ಅಧಿಕಾರಿಗಳು ಹಾಗೂ ಪರಿಸರವಾದಿಗಳೊಂದಿಗೆ ಸಭೆ | ಮುಳುಗಡೆ ಸಂತ್ರಸ್ಥರಿಂದ ಅನಂತ ಹೆಗಡೆ ಅಶಿಸರಗೆ ಮನವಿ ಪತ್ರ ಸಲ್ಲಿಕೆ

Written by malnadtimes.com

Published on:

HOSANAGARA ; ವೃಕ್ಷಲಕ್ಷ ಆಂದೋಲನದ ಕರ್ನಾಟಕ ಪರಿಸರ ಸಂರಕ್ಷಣೆ ಅಧ್ಯಕ್ಷ ಅನಂತ ಹೆಗಡೆ ಅಶಿಸರರವರು ಹೊಸನಗರದ ತಾಲ್ಲೂಕು ಪಂಚಾಯತಿ ಕಛೇರಿಯ ಆವರಣದಲ್ಲಿ ಪರಿಸರವಾದಿಗಳ ಸಭೆಯನ್ನು ಆಯೋಜಿಸಲಾಗಿದ್ದು ಈ ಸಭೆಗೆ ಆಗಮಿಸಿದ ಪ್ರಜಾಪ್ರಭುತ್ವ ವೇದಿಕೆಯ ಅಧ್ಯಕ್ಷ ಗಣೇಶ್ ಬೆಳ್ಳಿಯವರ ನೇತೃತ್ವದಲ್ಲಿ ಅನಂತ ಹೆಗಡೆ ಅಶಿಸರ ಕೆಲವು ಪ್ರಶ್ನೆ ಕೇಳುವುದರ ಜೊತೆಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ, ತಾವು ಪರಿಸರವಾದದ ಹೆಸರಿನಲ್ಲಿ ಹೋರಾಟ ಮಾಡುತ್ತಿದ್ದು ಮಲೆನಾಡು ಕೃಷಿ ತೋಟಗಾರಿಕೆ ಅರಣ್ಯ ಪಶು ಸಂಗೋಪನೆ ಸುಸ್ಥಿರ ಅಭಿವೃದ್ಧಿ ಕುರಿತು ಅಭಿಯಾನ ಮಾಡುತ್ತಿದ್ದು ಈ ಅಭಿಯಾನದ ಹಿಂದೆ ತಮ್ಮ ಉದ್ದೇಶಗಳನ್ನು ಸ್ಪಷ್ಟಪಡಿಸಬೇಕು.

WhatsApp Group Join Now
Telegram Group Join Now
Instagram Group Join Now

ಕರ್ನಾಟಕ ರಾಜ್ಯದಲ್ಲಿ ಸಹ್ಯಾದ್ರಿ ಶ್ರೇಣಿಯ 6 ಜಿಲ್ಲೆಗಳಲ್ಲಿ ಪರಿಸರ ಅತ್ಯುತ್ತಮವಾಗಿದ್ದು ಉಳಿದ ಜಿಲ್ಲೆಗಳಲ್ಲಿ ಅರಣ್ಯ ಪ್ರದೇಶಗಳು 6 ರಿಂದ 8% ಇದ್ದು ಮಲೆನಾಡು ಭಾಗದಲ್ಲಿ 37 ರಿಂದ 49% ಇರುತ್ತದೆ. ತಾವು ಈವರೆಗೆ ಮಲೆನಾಡಿನ ಶಿವಮೊಗ್ಗ ಜಿಲ್ಲೆಯಲ್ಲಿ ಆಗಿರುವ ಅಣೆಕಟ್ಟುಗಳಲ್ಲಿ ಸರ್ಕಾರ ಮುಳುಗಡೆ ಮಾಡಿದ ಅರಣ್ಯದ ವಿಚಾರವಾಗಿ ಮಾತನಾಡಿಲ್ಲ. ಅಣೆಕಟ್ಟುಗಳಿಂದಾಗಿ ತಮ್ಮ ಜಮೀನು ಮನೆಗಳನ್ನು ಕಳೆದುಕೊಂಡ ಸಂತ್ರಸ್ಥ ಕುಟುಂಬಗಳು ಕಳೆದುಕೊಂಡ ಭೂಮಿಯ ಬದಲಾಗಿ ಸುತ್ತಲಿನ ಪರಿಸರದ ನಡುವೆ ಗುಡ್ಡಗಾಡು ಪ್ರಾಂತ್ಯಗಳಲ್ಲಿ ಕೃಷಿ ಮಾಡಿಕೊಂಡು ಈಗ ಸ್ವಲ್ಪ ಮಟ್ಟಿನ ಆರ್ಥಿಕ ಅಭಿವೃದ್ಧಿಯನ್ನು ಹೊಂದುತ್ತಿದ್ದಾರೆ. ತಮ್ಮ ಪರಿಸರವಾದದ ಹಿನ್ನೆಲೆಯಲ್ಲಿ ಅಭಯಾರಣ್ಯಗಳನ್ನು ವಿಸ್ತರಿಸಲಾಗುತ್ತಿದೆ. ಈ ಅಭಯಾರಣ್ಯದ ಮಧ್ಯೆ ಇರುವ ಕುಟುಂಬಗಳಿಗೆ ಹಕ್ಕುಗಳನ್ನು ನೀಡದೆ ಒಕ್ಕಲೆಬ್ಬಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ತಾವು ಈ ಬಗ್ಗೆ ಈವರೆಗೆ ಧ್ವನಿಯೆತ್ತಿಲ್ಲ.

ಈ ಭೂಮಿ ಸೆಕೆಂಡಿಗೆ 7.5 ಕಿ.ಮೀ ವೇಗವಾಗಿ ತನ್ನಕಕ್ಷೆಯಲ್ಲಿ ತಿರುಗುತ್ತಿದ್ದು ಭೂಮಿಯ ತೂಕ ಮತ್ತು ಸಾಮರ್ಥ್ಯದ ವಿಚಾರವಾಗಿ ತಾವು ತಿಳಿದುಕೊಂಡರೆ ನಮ್ಮೆಲ್ಲರ ಪರಿಸರ ಹೋರಾಟವು ವ್ಯರ್ಥ ಎನಿಸುತ್ತದೆ. ಭೂಮಿ ಕಾಲಕಾಲಕ್ಕೆ ತನ್ನನ್ನು ತಾನು ಬದಲಾಯಿಸಿಕೊಳ್ಳುವಷ್ಟು ಶಕ್ತಿಯುತವಾಗಿದೆ. ಇತ್ತೀಚೆಗೆ ಸಹರಾ ಮರುಭೂಮಿಯಲ್ಲಿ ಬಿದ್ದ ಮಳೆ ಇದಕ್ಕೆ ಉದಾಹರಣೆಯಾಗಿದೆ. ತಾವು ಪರಿಸರವಾದದ ಹೆಸರಿನಲ್ಲಿ ಮಾಡುತ್ತಿರುವ ನಿರ್ಣಯಗಳು ಜನ ವಿರೋಧಿಯಾಗಿದೆ. ಕಾಡಿನ ನಡುವೆ ತಲೆತಲಾಂತರದಿಂದ ಕಾಡನ್ನು ಉಳಿಸಿಕೊಂಡು ಬಂದ ಸಮುದಾಯಗಳು ಈಗ ಕಾಡು ಪ್ರಾಣಿಗಳ ನಡುವೆ ಬದುಕುತ್ತಿದ್ದಾರೆ. ಅವುಗಳಿಂದ ಹಾನಿಗೀಡಾಗುತ್ತಿದ್ದಾರೆ. ಮಲೆನಾಡಿನಲ್ಲಿ ಸುಸ್ಥಿರ ಅಭಿವೃದ್ಧಿ ಎಂದರೆಯಾವ ರೀತಿ ಎನ್ನುವುದನ್ನು ತಾವು ಸಾರ್ವಜನಿಕವಾಗಿ ತಿಳಿಸಬೇಕಾಗಿದೆ. ಬದುಕುತ್ತಿರುವ ನಾವೆಲ್ಲರೂ ಪರಿಸರವನ್ನೇ ಬಳಸಿಕೊಂಡು ಮನೆ ಆಸ್ತಿ ಹಣ ಸಂಪಾದಿಸಿ ಶ್ರೀಮಂತರಾಗಿದ್ದಾರೆ. ಯಾರೂ ಸಮೇತ ಪರಿಸರವನ್ನು ಬಳಸಿಕೊಳ್ಳದೆ ಹುಲ್ಲು ಗುಡಿಸಲಿನಲ್ಲಿ ಬದುಕುತ್ತಿಲ್ಲ. ಅಭಿವೃದ್ಧಿ ಮತ್ತು ಪರಿಸರ ಹಾನಿ ವಿರುದ್ಧ ದಿಕ್ಕಿನಲ್ಲಿ ಸಾಗುತ್ತದೆ. ಅಭಿವೃದ್ಧಿಯನ್ನು ತಾವು ಒಪ್ಪಿಕೊಳ್ಳುವುದಾದರೆ ಪರಿಸರವನ್ನು ಯಥಾಸ್ಥಿತಿಯಲ್ಲಿ ಕಾಪಾಡಿಕೊಳ್ಳುವುದು ಅಸಾಧ್ಯ.

Vtech THIRTHAHALLI

ಈ ಸತ್ಯ ತಮಗೆ ತಿಳಿದಿದೆ ಎಂದು ಕೊಂಡಿದ್ದೇವೆ. ಈ ನಿಟ್ಟಿನಲ್ಲಿ ಸರ್ಕಾರವೇ ಮಲೆನಾಡಿನಲ್ಲಿ ಮಾಡಿರುವ ಅಣೆಕಟ್ಟುಗಳು ಪರಿಸರ ಹಾನಿಯ ಪ್ರಮುಖ ಅಂಶವಾಗುತ್ತವೆ. ತಾವು ಮಲೆನಾಡಿನಲ್ಲಿರುವ ಮುಳುಗಡೆ ಸಂತ್ರಸ್ಥರ ಸಮಸ್ಯೆಗಳ ಬಗ್ಗೆ ಅವರನ್ನು ಒತ್ತುವರಿದಾರರೆಂದು ಗುರುತಿಸಿದ ಸರ್ಕಾರಿ ಕಾನೂನುಗಳ ಬಗ್ಗೆ ಧ್ವನಿಯಾಗಿಲ್ಲ. ಇನ್ನು ಮುಂದೆಯಾದರೂ ತಾವು ಸಾಮಾನ್ಯ ಜನರ ಬದುಕಿನ ಧ್ವನಿಯಾಗಿ ಕಾರ್ಯನಿರ್ವಹಿಸಬೇಕೆಂದು ಮನವಿ ಪತ್ರ ಸಲ್ಲಿಸಿ ಮಾತನಾಡಿದರು.

ಈ ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಎನ್.ಪಿ.ರಾಜು, ಕುಮಾರ್‌ನಾಯ್ಕ್, ಪ್ರಕಾಶ್ ಮಂಜುನಾಥ ಭಾಷಾಸಾಬ್, ಗಣೇಶ್ ಬೆಳ್ಳಿ ಅಣ್ಣಪ್ಪ ಶೆಟ್ಟಿ, ವೀರೇಂದ್ರಗೌಡ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Comment