ರಿಪ್ಪನ್‌ಪೇಟೆ: ಶಿವಮೊಗ್ಗದಲ್ಲಿ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ರಿಪ್ಪನ್‌ಪೇಟೆ ಕರ್ನಾಟಕ ಪಬ್ಲಿಕ್ ಶಾಲೆ (KPS) ತಂಡವು ಅತ್ಯುತ್ತಮ ಅಭಿನಯ ನೀಡಿ ಪ್ರಥಮ ಬಹುಮಾನವನ್ನು ತನ್ನದಾಗಿಸಿಕೊಂಡಿದೆ. ಆ ಮೂಲಕ ಶಾಲೆಗೆ ಹೆಮ್ಮೆ ತಂದಿರುವ ವಿದ್ಯಾರ್ಥಿಗಳು ವಿಭಾಗ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದುಕೊಂಡಿದ್ದಾರೆ.
ವಿಜ್ಞಾನದ ಜಟಿಲ ಪರಿಕಲ್ಪನೆಗಳನ್ನು ರಂಗಭೂಮಿಯ ಮಾಧ್ಯಮದ ಮೂಲಕ ಅತ್ಯಂತ ಸರಳವಾಗಿ ಮತ್ತು ಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ತಲುಪಿಸುವಲ್ಲಿ ಶಾಲೆಯ ವಿದ್ಯಾರ್ಥಿಗಳು ಯಶಸ್ವಿಯಾದರು. ಮಕ್ಕಳ ನೈಜ ಅಭಿನಯ, ಸಂಭಾಷಣೆ ಹಾಗೂ ವಿಜ್ಞಾನ ಸಂದೇಶ ಪ್ರಸ್ತುತಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಯಿತು.
ತಂಡದ ಈ ಅಭೂತಪೂರ್ವ ಸಾಧನೆಗೆ ಕಾರಣರಾದ ಸ್ಪರ್ಧಾಳು ಮಕ್ಕಳು, ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿದ ಶಿಕ್ಷಕ ವೃಂದ, ನಿರಂತರ ಪ್ರೋತ್ಸಾಹ ನೀಡಿದ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (SDMC) ಪದಾಧಿಕಾರಿಗಳು ಹಾಗೂ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಪ್ರಮುಖರು ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ವಿಭಾಗ ಮಟ್ಟದ ಸ್ಪರ್ಧೆಯಲ್ಲೂ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಲಿ ಎಂದು ಸಾರ್ವಜನಿಕರು ಹಾಗೂ ಶಿಕ್ಷಣ ಪ್ರೇಮಿಗಳು ಶುಭ ಹಾರೈಸಿದ್ದಾರೆ.

