುಮ್ಮನೆ ಈ ವಿಷಯದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಹೆಚ್ಚಿನ ಮಹತ್ವ ಕೊಡಬೇಕಿಲ್ಲ. ಈ ಹಿಂದಿನ ಬಿಜೆಪಿ ಸರ್ಕಾರ ರಚಿಸುವ ಸಂದರ್ಭದಲ್ಲಿ ಕಾಂಗ್ರೆಸ್‌ನ 17 ಶಾಸಕರನ್ನು ಖರೀದಿಸಲಾಗಿತ್ತು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಅವರು ಈಗ ಬಿಜೆಪಿಯಲ್ಲಿಲ್ಲ. ಬಿಜೆಪಿಯಲ್ಲಿದ್ದಾಗಲೇ ಆ ಕುರಿತು ಮಾತನಾಡಬೇಕಾಗಿತ್ತು. ಈಗ ಮಾತನಾಡಿ ಗೊಂದಲ ಸೃಷ್ಟಿಸಬಾರದು.
– ಆರಗ ಜ್ಞಾನೇಂದ್ರ, ತೀರ್ಥಹಳ್ಳಿ ಶಾಸಕ

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!