ದತ್ತ ಜಯಂತಿ ಹಿನ್ನೆಲೆ ; ವಾಹನಗಳ ನಿಲುಗಡೆ ನಿಷೇಧ, ಸಂಚಾರಕ್ಕೆ ಬದಲಿ ಮಾರ್ಗ

Written by malnadtimes.com

Published on:

CHIKKAMAGALURU ; ಡಿಸೆಂಬರ್ 12 ರಿಂದ ಡಿಸೆಂಬರ್ 14 ರವರೆಗೆ ಚಿಕ್ಕಮಗಳೂರು ತಾಲ್ಲೂಕು ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ದತ್ತ ಜಯಂತಿ, ಅನುಸೂಯ ಜಯಂತಿ ಹಾಗೂ ಬೃಹತ್ ಶೋಭಾಯಾತ್ರೆ ಕಾರ್ಯಕ್ರಮ  ನಡೆಯಲಿದ್ದು, ಈ ಸಂಬಂಧ ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಮತ್ತು ಚಿಕ್ಕಮಗಳೂರು ನಗರದಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ದತ್ತ ಮಾಲಾಧಾರಿಗಳು ಭಾಗವಹಿಸುವುದರಿಂದ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಹಾಗೂ ಯಾವುದೇ ಅಹಿತಕರ ಘಟನೆಗಳು ಮತ್ತು ಅಪಘಾತಗಳು ಸಂಭವಿಸದಂತೆ ಹಾಗೂ ಮೆರವಣಿಗೆ ಸಾಗುವ ಸಂದರ್ಭದಲ್ಲಿ ಯಾವುದೇ ರೀತಿಯ ಅಡಚಣೆಗಳು ಉಂಟಾಗದಂತೆ ಮುಂಜಾಗ್ರತಾ ಕ್ರಮವಾಗಿ ಈ ಕೆಳಕಂಡ ರಸ್ತೆ ಮಾರ್ಗಗಳಲ್ಲಿ ಎಲ್ಲಾ ರೀತಿಯ ವಾಹನಗಳ ನಿಲುಗಡೆ ನಿಷೇಧಿಸಿ ಸದರಿ ವಾಹನಗಳ ನಿಲುಗಡೆ ಮತ್ತು ಸಂಚಾರಕ್ಕೆ ಬದಲಿ ಮಾರ್ಗವನ್ನು ನಿಗಧಿಪಡಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಡಿಸೆಂಬರ್ 12 ರಂದು ಅನುಸೂಯ ಜಯಂತಿಯಂದು ಮೆರವಣಿಗೆಯು ಬೋಳರಾಮೇಶ್ವರ ದೇವಸ್ಥಾನದಿಂದ ಹೊರಟು ತೊಗರಿ ಹಂಕಲ್ ವೃತ್ತ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಎನ್‌ಎಂಸಿ ವೃತ್ತ, ಶೃಂಗಾರ್ ಸರ್ಕಲ್, ಆರ್ ಜಿ ರಸ್ತೆ, ಫುಡ್ ಪ್ಯಾಲೆಸ್, ಟೌನ್ ಕ್ಯಾಂಟೀನ್ ಸರ್ಕಲ್ ವರೆಗೆ ಮೆರವಣಿಗೆ ನಡೆಸಿ ಅಲ್ಲಿಂದ ತಮ್ಮ ವಾಹನಗಳಲ್ಲಿ ದತ್ತಮಾಲಾಧಾರಿಗಳು/ದತ್ತ ಭಕ್ತರು ತಮ್ಮ ತಮ್ಮ ವಾಹನಗಳಲ್ಲಿ ದತ್ತ ಪೀಠಕ್ಕೆ ತೆರಳಲಿದ್ದಾರೆ.

ಈ ಹಿನ್ನಲೆಯಲ್ಲಿ ಬೆಳಿಗ್ಗೆ 6:00 ಗಂಟೆಯಿಂದ ಮಧ್ಯಾಹ್ನ 2:00 ಗಂಟೆಯ ವರೆಗೆ ಕೆಎಸ್‌ಆರ್‌ಟಿಸಿ ಡಿಪೋದಿಂದ ಶೃಂಗಾರ್ ಸರ್ಕಲ್‌ವರೆಗೆ ಐ.ಜಿ. ರಸ್ತೆಯಲ್ಲಿನ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದ್ದು, ಬದಲಿ ಮಾರ್ಗವಾದ ಜಿಲ್ಲಾ ಆಟದ ಮೈದಾನ ಸುತ್ತ ಮುತ್ತ ಹಾಗೂ ಬಾರ್‌ಲೈನ್ ರಸ್ತೆಗಳಲ್ಲಿ ನಿಲುಗಡೆಗೊಳಿಸುವುದು.

ಶೃಂಗಾರ್ ಸರ್ಕಲ್‌ನಿಂದ ಭುವನೇಶ್ವರಿ ವೃತ್ತ (ಟೌನ್ ಕ್ಯಾಂಟೀನ್)ದ ವರೆಗೆ ಆರ್.ಜಿ. ರಸ್ತೆ, ವಾಹನ ನಿಲುಗಡೆ ನಿಷೇಧಿಸಲಾಗಿದ್ದು, ಬಸವನಹಳ್ಳಿ ರಸ್ತೆ ಮತ್ತು ವಿಜಯಪುರ ಮುಖ್ಯ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ಅನುಸೂಯ ಜಯಂತಿಯಂದು ಕೆ.ಎಂ. ರಸ್ತೆ, ಬೋಳರಾಮೇಶ್ವರ ದೇವಸ್ಥಾನದಿಂದ ಶೃಂಗಾರ್ ಸರ್ಕಲ್‌ವರೆಗೆ ಸಂಚರಿಸುವ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದ್ದು, ಮೂಡಿಗೆರೆಯಿಂದ ಕಡೂರು ಕಡೆಗೆ ಸಂಚರಿಸುವ ವಾಹನಗಳು ಅಜಾದ್ ಪಾರ್ಕ್ ಮೂಲಕ ಬೈಪಾಸ್ ರಸ್ತೆ ಮೂಲಕ ಸಂಚರಿಸುವುದು. ಕಡೂರಿನಿಂದ ಮೂಡಿಗೆರೆ ಕಡೆ ಸಂಚರಿಸುವ ವಾಹನಗಳು ಬೈಪಾಸ್, ಮಾರ್ಕೆಟ್ ರಸ್ತೆ ಮತ್ತು ಎಂ.ಜಿ. ರಸ್ತೆ ಮೂಲಕ ಸಂಚರಿಸುವುದು.

ರತ್ನಗಿರಿ ರಸ್ತೆ, ಶೃಂಗಾರ ಸರ್ಕಲ್‌ನಿಂದ ಭುವನೇಶ್ವರಿ ವೃತ್ತದವರೆಗೆ ಸಂಚರಿಸುವ ವಾಹನಗಳು ಬಸವನಹಳ್ಳಿ ರಸ್ತೆ ಮತ್ತು ಕೆಂಪನಹಳ್ಳಿ ರಸ್ತೆ ಮೂಲಕ ಸಂಚರಿಸುವುದು

ಭಾರೀ ವಾಹನಗಳ ಸಂಚಾರಕ್ಕೆ ಬದಲಿ ರಸ್ತೆ :

ರಾಂಪುರ ಸರ್ಕಲ್ – ಮೂಡಿಗೆರೆ ಕಡೆಯಿಂದ ಬರುವ ಹಾಸನ ಹಾಗೂ ಕಡೂರು ಕಡೆಗೆ ಹೋಗುವ ಎಲ್ಲಾ ರೀತಿಯ ಭಾರೀ ಸರಕು ಸಾಗಾಣೆ ವಾಹನಗಳು ಇಂಡಸ್ಟ್ರೀಯಲ್ ಏರಿಯಾ ಕಡೆಯಿಂದ ಹೋಗುವುದು.

ಎ ಐ ಟಿ ಸರ್ಕಲ್ :

ಕಡೂರು ಕಡೆಯಿಂದ ಬಂದು ಮೂಡಿಗೆರೆ ಹಾಗೂ ಹಾಸನ ಕಡೆಗೆ ಹೋಗುವ ಎಲ್ಲಾ ರೀತಿಯ  ಭಾರೀ ಸರಕು ಸಾಗಾಣೆ ವಾಹನಗಳು ಬೈಪಾಸ್ ರಸ್ತೆಯ ಮೂಲಕ ಪೈ ಸರ್ಕಲ್ ಕಡೆಗೆ ಹೋಗುವುದು.

ಡಿ. 13 ರಂದು ನಡೆಯಲಿರುವ ಶೋಭಾ ಯಾತ್ರೆಯಂದು ಬೆಳಿಗ್ಗೆ 6:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ವಾಹನಗಳ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಿರುವ ರಸ್ತೆಗಳ ವಿವರ:

ಮೆರವಣಿಗೆಯು ರತ್ನಗಿರಿ ರಸ್ತೆ, ಬಸವನಹಳ್ಳಿ ರಸ್ತೆ, ಮಹಾತ್ಮ ಗಾಂಧಿ ರಸ್ತೆಗಳಲ್ಲಿ ಸಂಚರಿಸಲಿದೆ. ಪುಡ್ ಪ್ಯಾಲೇಸ್‌ನಿಂದ ಭುವನೇಶ್ವರಿ ಸರ್ಕಲ್ (ಟೌನ್ ಕ್ಯಾಂಟೀನ್) ವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದ್ದು, ಬದಲಿ ಸ್ಥಳವಾದ ವಿಜಯಪುರ ಮುಖ್ಯ ರಸ್ತೆ, ವಿಜಯಪುರ ಫುಡ್ ಕೋರ್ಟ್, ತಿಲಕ್ ಪಾರ್ಕ್ ರಸ್ತೆಗಳಲ್ಲಿ ನಿಲುಗಡೆಗೊಳಿಸುವುದು. ಭುವನೇಶ್ವರಿ ಸರ್ಕಲ್ (ಟೌನ್ ಕ್ಯಾಂಟೀನ್), ಕೆ.ಇ.ಬಿ. ಸರ್ಕಲ್‌ನಿಂದ ಹನುಮಂತಪ್ಪ ಸರ್ಕಲ್ ವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಈ ವಾಹನಗಳು ಕೆಂಪನಹಳ್ಳಿ ರಸ್ತೆ, ಕುಂಬಾರ ಬೀದಿ, ಕೆ.ಎಂ. ರಸ್ತೆಯಿಂದ ಎ.ಪಿ.ಎಂ.ಸಿ. ರಸ್ತೆಗಳಲ್ಲಿ ನಿಲುಗಡೆಗೊಳಿಸುವುದು.
ಹನುಮಂತಪ್ಪ ಸರ್ಕಲ್‌ನಿಂದ ಅಜಾದ್ ಪಾರ್ಕ್ ವರೆಗೆ ವಾಹನಗಳ ನಿಲುಗಡೆ ನಿಷೇಧಿಸಲಾಗಿದ್ದು, ಐ.ಜಿ. ರಸ್ತೆ, ಮಾರ್ಕೆಟ್ ರಸ್ತೆಗಳಲ್ಲಿ, ನಿಲುಗಡೆಗೊಳಿಸುವುದು.

ಶೋಭಾಯಾತ್ರೆ ದಿನದಂದು ಮೆರವಣಿಗೆ ಸಾಗುವ ರಸ್ತೆಗಳಲ್ಲಿ ವಾಹನಗಳ ಸಂಚಾರ ನಿಷೇಧಿಸಿರುವ ರಸ್ತೆಗಳ ವಿವರ :

ಫುಡ್ ಪ್ಯಾಲೇಸ್‌ನಿಂದ ಭುವನೇಶ್ವರಿ ಸರ್ಕಲ್ ವರೆಗೆ ವಾಹನಗಳ ಸಂಚಾರ ನಿಷೇಧಿಸಲಾಗಿದ್ದು, ಬದಲಿ ಮಾರ್ಗವಾದ ಬಸವನಹಳ್ಳಿ ರಸ್ತೆ, ವಿಜಯಪುರ, ಕೆಂಪನಹಳ್ಳಿ ರಸ್ತೆ ಮತ್ತು ವೀರಭದ್ರೇಶ್ವರ ದೇವಸ್ಥಾನದ ರಸ್ತೆ ಮೂಲಕ ಸಂಚರಿಸುವುದು.

ಭುವನೇಶ್ವರಿ ಸರ್ಕಲ್ ನಿಂದ ಹನುಮಂತಪ್ಪ ಸರ್ಕಲ್ ವರೆಗೆ ಸಂಚರಿಸುವ ವಾಹನಗಳು ರತ್ನಗಿರಿ ರಸ್ತೆ, ಕೆಂಪನಹಳ್ಳಿ ರೋಡ್ ಮತ್ತು ರಾಮನಹಳ್ಳಿ, ವಿಜಯಪುರ ರೋಡ್ ಮೂಲಕ ಸಂಚರಿಸುವುದು.

ಹನುಮಂತಪ್ಪ ಸರ್ಕಲ್‌ನಿಂದ ಅಜಾದ್ ಪಾರ್ಕ್‌ವರೆಗೆ ವಾಹನಗಳ ಸಂಚಾರ ನಿಷೇಧಿಸಲಾಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಅಂಬೇಡ್ಕರ್ ರಸ್ತೆ, ಇಂದಿರಾ ಗಾಂಧಿ ರಸ್ತೆ ಮತ್ತು ಬಾರ್ ಲೈನ್ ಮೂಲಕ ಸಂಚರಿಸುವುದು.

ಏಕಮುಖ ಸಂಚಾರಕ್ಕಾಗಿ ಬದಲಿ ರಸ್ತೆ :

ಅಂಬೇಡ್ಕರ್ ರಸ್ತೆ – ಅಂಬೇಡ್ಕರ್ ರಸ್ತೆಯು ದ್ವಿಮುಖ ರಸ್ತೆಯಾಗಿದ್ದು, ಶೋಭಾಯಾತ್ರೆ ದಿನದಂದು ಕೆ.ಎಂ. ರೋಡ್ ಕ್ರಾಸ್‌ನಿಂದ ಅಂಬೇಡ್ಕರ್ ರಸ್ತೆಯ ಮೂಲಕ ದೀಪಾ ನರ್ಸಿಂಗ್ ಹೋಂ ಕಡೆಗೆ ಏಕಮುಖವಾಗಿ ಸಂಚರಿಸುವುದು.

ಭಾರೀ ವಾಹನಗಳ ಸಂಚಾರಕ್ಕೆ ಬದಲಿ ರಸ್ತೆಗಳು :

ರಾಂಪುರ ಸರ್ಕಲ್ – ಮೂಡಿಗೆರೆ ಕಡೆಯಿಂದ ಬರುವ ಹಾಸನ ಹಾಗೂ ಕಡೂರು ಕಡೆಗೆ ಹೋಗುವ ಎಲ್ಲಾ ರೀತಿಯ ಭಾರೀ ಸರಕು ಸಾಗಾಣೆ ವಾಹನಗಳನ್ನು ಇಂಡಸ್ಟ್ರೀಯಲ್ ಏರಿಯಾ ಕಡೆಯಿಂದ ಹೋಗುವುದು.

ಎ ಐ ಟಿ ಸರ್ಕಲ್ – ಕಡೂರು ಕಡೆಯಿಂದ ಬರುವ ಮೂಡಿಗೆರೆ ಹಾಗೂ ಹಾಸನ ಕಡೆಗೆ ಹೋಗುವ ಎಲ್ಲಾ ರೀತಿಯ ಭಾರೀ ಸರಕು ಸಾಗಾಣೆ ವಾಹನಗಳನ್ನು ಬೈಪಾಸ್ ರಸ್ತೆಯ ಮೂಲಕ ಪೈ ಸರ್ಕಲ್‌ನಿಂದ ಹಿರೇಮಗಳೂರು ಮತ್ತು ಹಿರೇಮಗಳೂರು ಸೇತುವೆ ಮೂಲಕ ಇಂಡಸ್ಟ್ರೀಯಲ್ ಏರಿಯಾ ಕಡೆಗೆ ಸಂಚರಿಸುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

Leave a Comment