HOSANAGARA ; ಹೊಸನಗರದ ಗತಕಾಲದ ವೈಭವದಿಂದ ಪ್ರಚಲಿತ ವರ್ತಮಾನದ ವರೆಗಿನ ಎಲ್ಲಾ ಕ್ಷೇತ್ರಗಳಲ್ಲಿನ ಆಗುಹೋಗುಗಳ ಕುರಿತು ಬೆಳಕು ಚೆಲ್ಲುವ ವಿಶೇಷ ಕೃತಿ ನಮ್ಮೂರ ಕಣಜ ನ.25ರಂದು ಬಿಡುಗಡೆಗೊಳ್ಳಲಿದೆ ಎಂದು ಪುಸ್ತಕದ ಪ್ರಧಾನ ಸಂಪಾದಕ ಡಾ.ಶ್ರೀಪತಿ ಹಳಗುಂದ ತಿಳಿಸಿದರು.
ಅವರು ಇಲ್ಲಿನ ಕೊಡಚಾದ್ರಿ ಕಾಲೇಜಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಹೊಸನಗರವು ಪಡೆದುಕೊಂಡಿರುವುದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. ರಾಜ್ಯದ ಜನರಿಗೆ ಬೆಳಕು ನೀಡಿ, ತಮ್ಮ ಬದುಕನ್ನು ಕತ್ತಲಾಗಿಸಿಕೊಂಡ ನತದೃಷ್ಟರು ಎನ್ನಬಹುದು. ವಿಧಾನಸಭಾ ಕ್ಷೇತ್ರವನ್ನು ಕಡಿಮೆ ಜನಸಂಖ್ಯೆಯ ಕಾರಣಕ್ಕೇ ಕಳೆದುಕೊಂಡಿತು. ಇದಕ್ಕೆ ಕಾರಣ ಮುಳುಗಡೆ ಹೆಸರಿನಲ್ಲಿ ಗುಳೆ ಹೊರಟ ಇಲ್ಲಿನ ನಿವಾಸಿಗಳು. ನಾಲ್ಕೈದು ಅಣೆಕಟ್ಟು ನಿರ್ಮಾಣದಿಂದ ಮನೆ, ಮಠ, ಹೊಲ, ಗದ್ದೆ, ತೋಟ ಎಲ್ಲವನ್ನೂ ನುಂಗಿಬಿಟ್ಟಿತು. ಅಳಿದುಳಿದವರು ನೆಲ ಮೂಲ ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿರುವುದು ಶ್ಲಾಘನೆಯ ವಿಚಾರ. ಇದನ್ನು ಸಾಕ್ಷಿಕರಿಸಲು ಹೊರಟಿರುವುದೇ ನಮ್ಮೂರ ಕಣಜ ಪುಸ್ತಕ ಎಂದರು.
ಅಂದು ಬೆಳಿಗ್ಗೆ 10 ಗಂಟೆಗೆ ಕೊಡಚಾದ್ರಿ ಕಾಲೇಜು ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಸಮ್ಮುಖದಲ್ಲಿ ಹಿರಿಯ ಸಾಹಿತಿ, ಚಿಂತಕರಾದ ಮೈಸೂರಿನ ಪ್ರೊ.ಕಾಳೇಗೌಡ ನಾಗವಾರ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕೃತಿಯ ಕುರಿತು ಸುಧೀರ್ ಕುಮಾರ್ ಮುರೊಳ್ಳಿ ಕೊಪ್ಪ ಮಾತನಾಡಲಿದ್ದಾರೆ. ಪ್ರಾಂಶುಪಾಲ ಡಾ.ಕೆ. ಉಮೇಶ್ ಗೌರವ ಸಂಪಾದಕ ಡಾ.ಪಿ.ಶಾಂತರಾಮ ಪ್ರಭು, ಪ್ರಕಾಶಕ ಬಿ.ಎನ್.ಸುನಿಲ್ ಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಡಿ.ಮಂಜುನಾಥ್ ಮತ್ತಿತರರು ಉಪಸ್ಥಿತರಿರುವರು ಎಂದರು.
ಸುಮಾರು 900 ಪುಟಗಳನ್ನು ಹೊಂದಿರುವ ಪುಸ್ತಕದಲ್ಲಿ ಸಾಹಿತ್ಯ, ಸಂಗೀತ ಸ್ವಾತಂತ್ರ‍್ಯ ಹೋರಾಟಗಾರರು, ಸೈನಿಕರು, ಶಿಕ್ಷಣ, ಗ್ರಂಥಾಲಯ, ಶಾಸನ, ಸಾರಿಗೆ, ಸಂಪ್ರದಾಯ, ಸಾಧಕ-ಬಾಧಕ, ಸಹಕಾರ, ಸಂಶೋಧನೆ, ಮುಳುಗಡೆ, ಮಠ ಪರಂಪರೆ, ಮಳೆ ಬೆಳೆ, ಜನಪದ ಜಾತ್ರೆ, ಪರಿಸರ, ಪ್ರಕೃತಿ, ಪ್ರವಾಸ, ಪತ್ರಿಕೋದ್ಯಮ, ಆರ್ಥಿಕತೆ, ನಾಗರೀಕತೆ, ದೈವಾರಾಧನೆ, ಧರ್ಮ, ಇತಿಹಾಸ, ಭಾಷೆ, ಬರಹಗಾರರು, ಭೌಗೋಳಿಕತೆ, ಭಾಗವತಿಕೆ, ಯಕ್ಷಗಾನ, ಹವಾಮಾನ, ಕ್ರೀಡೆ, ಕಲೆ, ಕರಕುಶಲ, ಚಿತ್ರಕಲೆ, ಬುಡಕಟ್ಟುಗಳು, ಕೃಷಿ, ಕೋಟೆಗಳು, ಕೈಗಾರಿಕೆ, ತಾಳಮದ್ದಲೆ, ರಂಗಭೂಮಿ, ರಾಕೆಟ್ ತಯಾರಿಕೆ, ಜೀವವೈವಿಧ್ಯತೆ, ಸಾಂಸ್ಕೃತಿಕ ವೈಭವ, ವಲಸೆ, ನಾಟೀ ವೈದ್ಯರು, ಚಳುವಳಿಗಳು, ಹಾಡು, ಹಸೆ, ಮೊದಮೊದಲು, ಕನಸು, ಕನವರಿಕೆ, ವೇದನೆ, ನಿವೇದನೆ, ಸಂವೇದನೆ, ಗಣ್ಯರ ಸಂದರ್ಶನ ಹೀಗೆ ಹಲವು ವಿಷಯಗಳನ್ನು ಪುಸ್ತಕ ಒಳಗೊಂಡಿದೆ.
ಈ ಕೃತಿಯಲ್ಲಿ 25ನೇ ವಯೋಮಾನದವರಿಂದ 85 ವಯಸ್ಸಿನ ಲೇಖಕರಿದ್ದಾರೆ. ಬಹುತೇಕ ಲೇಖಕರು ಹೊಸನಗರ ತಾಲ್ಲೂಕಿನವರೇ ಎಂಬದು ವಿಶೇಷ. ಸಂಗ್ರಹಯೋಗ್ಯ ಈ ಪುಸ್ತಕದ ಬಿಡುಗಡೆ ಐತಿಹಾಸಿಕ ಕ್ಷಣವಾಗಲಿದೆ ಎಂದರು.