SHIKARIPURA | ಕಳೆದ ಒಂದೂವರೆ ವರ್ಷದಿಂದ ಖಾಲಿಯಿದ್ದ ಪುರಸಭಾ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಇಂದು ಸಾಗರ ಉಪವಿಭಾಗಾದಿಕಾರಿ ಯತೀಶ್ ಸಮ್ಮುಖದಲ್ಲಿ ಚುನಾವಣೆ ನಡೆದು ಅಧ್ಯಕ್ಷರಾಗಿ ಶೈಲಾ ಮಡ್ಡಿ, ಉಪಾಧ್ಯಕ್ಷರಾಗಿ ರೂಪಾ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾದರು.
ಪುರಸಭಾ ಸಭಾಂಗಣದಲ್ಲಿ ಇಂದು ಬೆಳಗ್ಗೆ 10-00 ಗಂಟೆಗೆ ಆರಂಭವಾದ ಚುನಾವಣಾ ಪ್ರಕ್ರಿಯೆಯಲ್ಲಿ 11-00 ಗಂಟೆವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು ಈ ಸಮಯದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶೈಲಾ ಮಡ್ಡಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ರೂಪಾ ಮಂಜುನಾಥ್ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಉಪವಿಭಾಗಾಧಿಕಾರಿ ಯತೀಶ್ ರವರು 12-30 ಕ್ಕೆ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿ ಅವರಿಗೆ ಶುಭ ಹಾರೈಸಿ, ಪ್ರಮಾಣಪತ್ರ ನೀಡಿದರು.
2019 ರಲ್ಲಿ ಒಟ್ಟು 23 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ 12 ಸ್ಥಾನ ಕಾಂಗ್ರೆಸ್, 8 ಸ್ಥಾನ ಬಿಜೆಪಿ, 3 ಸ್ಥಾನ ಪಕ್ಷೇತರು ಗೆದ್ದಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಸುಲಭವಾಗಿ ಲಭಿಸಬೇಕಿದ್ದ ಅಧ್ಯಕ್ಷ ಸ್ಥಾನ, ರಾಜಕೀಯ ಪಿತೂರಿಯಿಂದ ಮತ್ತೆ ಬಿಜೆಪಿ ಪಡೆದುಕೊಂಡಿತು. ಮೊದಲನೇ ಅವಧಿಗೆ ಲಕ್ಷ್ಮಿ ಮಹಾಲಿಂಗಪ್ಪ ಆಯ್ಕೆಯಾಗಿದ್ದರು. ಉಪಾಧ್ಯಕ್ಷರಾಗಿ ಸಾಧಿಕ್ ಭಾಷಾ, ಎರಡನೇ ಅವಧಿಗೆ ರೇಖಾ ಮಂಜುನಾಥ್ ಉಪಾಧ್ಯಕ್ಷರಾಗಿ ಮತ್ತೊಮ್ಮೆ ಸಾಧಿಕ್ ಭಾಷಾ ಆಯ್ಕೆಯಾಗಿದ್ದರು. ನಂತರ ಮೀಸಲಾತಿಯಿಂದ ಒಂದೂವರೆ ವರ್ಗಗಳ ಎಸಿ ಆಡಳಿತವಿದ್ದು, ಈಗ ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಶೈಲಾ ಮಡ್ಡಿ, ಉಪಾಧ್ಯಕ್ಷೆಯಾಗಿ ರೂಪಾ ಮಂಜುನಾಥರವರು ಅವಿರೋಧವಾಗಿ ಆಯ್ಕೆಯಾಗಿದ್ದು ಇವರು ಮೂರನೇ ಅವಧಿಗೆ ಅಂದರೆ ಮುಂದಿನ 13 ತಿಂಗಳಿಗೆ ಆಯ್ಕೆಯಾಗಿದ್ದಾರೆ.
ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ಉಪಾಧ್ಯಕ್ಷರಿಗೆ ಶುಭ ಹಾರೈಸಿ ಮಾತನಾಡಿದ ಸಂಸದ ಬಿ ವೈ ರಾಘವೇಂದ್ರ, ಅವಿರೋಧವಾಗಿ ಆಯ್ಕೆಯು ಉತ್ತಮ ಬೆಳವಣಿಗೆಯಾಗಿದ್ದು, ಇದೇ ರೀತಿ ಬರುವಂತ ದಿನಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಬೇಕಿದೆ. ಚುನಾವಣಾ ಸಂದರ್ಭದಲ್ಲಿ ಮಾತ್ರ ನಾವು ಬೇರೆಬೇರೆ ಪಕ್ಷದವರಾಗಿರುತ್ತೇವೆ. ಜನ ಸಾಮಾನ್ಯರ ಸಮಸ್ಯೆಗಳಿಗೆ ಎಲ್ಲಾ ಸದಸ್ಯರು ಸಮನಾಗಿ ಪಕ್ಷಾತೀತವಾಗಿ ಸೇವೆ ಸಲ್ಲಿಸಬೇಕು ಎಂದು ಕರೆ ನೀಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ ವೈ ವಿಜಯೇಂದ್ರ ಮಾತನಾಡಿ, ಅವಿರೋಧವಾಗಿ ಆಯ್ಕೆಯಾಗಿದ್ದು ತುಂಬಾ ಸಂತೋಷವಾಗಿದ್ದು, ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಸಾಕಷ್ಟು ಜವಾಬ್ದಾರಿ ಮತ್ತು ಹಲವಾರು ನಿರೀಕ್ಷೆಯಿದ್ದು, ಎಲ್ಲರೂ ಪಟ್ಟಣದ ಜನತೆಯ ಸಮಸ್ಯಗಳಿಗೆ ಉತ್ತಮವಾಗಿ ಸ್ಪಂದಿಸುವ ಮನೋಭಾವ ಹೊಂದಬೇಕು ಎಂದು ಸಭೆ ನೀಡಿದರು.
23 ವಾರ್ಡ್‌ಗಳ ಸದಸ್ಯರ ಪೈಕಿ ಹುಲ್ಮಾರ್ ಮಹೇಶ್ ರವರು ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರಿಂದ ಚುನಾವಣಾ ಪ್ರಕ್ರಿಯೆಯಲ್ಲಿ 22 ವಾರ್ಡ್‌ಗಳ ಸದಸ್ಯರು ಪಾಲ್ಗೊಂಡಿದ್ದರಲ್ಲದೇ, ತಹಶೀಲ್ದಾರ್ ಮಲ್ಲೇಶಪ್ಪ ಬೀರಪ್ಪ ಪೂಜಾರ್, ಪುರಸಭಾ ಮುಖ್ಯಾಧಿಕಾರಿ ಭರತ್ ಹಾಗೂ ಪುರಸಭಾ ಆಡಳಿತ ಅಧಿಕಾರಿಗಳು ಹಾಜರಿದ್ದರು.
ಒಟ್ಟು 23 ಸ್ಥಾನದ ಪೈಕಿ ಓರ್ವ ಸದಸ್ಯನ ರಾಜೀನಾಮೆಯಿಂದ 22 ಸ್ಥಾನಕ್ಕೆ ಕುಸಿದಿರುವ ಪುರಸಭೆಯಲ್ಲೀಗ 10 ಬಿಜೆಪಿ, 8 ಕಾಂಗ್ರೆಸ್, 4 ಪಕ್ಷೇತರ ಸದಸ್ಯರಿದ್ದು ರಾಜ್ಯದಲ್ಲಿ ಆಡಳಿತರೂಡವಾಗಿರುವ ಕಾಂಗ್ರೆಸ್ ಪಕ್ಷ ಬೆಂಬಲಿತ 8 ಸದಸ್ಯರಿದ್ದರೂ, ನೆಪ ಮಾತ್ರಕ್ಕಾದರೂ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಯಾರೊಬ್ಬರು ನಾಮಪತ್ರ ಸಲ್ಲಿಕೆಗೆ ಮುಂದಾಗದಿರುವುದು ಸಾರ್ವಜನಿಕ ವಲಯದಲ್ಲಿ ಹಲವು ರೀತಿಯ ಅನುಮಾನ ಹುಟ್ಟುಹಾಕಿದೆ.