ಹೊಸನಗರ: ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ‘ಶ್ರೀ ಅನ್ನಪೂರ್ಣೇಶ್ವರಿ ಟ್ರಾವೆಲ್ಸ್’ ತಂಡವು ಕಳೆದ 8 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಸಮಾಜಮುಖಿ ಸೇವಾ ಕಾರ್ಯ ಈ ಬಾರಿಯೂ ಯಶಸ್ವಿಯಾಗಿ ನೆರವೇರಿತು.
ಪ್ರತಿವರ್ಷದಂತೆ ಈ ವರ್ಷವೂ ಗ್ರಾಮೀಣ ಪ್ರದೇಶದ ಸಂಪೆಕಟ್ಟೆ, ಹೆಬ್ಬುರಳಿ, ಬಡೇಬೈಲು, ಅರಮನೆಕೊಪ್ಪ, ಕಟ್ಟಿನಹೊಳೆ ಹಾಗೂ ಹೊಸೂರು ಸೇರಿದಂತೆ ಹಲವು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್‌ಗಳನ್ನು ವಿತರಿಸಲಾಯಿತು. ಜತೆಗೆ ಮಕ್ಕಳ ಕಲಿಕೆಗೆ ಪೂರಕವಾಗಿ ನೋಟ್‌ಬುಕ್, ಪೆನ್ನು ಹಾಗೂ ಶಾಲಾ ಚಟುವಟಿಕೆಗಳಿಗೆ ಉಪಯುಕ್ತವಾಗುವಂತೆ ಧ್ವನಿವರ್ಧಕ (ಸ್ಪೀಕರ್)ಗಳನ್ನು ಕೊಡುಗೆಯಾಗಿ ನೀಡಿದರು.

ಶಿಕ್ಷಣ ಸಬಲೀಕರಣವೇ ಮುಖ್ಯ ಉದ್ದೇಶ:
“ಸರ್ಕಾರಿ ಶಾಲೆಗಳ ಸಬಲೀಕರಣವಾಗಬೇಕು, ಗ್ರಾಮೀಣ ಭಾಗದ ಪ್ರತಿಯೊಂದು ಮಗುವಿಗೂ ಉತ್ತಮ ಗುಣಮಟ್ಟದ ಶಿಕ್ಷಣ ಲಭಿಸಿ ಅವರ ಭವಿಷ್ಯ ಉಜ್ವಲವಾಗಬೇಕು ಎಂಬುದು ನಮ್ಮ ತಂಡದ ಮುಖ್ಯ ಆಶಯ. ಕಳೆದ ಎಂಟು ವರ್ಷಗಳಿಂದ ಮಾಡುತ್ತಿರುವ ಈ ಅಳಿಲು ಸೇವೆಯು ನಮಗೆ ಆತ್ಮತೃಪ್ತಿ ನೀಡಿದೆ. ಮುಂದಿನ ದಿನಗಳಲ್ಲಿ ಈ ಸೇವೆಯನ್ನು ಇನ್ನಷ್ಟು ಗ್ರಾಮೀಣ ಶಾಲೆಗಳಿಗೆ ವಿಸ್ತರಿಸುವ ಗುರಿ ಹೊಂದಲಾಗಿದೆ,” ಎಂದು ತಂಡದ ಸದಸ್ಯರು ತಿಳಿಸಿದರು.

ಕೃತಜ್ಞತೆ:
ಈ ನಿರಂತರ ಸೇವಾ ಕೈಂಕರ್ಯಕ್ಕೆ ಬೆನ್ನೆಲುಬಾಗಿ ನಿಂತಿರುವ ಶ್ರೀ ಅನ್ನಪೂರ್ಣೇಶ್ವರಿ ಟ್ರಾವೆಲ್ಸ್‌ನ ಸುಧೀರ್ ಹಾಗೂ ದುರ್ಗಾಶಕ್ತಿ ಬಸ್‌ನ ಮಾಲೀಕರಾದ ನಾಗರಾಜ್ ಅವರ ಪ್ರೋತ್ಸಾಹ ಶ್ಲಾಘನೀಯ. ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ದಿನೇಶ್ ಕುಂಟಿಗಿ, ಪುರುಷೋತ್ತಮ್ ನಿಟ್ಟೂರು, ಕೆ ಆರ್ ಪುರಂ ಚಂದ್ರು ಹಾಗೂ ಸುಮಾರು 10–12 ಜನರ ಸೇವಾ ಮನೋಭಾವದ ಯುವ ತಂಡದ ಕಾರ್ಯಕ್ಕೆ ಶಾಲಾ ಶಿಕ್ಷಕರು ಹಾಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಮಕ್ಕಳ ಮುಖದಲ್ಲಿ ಮೂಡಿದ ನಗು ಸೇವಾ ಕಾರ್ಯಕ್ಕೆ ಮತ್ತಷ್ಟು ಬಲ ತುಂಬಿದ್ದು, ಟ್ರಾವೆಲ್ಸ್ ಸಂಸ್ಥೆಯು ಸಾರಿಗೆ ಸೇವೆಯ ಜತೆಜತೆಗೆ ಸಮಾಜಸೇವೆಯಲ್ಲೂ ಮಾದರಿಯಾಗಿ ನಿಂತಿದೆ.

