ರಿಪ್ಪನ್‌ಪೇಟೆ: ಜಂಬಳ್ಳಿ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಏಳುಮಕ್ಕಳ ಚೌಡಮ್ಮ ದೇವಿ ಹಾಗೂ ಗ್ರಾಮದ ಪರಿವಾರ ದೇವರುಗಳ ಪ್ರತಿಷ್ಠಾಪನಾ ಪೂಜಾ ಕಾರ್ಯಕ್ರಮವು ಶ್ರದ್ಧಾಭಕ್ತಿಯಿಂದ ನೆರವೇರಿತು.
ಈ ಸಂದರ್ಭದಲ್ಲಿ ಮಳಲಿಮಠದ ಡಾ. ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಇಷ್ಟಲಿಂಗ ಪೂಜೆ ಹಾಗೂ ರುದ್ರಾಭಿಷೇಕ ಜರುಗಿತು. ಬಳಿಕ ಏಳುಮಕ್ಕಳ ಚೌಡಮ್ಮ ದೇವಿ ಸೇರಿದಂತೆ ಗ್ರಾಮದ ಪರಿವಾರ ದೇವರುಗಳಿಗೆ ವಿಶೇಷ ಪೂಜೆ, ಪುಷ್ಪಾಲಂಕಾರ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ನಂತರ ಭಕ್ತರಿಗೆ ತೀರ್ಥಪ್ರಸಾದ ವಿತರಿಸಲಾಯಿತು.
ತ್ಯಾರಂದೂರು ಪುರೋಹಿತರ ವರ್ಗದವರಿಂದ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಶಾಸ್ತ್ರೋಕ್ತವಾಗಿ ನಡೆದವು. ಇದೇ ಸಂದರ್ಭದಲ್ಲಿ ಗ್ರಾಮದ ಮುತ್ತೈದೆಯರಿಗೆ ಅರಿಶಿಣ-ಕುಂಕುಮದ ತಿಲಕವಿಟ್ಟು ಬಾಗಿನ ಸಮರ್ಪಿಸುವ ಮೂಲಕ ಗೌರವಿಸಲಾಯಿತು.
ಜಂಬಳ್ಳಿ ಗ್ರಾಮದ ಭಕ್ತರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಏಳುಮಕ್ಕಳ ಚೌಡಮ್ಮ ದೇವಿ, ಪರಿವಾರ ದೇವರುಗಳ ಮತ್ತು ಗುರುಗಳ ದರ್ಶನ ಪಡೆದು ಆಶೀರ್ವಾದ ಸ್ವೀಕರಿಸಿದರು. ಧಾರ್ಮಿಕ ವಾತಾವರಣದಲ್ಲಿ ನಡೆದ ಪೂಜಾ ಕಾರ್ಯಕ್ರಮ ಭಕ್ತಿಭಾವದಿಂದ ಸಂಪನ್ನಗೊಂಡಿತು.

