ಹೊಸನಗರ

ಹಿರಿಯರು ಮತ್ತು ಹೆಣ್ಣುಮಕ್ಕಳ ರಕ್ಷಣೆಗೆ ಕಾನೂನು ನೆರವು ಅನಿವಾರ್ಯ – ನ್ಯಾಯಾಧೀಶ ಮಾರುತಿ ಶಿಂಧೆ

ಹಿರಿಯ ನಾಗರಿಕರಿಗೆ ಸೂಕ್ತ ಗೌರವ ನೀಡುವುದು, ಹೆಣ್ಣುಮಕ್ಕಳ ಹಕ್ಕುಗಳನ್ನು ಸಂರಕ್ಷಿಸುವುದು ಹಾಗೂ ಪ್ರತಿಯೊಬ್ಬರ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡುವುದು ನಾಗರಿಕ ಸಮಾಜದ ಕರ್ತವ್ಯ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ವ್ಯವಹಾರ ನ್ಯಾಯಾಧೀಶ ಮಾರುತಿ ಶಿಂಧೆ ತಿಳಿಸಿದರು.

Hosanagara Police station

ಹೊಸನಗರ: ಸಮಾಜದಲ್ಲಿ ಹಿರಿಯ ನಾಗರಿಕರಿಗೆ ಸೂಕ್ತ ಗೌರವ ನೀಡುವುದು, ಹೆಣ್ಣುಮಕ್ಕಳ ಹಕ್ಕುಗಳನ್ನು ಸಂರಕ್ಷಿಸುವುದು ಹಾಗೂ ಪ್ರತಿಯೊಬ್ಬರ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡುವುದು ನಾಗರಿಕ ಸಮಾಜದ ಕರ್ತವ್ಯ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ವ್ಯವಹಾರ ನ್ಯಾಯಾಧೀಶ ಮಾರುತಿ ಶಿಂಧೆ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now

ಪಟ್ಟಣದ ಆರಕ್ಷಕ ಠಾಣೆ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಹಿರಿಯ ನಾಗರಿಕರ ದಿನ, ವಿಶ್ವ ಮಾನಸಿಕ ಆರೋಗ್ಯ ದಿನ ಹಾಗೂ ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯ ತ್ರಿವಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯರಿಗೆ ಆದ್ಯತೆ, ಕಾನೂನು ಬಲ:

ಹಿರಿಯ ನಾಗರಿಕರು ಸಮಾಜದ ಆಸ್ತಿ. ಕುಟುಂಬ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅವರಿಗೆ ಪ್ರಥಮ ಪ್ರಾಶಸ್ತ್ಯ ಹಾಗೂ ಗೌರವ ನೀಡಬೇಕು. ಹಿರಿಯರ ಹಕ್ಕುಗಳ ರಕ್ಷಣೆಗಾಗಿ ಕಾನೂನಿನಲ್ಲಿ ವಿಶೇಷ ಅವಕಾಶಗಳಿದ್ದು, ಸಂಕಷ್ಟದ ಸಮಯದಲ್ಲಿ ಕಾನೂನು ಸೇವಾ ಸಮಿತಿಯ ನೆರವು ಪಡೆಯಬಹುದು ಎಂದು ನ್ಯಾಯಾಧೀಶರು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಲ್ ಇನ್ಸ್ಪೆಕ್ಟರ್ ಗೌಡಪ್ಪ ಗೌಡರ್ ಮಾತನಾಡಿ, “ಪೊಲೀಸ್ ಇಲಾಖೆಯು ಕೇವಲ ಕಾನೂನು ಸುವ್ಯವಸ್ಥೆ ಪಾಲನೆಗಷ್ಟೇ ಸೀಮಿತವಾಗಿಲ್ಲ; ಹಿರಿಯ ನಾಗರಿಕರ, ಮಹಿಳೆಯರ ಮತ್ತು ಮಕ್ಕಳ ಸಮಸ್ಯೆಗಳಿಗೆ ಸ್ಪಂದಿಸಲು ಸದಾ ಮುಂಚೂಣಿಯಲ್ಲಿದೆ. ಇಲಾಖೆಯ ವಿವಿಧ ಸಹಾಯವಾಣಿ ಹಾಗೂ ಕಾನೂನು ರಕ್ಷಣಾ ವ್ಯವಸ್ಥೆಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು” ಎಂದರು.

ಮಾನಸಿಕ ಆರೋಗ್ಯ ಮತ್ತು ಹೆಣ್ಣುಮಕ್ಕಳ ಸಬಲೀಕರಣ:

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಎಚ್. ಚಂದ್ರಪ್ಪ ಹಾಗೂ ವಕೀಲರಾದ ಎಚ್.ಎನ್. ಗುರುಕಿರಣ್, ಮೋಹನ್ ಜಿ. ಶೆಟ್ಟಿ ಮಾತನಾಡಿ, ಇಂದಿನ ಆಧುನಿಕ ಹಾಗೂ ಒತ್ತಡದ ಜೀವನಶೈಲಿಯಲ್ಲಿ ಮಾನಸಿಕ ಆರೋಗ್ಯದ ಕಡೆಗೆ ಗಮನ ಹರಿಸುವುದು ಅತ್ಯಂತ ಅಗತ್ಯವಾಗಿದೆ. ಮಾನಸಿಕ ಒತ್ತಡ ನಿರ್ವಹಣೆಗೆ ಮುಕ್ತ ಸಮಾಲೋಚನೆ ಮುಖ್ಯ. ಹಾಗೆಯೇ, ಹೆಣ್ಣುಮಕ್ಕಳಿಗೆ ಸಮಾನ ಶಿಕ್ಷಣ, ರಕ್ಷಣೆ ಮತ್ತು ಆತ್ಮವಿಶ್ವಾಸ ತುಂಬುವ ಮೂಲಕ ಸಮಾಜದಲ್ಲಿ ಅವರನ್ನು ಸಬಲೀಕರಣಗೊಳಿಸಬೇಕಾದ ಜವಾಬ್ದಾರಿ ಪೋಷಕರು ಮತ್ತು ಸಮಾಜದ ಮೇಲಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಂತೋಷ್ ಬಾಗೋಜಿ, ಪೊಲೀಸ್ ಸಿಬ್ಬಂದಿ, ಶಿಕ್ಷಣ ಇಲಾಖೆಯ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಕಾನ್ಸ್ಟೇಬಲ್ ಮಹೇಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]

error: Content is protected !!