ಕಲಿಕೆಯಲ್ಲಿ ಶ್ರದ್ದೆ, ಆಸಕ್ತಿ ಬೆಳೆಸಿಕೊಳ್ಳಿ ; ಡಾ.ಹರ್ಷಿತಾ ರಾಹುಲ್

Written by Mahesha Hindlemane

Published on:

ರಿಪ್ಪನ್‌ಪೇಟೆ : ವಿದ್ಯಾರ್ಥಿ ದೆಸೆಯಲ್ಲಿ ಯಶಸ್ವಿ ಗಳಿಸಬೇಕಾದರೆ ಕಲಿಕೆಯಲ್ಲಿ ಶ್ರದ್ಧಾ ಆಸಕ್ತಿ ಮೈಗೂಡಿಸಿಕೊಳ್ಳಬೇಕು ಎಂದು ಉಪನ್ಯಾಸಕಿ ಡಾ.ಹರ್ಷಿತಾ ರಾಹುಲ್ ಅವರು ಹೇಳಿದರು.

WhatsApp Group Join Now
Telegram Group Join Now
Instagram Group Join Now

ಈಚೆಗೆ ಮಣಿಪಾಲ ಆಕಾಡೆಮಿ ಆಫ್ ಹೈಯರ್ ಎಜುಕೇಷನ್ ವತಿಯಿಂದ ಗಣಿತ ಶಾಸ್ತ್ರದಲ್ಲಿನ “ಎ ಸ್ಟಡಿ ಆನ್ ಡಾಮಿನೇಷನ್ ಸ್ಟ್ರೈಕಾಮ್ ಹ್ಯಾಮಿಂಗ್ ಅಂಡ್ ಟೋಪಾಲಾಜಿಕಲ್ ಇಂಡಿಸಸ್” ಎಂಬ ಸಂಶೋಧನ ಮಹಾ ಪ್ರಬಂಧಕ್ಕೆ ಪಿಹೆಚ್‌ಡಿ ಪದವಿ ಪಡೆದ ಅವರನ್ನು ಪಟ್ಟಣದ ಬ್ರಾಹ್ಮಣ ಸಮಾಜದ ವತಿಯಿಂದ ಶ್ರೀರಾಮರ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಪ್ರತಿಭಾವಂತಿಕೆಗೆ ಕೊರತೆ ಇಲ್ಲ, ವಿದ್ಯಾರ್ಥಿಗಳು ಕೀಳರಿಮೆ ತೊರೆಯಬೇಕು, ಅಗತ್ಯಕ್ಕೆ ತಕ್ಕಂತೆ ನಿಯಮಿತ ಮೊಬೈಲ್ ಬಳಕೆ ಹಾಗೂ ಸೂಕ್ತ ಮಾರ್ಗದರ್ಶನವೇ ಯಶಸ್ಸಿನ ಗುಟ್ಟು ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಪೋಷಕರು ಮಕ್ಕಳ ಮೇಲೆ ಒತ್ತಡ ಹೇರದೆ ಅವರ ಆಸಕ್ತಿಗನುಗುಣವಾಗಿ ಕಲಿಕೆಗೆ ಪ್ರೋತ್ಸಾಹಿಸುವಂತೆ ಕಿವಿಮಾತು ಹೇಳಿದರು.

ಗಣಿತ ಕಬ್ಬಿಣದ ಕಡಲೆ ಎಂಬ ಭ್ರಮೆಯಿಂದ ಹೊರಬಂದು ಇಷ್ಟಪಟ್ಟು ಓದಿದಲ್ಲಿ
ಸರಳ- ಸುಂದರ ವಾಗಿ, ಗುರಿ ಸಾಧನೆಗೆ ಮೆಟ್ಟಿಲಾಗಲಿದೆ ಎಂದರು.

ಬ್ರಾಹ್ಮಣ ಸಂಘದ ಅಧ್ಯಕ್ಷ ಸುರೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಪವಿತ್ರ ವೇದಿಕೆಯಲ್ಲಿ, ಗಣಿತ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದು ವಿಜ್ಞಾನ ಮತ್ತು ವಿದ್ಯಾಭ್ಯಾಸದ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲು ನಮಗೆ ಸಿಕ್ಕಿರುವ ಅವಕಾಶವು ಅತ್ಯಂತ ಗೌರವದಾಯಕವಾಗಿದೆ.

ಅವರ ಪರಿಶ್ರಮ, ಸಮರ್ಪಣೆ, ಹಾಗೂ ಗಣಿತದ ಮೇಲಿನ ತೀವ್ರ ಆಸಕ್ತಿಯು ಈ ದೊಡ್ಡ ಸಾಧನೆಗೆ ದಾರಿ ಮಾಡಿದೆ. ಪಿಎಚ್‌ಡಿ ಪದವಿ ಎಂಬುದು ಕೇವಲ ಒಂದು ಪದವಿ ಮಾತ್ರವಲ್ಲ ಅದು ತಮ್ಮ ಕ್ಷೇತ್ರದಲ್ಲಿ ಆಳವಾದ ಜ್ಞಾನ ಹಾಗೂ ನವೀನ ಸಂಶೋಧನೆಯ ಪ್ರತೀಕವಾಗಿದೆ.

ಇಂತಹ ಸಾಧಕರನ್ನು ಸನ್ಮಾನಿಸುವುದರ ಮೂಲಕ ನಾವು ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಸಹ ಪ್ರೇರಣೆಯ ಬೆಳಕು ಹೊತ್ತೊಯ್ಯುತ್ತೇವೆ. ಅವರು ತಾವು ಪಡೆದ ಜ್ಞಾನವನ್ನು ಸಮಾಜದ ಹಿತಕ್ಕಾಗಿ ಉಪಯೋಗಿಸಿ, ಇನ್ನೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಬೆಳಗಲಿ ಎಂಬುದು ನಮ್ಮ ಹಾರೈಕೆ. ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಯು ಸಮಾಜದ ಆಸ್ತಿಯಾಗಿದ್ದು, ಅವರನ್ನು ಗುರುತಿಸಿ ಗೌರವಿಸುವ ಪರಿಪಾಠ ಬೆಳೆಸಿದಲ್ಲಿ ಮತ್ತೊಬ್ಬರಿಗೆ ಪ್ರೇರಣೆಯಾಗಲಿದೆ ಎಂದರು.

ಈ ಸಂಧರ್ಭದಲ್ಲಿ ಪತಿ ರಾಹುಲ್ ಮತ್ತು ಪೋಷಕರಾದ ಸೌಮ್ಯ ಮತ್ತು ಸಾಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಅರುಣ್ ಕುಮಾರ್ ಇದ್ದರು.

ಸಮಾರಂಭದಲ್ಲಿ ಬ್ರಾಹ್ಮಣ ಸಂಘದ ಕಾರ್ಯದರ್ಶಿ ಅಮಿತಾ ಬಲ್ಲಾಳ್, ಸಹ ಕಾರ್ಯದರ್ಶಿ ಸವಿತಾ ರಾಧಾಕೃಷ್ಣ, ಖಜಾಂಚಿ ಕೆ.ಎಸ್. ಶಿವಾನಂದ ಹಾಗೂ ಗ್ರಾಮ ಪಂಚಾಯತಿ ಸದಸ್ಯೆ ಅಶ್ವಿನಿ, ಸಮಾಜದ ಮುಖಂಡರಾದ ಪದ್ಮಾ ಸುರೇಶ್, ವಾಸುದೇವ್ ಮಂಗಳೂರ್ಕರ್, ವೀಣಾ ಪ್ರಭಾಕರ್, ಕುಸುಮ ಬಾಲಚಂದ್ರ, ಮಾನಸ ಪುರುಷೋತ್ತಮ್, ಬಿ.ಕೆ. ರಾಘವೇಂದ್ರ, ನಾಗರಾಜ್ ಹಾಗೂ ಕೆ.ಆರ್. ಪ್ರಭಾಕರ್ ಮತ್ತು ಇತರರು ಇದ್ದರು.

Leave a Comment