ರಿಪ್ಪನ್‌ಪೇಟೆ: ದೀಪಾವಳಿ ಹಬ್ಬದ ಸಡಗರದ ನಡುವೆಯೇ ಮಲೆನಾಡಿನ ಗ್ರಾಮೀಣ ಭಾಗಗಳಲ್ಲಿ ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ವಿಶಿಷ್ಟ ಧಾರ್ಮಿಕ ಆಚರಣೆಯಾದ ‘ನೋನಿ’ ಸಂಭ್ರಮ ಮನೆಮಾಡಿದೆ. ರಿಪ್ಪನ್‌ಪೇಟೆ ಸುತ್ತಮುತ್ತಲಿನ ವಿವಿಧ ಗ್ರಾಮಗಳಲ್ಲಿ ಗ್ರಾಮ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗ್ರಾಮಸ್ಥರು ಭಕ್ತಿ ಮತ್ತು ಸಂಭ್ರಮದಿಂದ ಈ ಆಚರಣೆಯಲ್ಲಿ ಪಾಲ್ಗೊಂಡರು.
ದೀಪಾವಳಿ ಹಬ್ಬಕ್ಕೆ ಮೂರ್ನಾಲ್ಕು ದಿನಗಳ ಮುಂಚಿತವಾಗಿಯೇ ಆರಂಭವಾಗುವ ಈ ಆಚರಣೆಯು ಗ್ರಾಮೀಣ ಸಂಸ್ಕೃತಿ, ಧಾರ್ಮಿಕ ನಂಬಿಕೆ ಹಾಗೂ ಸಾಮೂಹಿಕ ಒಗ್ಗಟ್ಟಿನ ಪ್ರತೀಕವಾಗಿದೆ. ಗ್ರಾಮದ ಜನರೆಲ್ಲರೂ ಒಟ್ಟಾಗಿ ಸೇರಿ ತಮ್ಮ ಆರಾಧ್ಯ ದೈವಗಳಿಗೆ ಪೂಜೆ ಸಲ್ಲಿಸಿ, ಕುಟುಂಬಗಳ ಸುಖ-ಶಾಂತಿ, ಉತ್ತಮ ಮಳೆ-ಬೆಳೆ ಹಾಗೂ ಗ್ರಾಮದ ಸಮೃದ್ಧಿಗಾಗಿ ಪ್ರಾರ್ಥಿಸುವುದು ಈ ಸಂಪ್ರದಾಯದ ವಿಶೇಷತೆಯಾಗಿದೆ.
ಬರುವೆ ದೊಡ್ಡಿನಕೊಪ್ಪದ ಏಳು ಮಕ್ಕಳ ತಾಯಿ ಶೀಲವಂತ ಚೌಡಮ್ಮ, ಬರುವೆ ರಣದೇವರು, ಯಕ್ಷಿದೇವತೆ ಹಾಗೂ ಗಡಿ ಭೂತರಾಯ ಸೇರಿದಂತೆ ವಿವಿಧ ಗ್ರಾಮ ದೇವರುಗಳಿಗೆ ನೋನಿ ಸಂದರ್ಭದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ಈ ಆಚರಣೆಯ ಅಂಗವಾಗಿ ಗ್ರಾಮಸ್ಥರು ಮನೆಮನೆಗೆ ತೆರಳಿ ವರಾಡ (ಹಣ) ಸಂಗ್ರಹಿಸುತ್ತಾರೆ. ಜಾತಿ-ಮತದ ಭೇದವಿಲ್ಲದೆ ಸರ್ವ ಸಮುದಾಯದ ಜನರು ಒಗ್ಗೂಡಿ ದೇವರ ಬನವನ್ನು ಸ್ವಚ್ಛಗೊಳಿಸಿ, ತಳಿರು ತೋರಣ, ಬಾಳೆಗಿಡ ಹಾಗೂ ಕಬ್ಬಿನ ಸುಳಿಗಳಿಂದ ಅಲಂಕರಿಸುತ್ತಾರೆ. ಬಳಿಕ ಹಣ್ಣು-ಕಾಯಿ, ಹೂವು, ಹೂವಿನ ಹಾರ, ಊದುಬತ್ತಿ, ಕರ್ಪೂರ, ಅರಿಶಿಣ, ಕುಂಕುಮ ಸೇರಿದಂತೆ ಪೂಜಾ ಸಾಮಗ್ರಿಗಳನ್ನು ಬುಟ್ಟಿಗಳಲ್ಲಿ ಹೊತ್ತು ದೇವರ ಬನಕ್ಕೆ ತೆರಳಿ ಸಾಮೂಹಿಕವಾಗಿ ಪೂಜೆ ಸಲ್ಲಿಸುತ್ತಾರೆ.

ಹರಕೆ, ನಂಬಿಕೆ ಮತ್ತು ಭಕ್ತಿಯ ಸಂಗಮ
ಭಕ್ತರು ತಮ್ಮ ಇಷ್ಟಾರ್ಥಗಳು ಈಡೇರಲಿ ಎಂಬ ನಂಬಿಕೆಯಿಂದ ಏಳು ಮಕ್ಕಳ ತಾಯಿ ಶೀಲವಂತ ದೇವತೆಗೆ ಹೂವು, ಹಣ್ಣು ಹಾಗೂ ಕಾಯಿ ಸಮರ್ಪಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕಾಟಿಕಾ ದೇವರಿಗೆ ಸಂಪ್ರದಾಯದಂತೆ ಪ್ರಾಣಿ ಬಲಿ ಅರ್ಪಿಸುವ ಮೂಲಕ ಹರಕೆ ತೀರಿಸುವ ಆಚರಣೆಯೂ ನಡೆಯಿತು.
ವಿಶೇಷವೆಂದರೆ, ಆಧುನಿಕ ಜೀವನಶೈಲಿ ಹಾಗೂ ಬದಲಾದ ಕಾಲಘಟ್ಟದಲ್ಲಿಯೂ ಗ್ರಾಮಸ್ಥರು ತಮ್ಮ ಹಿರಿಯರು ಪಾಲಿಸಿಕೊಂಡು ಬಂದ ಧಾರ್ಮಿಕ ಆಚರಣೆಗಳನ್ನು ಮರೆತಿಲ್ಲ. ಯುವಕರು ಸೇರಿದಂತೆ ಇಂದಿನ ತಲೆಮಾರಿನವರು ಕೂಡ ಹಿರಿಯರ ಮಾರ್ಗದರ್ಶನದಲ್ಲಿ ನೋನಿ ಆಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದು ಗಮನ ಸೆಳೆಯಿತು.
ಗ್ರಾಮೀಣ ಸಂಸ್ಕೃತಿಯ ಅನನ್ಯ ಪರಂಪರೆ
ನೋನಿ ಕೇವಲ ಧಾರ್ಮಿಕ ಆಚರಣೆಯಾಗಿರದೆ, ಗ್ರಾಮಸ್ಥರನ್ನು ಒಂದೆಡೆ ಸೇರಿಸುವ ಸಾಮಾಜಿಕ ವೇದಿಕೆಯೂ ಆಗಿದೆ. ದೇವರ ಬನದ ಸ್ವಚ್ಛತೆ, ಸಾಮೂಹಿಕ ಸಿದ್ಧತೆ, ಪೂಜಾ ಕಾರ್ಯಗಳಲ್ಲಿ ಎಲ್ಲರೂ ಕೈಜೋಡಿಸುವ ಮೂಲಕ ಪರಸ್ಪರ ಸಹಕಾರ ಮತ್ತು ಸೌಹಾರ್ದತೆಯನ್ನು ಈ ಆಚರಣೆ ಸಾರುತ್ತದೆ.
ನಗರೀಕರಣದ ಪ್ರಭಾವದ ನಡುವೆಯೂ ಮಲೆನಾಡಿನ ಹಳ್ಳಿಗಳಲ್ಲಿ ಇಂತಹ ಸಂಪ್ರದಾಯಗಳು ಜೀವಂತವಾಗಿರುವುದು ಸ್ಥಳೀಯ ಸಾಂಸ್ಕೃತಿಕ ಪರಂಪರೆಯ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ. ಮುಂದಿನ ಪೀಳಿಗೆಗೂ ಈ ಆಚರಣೆಗಳನ್ನು ಪರಿಚಯಿಸಿ ಉಳಿಸಿಕೊಂಡು ಹೋಗಬೇಕೆಂಬ ಆಶಯ ಗ್ರಾಮಸ್ಥರದ್ದಾಗಿದೆ.

