ಹೊಸನಗರ

ಕಟ್ಟಿದ್ದು ಸಾವಿರಗಳಲ್ಲಿ, ಸಿಕ್ಕಿದ್ದು ಬಿಡಿಗಾಸು! ಮಲೆನಾಡ ರೈತರಿಗೆ ಬೆಳೆ ವಿಮೆ ‘ಮಹಾ ಮೋಸ’ : ಮಳೆ ಮಾಪನವೂ ಫೇಲ್, ಸರ್ಕಾರವೂ ಸೈಲೆಂಟ್

ಕಳೆದ ಎರಡು ವರ್ಷಗಳಿಂದಲೂ ಮಲೆನಾಡು ಭಾಗದ ಹೊಸನಗರ, ಸಾಗರ ಹಾಗೂ ತೀರ್ಥಹಳ್ಳಿ ತಾಲ್ಲೂಕುಗಳ ರೈತರಿಗೆ ಸರ್ಕಾರದ ಬೆಳೆ ವಿಮೆ ಪರಿಹಾರ ಧನ ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ ಎಂದು ವಾಟಗೋಡು ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ.

Vatagodu Suresh

ಹೊಸನಗರ: ಕಳೆದ ಎರಡು ವರ್ಷಗಳಿಂದಲೂ ಮಲೆನಾಡು ಭಾಗದ ಹೊಸನಗರ, ಸಾಗರ ಹಾಗೂ ತೀರ್ಥಹಳ್ಳಿ ತಾಲ್ಲೂಕುಗಳ ರೈತರಿಗೆ ಸರ್ಕಾರದ ಹವಾಮಾನ ಆಧಾರಿತ ಬೆಳೆ ವಿಮೆ (WBCIS) ಪರಿಹಾರ ಧನ ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ. ರೈತರ ಪರ ಧ್ವನಿ ಎತ್ತಬೇಕಾದ ಸ್ಥಳೀಯ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸಂಪೂರ್ಣ ಕುಂಭಕರ್ಣ ನಿದ್ದೆಗೆ ಜಾರಿದ್ದಾರೆ ಎಂದು ಜಿಲ್ಲಾ ಕೃಷಿಕ ಸಮಾಜದ ಪ್ರತಿನಿಧಿ ವಾಟಗೋಡು ಸುರೇಶ್ ತೀವ್ರ ವಾಗ್ದಾಳಿ ನಡೆಸಿದರು.

WhatsApp Group Join Now
Telegram Group Join Now
Instagram Group Join Now

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕೃತಿ ವಿಕೋಪ, ಎಲೆಚುಕ್ಕಿ, ಹಳದಿ ರೋಗ ಮತ್ತು ತೀವ್ರ ಮಳೆ-ಬರದಿಂದ ಕಂಗಾಲಾಗಿರುವ ಮಲೆನಾಡಿನ ರೈತರು ಇಂದು ಅತ್ಯಂತ ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರೀಮಿಯಂ ಸಾವಿರಗಳಲ್ಲಿ, ಪರಿಹಾರ ಬಿಡಿಗಾಸು:

ರೈತರು ಕಷ್ಟಪಟ್ಟು ತಮ್ಮ ಜಮೀನುಗಳಲ್ಲಿ ಬೆಳೆದ ಅಡಿಕೆ, ಶುಂಠಿ, ಕಾಳುಮೆಣಸು, ಭತ್ತ ಮುಂತಾದ ವಾಣಿಜ್ಯ ಬೆಳೆಗಳಿಗೆ ಪ್ರತಿ ಎಕರೆಗೆ ಸಾವಿರಾರು ರೂಪಾಯಿಗಳನ್ನು ಸಾಲ ಸೋಲ ಮಾಡಿ ವಿಮಾ ಕಂತಿನ (ಪ್ರೀಮಿಯಂ) ರೂಪದಲ್ಲಿ ಕಟ್ಟಿದ್ದಾರೆ. ನಿಯಮಾನುಸಾರ ಬೆಳೆ ಹಾನಿಯಾದಾಗ ಪ್ರತಿ ಎಕರೆಗೆ ಕನಿಷ್ಠ ₹30,000 ದಿಂದ ₹40,000 ದವರೆಗೂ ವಿಮಾ ಪರಿಹಾರ ಸಿಗಬೇಕಿತ್ತು. ಆದರೆ ವಿಮಾ ಕಂಪನಿಗಳು ರೈತರ ಖಾತೆಗೆ ಕೇವಲ ₹100, ₹200, ₹500 ರಿಂದ ₹1,000 ಹಾಕಿ ಅನ್ನದಾತನ ಜತೆ ಕ್ರೂರ ತಮಾಷೆ ಮಾಡುತ್ತಿವೆ. ಇದು ಇಡೀ ಕೃಷಿಕ ಸಮುದಾಯಕ್ಕೆ ಬಗೆದ ಬಹುದೊಡ್ಡ ದ್ರೋಹ ಎಂದು ಆಕ್ರೋಶ ಹೊರಹಾಕಿದರು.

ದೋಷಪೂರಿತ ಮಳೆ ಮಾಪನ ಯಂತ್ರಗಳು – ವಿಮಾ ಕಂಪನಿಗಳ ಲೂಟಿ:

ಹೊಸನಗರ ಸೇರಿದಂತೆ ಮಲೆನಾಡಿನ ಬಹುತೇಕ ಭಾಗಗಳಲ್ಲಿ ಮಳೆ ಮಾಪನ ಕೇಂದ್ರಗಳು (Rain Gauges) ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ವಾಸ್ತವದಲ್ಲಿ ವಿಪರೀತ ಮಳೆಯಾಗಿ ಅಥವಾ ಮಳೆಯ ಅಭಾವದಿಂದ ಬೆಳೆ ನಷ್ಟವಾಗಿದ್ದರೂ, ತಾಂತ್ರಿಕವಾಗಿ ದೋಷಪೂರಿತವಾಗಿರುವ ಈ ಮಾಪನಗಳ ವರದಿಯನ್ನೇ ಆಧಾರವಾಗಿಟ್ಟುಕೊಂಡು ವಿಮಾ ಕಂಪನಿಗಳು ಪರಿಹಾರವನ್ನು ನಿರಾಕರಿಸುತ್ತಿವೆ. ಈ ಬಗ್ಗೆ ಇಲಾಖಾ ಮಟ್ಟದಲ್ಲಿ ಹಾಗೂ ವಿಮಾ ಕಂಪನಿಗಳಿಗೆ ನೂರಾರು ದೂರುಗಳನ್ನು ನೀಡಿದ್ದರೂ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಸರ್ಕಾರದ ಅಸಡ್ಡೆಯನ್ನೇ ಬಂಡವಾಳ ಮಾಡಿಕೊಂಡಿರುವ ವಿಮಾ ಕಂಪನಿಗಳು ಕೋಟ್ಯಂತರ ರೂಪಾಯಿ ಪ್ರೀಮಿಯಂ ಹಣವನ್ನು ಲಪಟಾಯಿಸಿ ರೈತರನ್ನು ಬಲಿಪಶು ಮಾಡುತ್ತಿವೆ ಎಂದು ಆರೋಪಿಸಿದರು.

ಕೇವಲ ಸಭೆಗಳಿಗಷ್ಟೇ ಸೀಮಿತವಾದ ಜನಪ್ರತಿನಿಧಿಗಳು:

ಮಲೆನಾಡು ಭಾಗದ ಶಾಸಕರು ಮತ್ತು ಜಿಲ್ಲೆಯ ಸಚಿವರು ಕೆಡಿಪಿ ಹಾಗೂ ರೈತ ಮುಖಂಡರ ಸಭೆಗಳಲ್ಲಿ ಕೇವಲ ಭಾಷಣ ಬಿಗಿಯುವುದು, ಆಶ್ವಾಸನೆ ಕೊಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಸಭೆ ಮುಗಿದ ಮರುಕ್ಷಣವೇ ವಿಮಾ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಮರೆತು ಸುಮ್ಮನಾಗುತ್ತಿದ್ದಾರೆ. ಜನಪ್ರತಿನಿಧಿಗಳ ಈ ಜಾಣ ಮೌನದಿಂದಾಗಿ ಮಲೆನಾಡಿನ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿನ್ನೆಯಷ್ಟೇ ಬಿಡುಗಡೆಯಾಗಿರುವ ಬೆಳೆ ವಿಮಾ ಮೊತ್ತವು ಹೊಸನಗರ, ಸಾಗರ, ತೀರ್ಥಹಳ್ಳಿ ಭಾಗದ ರೈತರಿಗೆ ತೀವ್ರ ನಿರಾಶೆ ಹಾಗೂ ಅನ್ಯಾಯವನ್ನುಂಟುಮಾಡಿದೆ ಎಂದು ವಿಷಾದಿಸಿದರು.

“ಸರ್ಕಾರ ಹಾಗೂ ಜಿಲ್ಲಾಡಳಿತ ತಕ್ಷಣವೇ ಮಧ್ಯಪ್ರವೇಶಿಸಿ ಜಂಟಿ ಸಮೀಕ್ಷೆ ನಡೆಸಬೇಕು. ಕಳೆದ ಎರಡು ವರ್ಷಗಳಿಂದ ಬಾಕಿ ಉಳಿದಿರುವ ಮತ್ತು ಅರ್ಹವಾಗಿ ಸಿಗಬೇಕಾದ ಬೆಳೆ ವಿಮೆ ಪರಿಹಾರದ ಮೊತ್ತವನ್ನು ಕೂಡಲೇ ರೈತರ ಖಾತೆಗೆ ಜಮೆ ಮಾಡಬೇಕು. ಇಲ್ಲವಾದಲ್ಲಿ ಹೊಸನಗರ, ಸಾಗರ, ತೀರ್ಥಹಳ್ಳಿ ಸೇರಿದಂತೆ ಇಡೀ ಜಿಲ್ಲೆಯ ರೈತರನ್ನು ಒಗ್ಗೂಡಿಸಿ, ಹೆದ್ದಾರಿ ಬಂದ್ ಹಾಗೂ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರಾಜ್ಯ ಸರ್ಕಾರದ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯ.”
– ವಾಟಗೋಡು ಸುರೇಶ್, ಜಿಲ್ಲಾ ಕೃಷಿಕ ಸಮಾಜದ ಪ್ರತಿನಿಧಿ

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]

error: Content is protected !!