ಹೊಸನಗರ: ತಾಲೂಕಿನ ವ್ಯಾಪ್ತಿಗೆ ಒಳಪಡುವ ಸಾಗರ ಹಾಗೂ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 143 ಮತಗಟ್ಟೆಗಳಿದ್ದು, 97,704 ಅರ್ಹ ಮತದಾರರಿದ್ದಾರೆ ಎಂದು ತಾಲೂಕು ತಹಶೀಲ್ದಾರ್ ಭರತ್‌ರಾಜ್ ತಿಳಿಸಿದ್ದಾರೆ.
ತಾಲೂಕು ಕಚೇರಿ ಆವರಣದಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಪೂರ್ಣಗೊಳಿಸಿ, ಅಂತಿಮ ಮತದಾರರ ಪಟ್ಟಿಯನ್ನು ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕ್ಷೇತ್ರವಾರು ಮತದಾರರ ವಿವರ:
117-ಸಾಗರ ವಿಧಾನಸಭಾ ಕ್ಷೇತ್ರ:
ಒಟ್ಟು 78 ಮತಗಟ್ಟೆಗಳಿದ್ದು, 53,163 ಮತದಾರರಿದ್ದಾರೆ. ಇವರಲ್ಲಿ 26,322 ಪುರುಷರು ಮತ್ತು 22,841 ಮಹಿಳಾ ಮತದಾರರಿದ್ದಾರೆ. ಈ ಬಾರಿಯ ಪರಿಷ್ಕರಣೆಯಲ್ಲಿ 8 ನೂತನ ಮತಗಟ್ಟೆಗಳನ್ನು ಸೇರಿಸಲಾಗಿದೆ.
114-ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ:
ಒಟ್ಟು 65 ಮತಗಟ್ಟೆಗಳಿದ್ದು, 44,541 ಮತದಾರರಿದ್ದಾರೆ. ಇವರಲ್ಲಿ 22,097 ಪುರುಷರು ಹಾಗೂ 22,444 ಮಹಿಳಾ ಮತದಾರರು ಸೇರಿದ್ದಾರೆ. ಇಲ್ಲಿ 3 ಹೊಸ ಮತಗಟ್ಟೆಗಳನ್ನು ಗುರುತಿಸಲಾಗಿದೆ.
ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಭಿನಂದನೆ:
ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯನ್ನು ನಿಗದಿತ ಸಮಯದೊಳಗೆ ಯಶಸ್ವಿಯಾಗಿ ಮುಗಿಸಲು ಸಹಕರಿಸಿದ ರಾಜಕೀಯ ಪಕ್ಷಗಳ ಮುಖಂಡರು, ಮಾರ್ಗದರ್ಶನ ನೀಡಿದ ಮತದಾರರ ನೋಂದಣಾಧಿಕಾರಿ ವೀರೇಶ್ ಕುಮಾರ್, ಭೂ ದಾಖಲೆಗಳ ಉಪ ನಿರ್ದೇಶಕಿ ಆಶಾ ಕುಮಾರಿ, ಹೆಚ್ಚುವರಿ ಸಹಾಯಕ ಮತದಾರ ನೋಂದಣಾಧಿಕಾರಿಗಳು, ಶಿರಸ್ತೇದಾರ್‌ಗಳಾದ ಸತೀಶ್ ಮತ್ತು ಮಹಮದ್ ರೈಸ್ ಅವರಿಗೆ ತಹಶೀಲ್ದಾರ್ ಧನ್ಯವಾದ ತಿಳಿಸಿದರು. ಜೊತೆಗೆ ಕ್ಷೇತ್ರ ಮಟ್ಟದಲ್ಲಿ ಶ್ರಮಿಸಿದ ಬಿಎಲ್‌ಒಗಳು, ಮತಗಟ್ಟೆ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು ಹಾಗೂ ಮತದಾರರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಪಿ. ಸುರೇಶ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ನಾಗಾರ್ಜುನ್, ಜೆಡಿಎಸ್ ತಾಲೂಕು ಅಧ್ಯಕ್ಷ ರಿಪ್ಪನ್‌ಪೇಟೆ ವರ್ತೇಶ್, ಕಾಂಗ್ರೆಸ್ ಮುಖಂಡ ಉಬೇದುಲ್ಲಾ, ಕಂದಾಯ ಇಲಾಖೆಯ ಸಿಬ್ಬಂದಿ ಚಿರಾಗ್, ಮಹಮದ್ ರೈಸ್ ಸೇರಿದಂತೆ ಹಲವರು ಹಾಜರಿದ್ದರು.

