ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆ ತಲುಪಿದ ರಿಪ್ಪನ್‌ಪೇಟೆಯ ದೊಡ್ಡಿನಕೊಪ್ಪ ಸ್ತ್ರೀಶಕ್ತಿ ಭವನ ಕಟ್ಟಡ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಇಲ್ಲಿನ ಬರುವೆ ಗ್ರಾಮದ ದೊಡ್ಡಿನಕೊಪ್ಪ ಬಳಿ ಈ ಹಿಂದಿನ ತಾಲ್ಲೂಕು ಪಂಚಾಯಿತ್ ಅನುದಾನದಡಿಯಲ್ಲಿ ಸುಮಾರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಲಾದ ಸ್ತ್ರೀಶಕ್ತಿ ಭವನ ಸರಿಯಾದ ನಿರ್ವಹಣೆಯಿಲ್ಲದೆ ಕಿಟಕಿ, ಬಾಗಿಲುಗಳು ಮುರಿದು ಗ್ಲಾಸ್ ಒಡೆದು ಪುಡಿಪುಡಿ ಉದುರಿ ಬೀಳುವಂತಾಗಿ ಕಟ್ಟಡದ ಒಳಗೆ ಇಡಲಾದ ಪಾತ್ರೆ ಕುರ್ಚಿಗಳು ದೂಳು ಹಿಡಿಯುವಂತಾಗಿ ಕಟ್ಟಡದ ಸುತ್ತ ಇಂದಿರಾಗಾಂಧಿ ಗಿಡ-ಗಂಟಿಗಳು ಬೆಳೆದು ಕಟ್ಟಡ ಸಹ ಕಾಣದಂತಾಗಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಸರ್ಕಾರ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸಭೆ ನಡೆಸಲು ಸುಸಜ್ಜಿತ ಕಟ್ಟಡವನ್ನು ನಿರ್ಮಿಸುವ ಯೋಜನೆಯನ್ನು ಜಾರಿಗೊಳಿಸಿದ್ದು ಅದರಂತೆ ಈ ಹಿಂದಿನ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ ಇವರ ವಿಶೇಷ ಆಸಕ್ತಿಯಿಂದಾಗಿ ಹೊಸನಗರ ತಾಲ್ಲೂಕಿನ ಎರಡು ಕಡೆಯಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ರಿಪ್ಪನ್‌ಪೇಟೆಯ ಹೃದಯ ಭಾಗದಲ್ಲಿ ಸುಸಜ್ಜಿತ ಸ್ತ್ರೀಶಕ್ತಿ ಭವನವನ್ನು ನಿರ್ಮಿಸಲಾಗಿದ್ದು ಹಲವು ಸಭೆ ಸಮಾರಂಭಗಳನ್ನು ಸಹ ಈ ಕಟ್ಟಡದಲ್ಲಿ ಆಯೋಜಿಸಿ ನಡೆಸಲಾಗಿ ಇದೇ ಕಟ್ಟಡದಲ್ಲಿ ರೈತ ಸಂಪರ್ಕ ಕಾರ್ಯಾಗಾರಗಳು ಸಹ ನಡೆದಿರುತ್ತದೆ. ಆದರೆ ಈಗ ಸರಿಯಾದ ನಿರ್ವಹಣೆ ಇಲ್ಲದೆ ಕಟ್ಟಡ ಸಂಪೂರ್ಣ ಗಿಡ-ಗಂಟಿಗಳಿಂದ ಮುಚ್ಚಿಕೊಂಡಿದ್ದು ಕಿಟಕಿಗಳ ಗ್ಲಾಸ್ ಸಹ ಒಡೆದು ಪುಡಿಪುಡಿಯಾಗಿ ಉದುರಿ ಬೀಳುವಂತಾಗಿದ್ದರೆ, ಕಟ್ಟಡದ ಒಳಭಾಗದಲ್ಲಿನ ಬೆಲೆ ಬಾಳುವ ಕುರ್ಚಿ ಮತ್ತು ಪಾತ್ರೆಗಳು ದೂಳು ಹಿಡಿದು ಬಳಸದಂತಾಗಿವೆ.

ಇನ್ನೂ ಕಟ್ಟಡದ ಒಳಗಡೆಯ ಶೌಚಾಲಯಕ್ಕೆ ಹೋಗುವ ಬಾಗಿಲು ಮುರಿದು ಹೋಗಿ ಚೌಕಟ್ಟು ಸಹ ಗೆದ್ದಲು ತಿಂದು ಬೇರೆಡೆ ಇರಿಸಲಾಗಿದ್ದು ಶೌಚಾಲಯ ಸಹ ಬಳಕೆಗೆ ಬಾರದಂತಾಗಿದೆ.

ಈ ಕಟ್ಟಡದ ಮುಂಭಾಗ ಬಿ.ಸಿ.ಎಂ .ಬಾಲಕಿಯರ ವಸತಿ ನಿಲಯ ಹಾಗೂ ರೈತ ಸಂಪರ್ಕ ಕೇಂದ್ರ ಮತ್ತು ನಾಡಕಛೇರಿ ಸಹ ಕಾರ್ಯನಿರ್ವಹಿಸುತ್ತಿದ್ದು ರೈತ ಸಂಪರ್ಕ ಕೇಂದ್ರದವರು ಕಪ್ಪು ಪೈಪ್‌ಗಳ ಹಾಗೂ ಕೃಷಿ ಉಪಕರಣಗಳ ದಾಸ್ತಾನು ಮಳಿಗೆಯನ್ನಾಗಿ ಇರಿಸಿಕೊಂಡಿದ್ದರೂ ಕೂಡಾ ಕಟ್ಟಡವನ್ನು ಸ್ವಚ್ಚಗೊಳಿಸದೆ ಇರಿಸಿಕೊಂಡಿದ್ದಾರೆ.

ಈ ಕಟ್ಟಡ ರಾತ್ರಿಯಾಗುತ್ತಿದ್ದಂತೆ ಕುಡುಕರ ಆಶ್ರಯ ತಾಣದಂತಾಗಿದ್ದು ಬೀದಿ ದೀಪಗಳಲ್ಲಿದೇ ಇರುವುದರಿಂದಾಗಿ ಎಣ್ಣೆ ಪಾರ್ಟಿ ಮಾಡಲು ರಹದಾರಿಯಾಗಿದೆ.

ಇನ್ನಾದರೂ ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನಹರಿಸಿ ಸ್ತ್ರೀ ಶಕ್ತಿ ಭವನವನ್ನು ದುರಸ್ಥಿಗೊಳಿಸುವತ್ತ ಮುಂದಾಗುವರೆ ಕಾದು ನೋಡಬೇಕಾಗಿದೆ.

Leave a Comment