ರಿಪ್ಪನ್‌ಪೇಟೆ: ವಾಹನದಿಂದ ಕೆಳಗೆ ಬಿದ್ದ ಕರುವೊಂದು ರಸ್ತೆಯಲ್ಲೇ ಸುಮಾರು ಒಂದೂವರೆ ಕಿಲೋಮೀಟರ್‌ಗೂ ಹೆಚ್ಚು ದೂರ ಎಳೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಿಪ್ಪನ್‌ಪೇಟೆ ಸಮೀಪದ ಮೂಗೂಡ್ತಿ ಬಳಿ ನಡೆದಿದೆ.
ಶಿವಮೊಗ್ಗ ಕಡೆಯಿಂದ ಅಶೋಕ್ ಲೇಲ್ಯಾಂಡ್ ವಾಹನದಲ್ಲಿ ನಾಲ್ಕು ದನಗಳು ಮತ್ತು ಒಂದು ಕರುವನ್ನು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಮಾರ್ಗಮಧ್ಯೆ ಕರು ವಾಹನದಿಂದ ಕೆಳಗೆ ಬಿದ್ದಿದೆ. ಆದರೆ ಅದರ ಕತ್ತಿಗೆ ಕಟ್ಟಲಾಗಿದ್ದ ಹಗ್ಗ ವಾಹನಕ್ಕೆ ಸಿಲುಕಿಕೊಂಡಿದ್ದರಿಂದ, ವಾಹನ ಮುಂದುವರಿದಂತೆ ಕರು ಕೂಡ ರಸ್ತೆಯ ಮೇಲೆ ಎಳೆಯಲ್ಪಟ್ಟಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಟಾರ್ ರಸ್ತೆಯಲ್ಲಿ ಎಳೆದ ಪರಿಣಾಮ ಕರುವಿನ ದೇಹದ ಹಲವು ಭಾಗಗಳಲ್ಲಿ ಗಂಭೀರ ಗಾಯಗಳಾಗಿದ್ದು, ಚರ್ಮ ಕಿತ್ತುಹೋಗಿ ತೀವ್ರ ರಕ್ತಸ್ರಾವವಾಗಿದೆ. ರಸ್ತೆಯಲ್ಲಿ ನರಳುತ್ತಿದ್ದ ಕರುವನ್ನು ಗಮನಿಸಿದ ಸ್ಥಳೀಯರು ತಕ್ಷಣ ವಾಹನವನ್ನು ತಡೆದು ಚಾಲಕನನ್ನು ಪ್ರಶ್ನಿಸಿದ್ದಾರೆ.
ಈ ವೇಳೆ ಚಾಲಕ ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದಿದ್ದು, ಘಟನೆಯ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
ಘಟನೆಯ ಸಂದರ್ಭದಲ್ಲಿ ಸ್ಥಳದಲ್ಲಿದ್ದ ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿಯ ನಿಕಟಪೂರ್ವ ಸದಸ್ಯ ನಿರೂಪ್ ಕುಮಾರ್ ಅವರು ತಕ್ಷಣ ಪಶು ಪರಿವೀಕ್ಷಕ ಶರತ್ ಕುಮಾರ್ ಅವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಗಾಯಗೊಂಡ ಕರುವಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಯ ಸಲುವಾಗಿ ರಿಪ್ಪನ್‌ಪೇಟೆ ಪಶು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸದ್ಯ ಕರುವಿನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎಂದು ತಿಳಿದುಬಂದಿದೆ.
ಘಟನೆ ಬಳಿಕ ಪೊಲೀಸರು ವಾಹನವನ್ನು ವಶಕ್ಕೆ ಪಡೆದು ರಿಪ್ಪನ್‌ಪೇಟೆ ಠಾಣೆಗೆ ಕರೆದೊಯ್ದಿದ್ದಾರೆ. ಮೂಕಪ್ರಾಣಿಯ ಮೇಲೆ ನಡೆದಿರುವ ಈ ರೀತಿಯ ವರ್ತನೆಗೆ ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಘಟನೆ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

