ಹೊಸನಗರ

ಪ್ರತಿಯೊಬ್ಬರೂ ವಿದ್ಯೆಯನ್ನು ಹಿಂಬಾಲಿಸಬೇಕೇ ಹೊರತು ಸಂಪತ್ತನಲ್ಲ ; ಉಪನ್ಯಾಸಕ ಜೆ.ಕೆ.ಸತೀಶ್

ಹೊಸನಗರ ; ಯುಗಯುಗಗಳಿಗೆ ಅನುಗುಣವಾಗಿ ಶಿಕ್ಷಣ ಕ್ಷೇತ್ರದಲ್ಲಿನ ಬೋಧನಾ ಪದ್ದತಿಯ ಶೈಲಿ ಬದಲಾಗುತ್ತಿದೆ. ಶಿಕ್ಷಣಾರ್ಥಿ ತನ್ನ ಸಾಧನೆಗೆ ಗುರುವಿನ ಜೊತೆಗೆ ಸ್ಪಷ್ಟ ಗುರಿ ಹೊಂದುವುದು ಅಗತ್ಯವಾಗಿದೆ ಎಂದು ಶಿವಮೊಗ್ಗ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಜಿ.ಕೆ.ಸತೀಶ್ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now

ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ, ಶಾಲಾ ಶಿಕ್ಷಣ ಇಲಾಖೆ ಹಾಗು ಸಮಗ್ರ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಈಡಿಗ ಸಭಾ ಭವನದಲ್ಲಿ ಮಾಜಿ ರಾಷ್ಟ್ರಪತಿ ಭಾರತರತ್ನ ಡಾ|| ಎಸ್. ರಾಧಾಕೃಷ್ಣನ್ ಅವರ 137ನೇ ಜನ್ಮದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ವಿಶೇಷ ಉಪನ್ಯಾಸ ನೀಡಿದರು.

ಅನ್ನದಾನಕ್ಕೂ ಮಿಗಿಲಾದ ದಾನವೆಂದರೆ ಅದು ವಿದ್ಯಾ ದಾನ ಮಾತ್ರವೇ. ಗುರು ಜ್ಞಾನದ ಸಂಕೇತ. ಇಡೀ ಸಮಾಜವು ವಿದ್ಯೆಯನ್ನು ಹಿಂಬಾಲಿಸಬೇಕೇ ಹೊರತು ಸಂಪತ್ತನಲ್ಲ. ಸಮಾಜದಲ್ಲಿ ಗುರುವಿಗೆ ವಿಶೇಷ ಸ್ಥಾನವಿದ್ದು, ಅದು ಹೆತ್ತವರ ನಂತರದ ಸ್ಥಾನವಾಗಿದೆ. ಗುರುವಿನ ಶಕ್ತಿ ಸ್ಪರ್ಶಮಣಿಗಿಂತಲೂ ಮೇಲಾಗಿದ್ದು, ಆತನ ಒಂದು ಸಂದೇಶ ಇಡೀ ಸಮಾಜವನ್ನೇ ಬದಲಾಯಿಸಬಹುದು. ಶಿಕ್ಷಕ ವೃತ್ತಿಯಿಂದು ಇಡೀ ಪರಂಪರೆಯನ್ನೇ ಮುಂದಿನ ಯುವಜನತೆಗೆ ಸಾಗಿಸುವ ಸಾಧನದಂತಾಗಿದ್ದು, ವಿದ್ಯಾರ್ಥಿಗಳ ಕಲಿಕೆಗೆ ಸುತ್ತಲ ಪರಿಸರ, ಪ್ರಕೃತಿ ಮತ್ತು ಸಂಸ್ಕೃತಿಗಳ ಸಮಾಗಮವೇ ಪೂರಕ ಶಿಕ್ಷಣವಾಗಿದೆ. ಪ್ರತಿಯೊಬ್ಬರ ಮಸ್ತಕದಲ್ಲಿ ಯುಕ್ತಿ ಇದ್ದಲ್ಲಿ ಮಾತ್ರವೇ ಜ್ಞಾನಾರ್ಜನೆ ಸಾಧ್ಯ ಎಂದ ಅವರು, ಶಿಕ್ಷಕರಿಗೆ ನಿರಂತರ ಅಧ್ಯಯನ ಅತಿ ಮುಖ್ಯವಾಗಿದ್ದು, ಅವರ ನಗು ಮಕ್ಕಳನ್ನು ತಮ್ಮತ್ತ ಸೆಳೆಯುವ ಅಸ್ತ್ರವಾಗಲೆಂದು ಆಶಿಸಿದರು.

ಶಿಕ್ಷಕ ವೃತ್ತಿಯಿಂದು ಕೆಲವರಿಗೆ ಅನಿವಾರ್ಯವಾದರೆ, ಕೆಲವರಿಗಂತೂ ಅದು ಆಕಸ್ಮಿಕ ಎಂಬಂತೆ ತೋರಿಬರುತ್ತಿದೆ. ಶಿಕ್ಷಕ ವೃತ್ತಿಗೆ ಧಕ್ಕೆ ತರುವಂತ ಟಿವಿ, ಮೊಬೈಲ್‌ಗಳಂತ ಸಂಪರ್ಕ ಮಾಧ್ಯಮಗಳಿಂದ ಶಿಕ್ಷಕರು ಆದಷ್ಟು ದೂರ ಇರಬೇಕು ಎಂಬ ಎಚ್ಚರಿಕೆಯ ಸಂದೇಶ ನೀಡಿದ ಅವರು, ಶಿಕ್ಷಕರು ತಮ್ಮ ಆತ್ಮವಿಮರ್ಷೆಯ ಮೂಲಕ ಸರಳ, ಸಜ್ಜನಿಕೆಯ ಬದುಕು ರೂಪಿಸಿಕೊಂಡು ಇತರರಿಗೆ ಮಾದರಿಯಾಗಲಿ ಎಂದರು.

ಕ್ರಿಯಾಶೀಲತೆ, ಕಲಾತ್ಮಕತೆ ಶಿಕ್ಷಕರಿಗೆ ಅಗತ್ಯವಾಗಿದ್ದು, ತಂತ್ರಜ್ಞಾನ ಸಹ ಜ್ಞಾನಾರ್ಜನೆಗೆ ಸಹಕಾರಿ ಆಗಿದೆ. ಆದರೆ. ಅದು ಅನಿವಾರ್ಯವಲ್ಲ. ಶಿಕ್ಷಣ ಇಲಾಖೆಯಲ್ಲಿ ತುಂಬಿರುವ ಹೂಳು ತೆಗೆಯುವ ಕಾರ್ಯ ಪ್ರತಿಯೊಬ್ಬರಿಂದ ಆಗಬೇಕಿದೆ. ಇದಕ್ಕೆ ಅಧ್ಯಯನ, ಸಂಶೋಧನೆಯ ಅಗತ್ಯವಿದೆ. ರಾಜ್ಯದಲ್ಲಿ ಈಗಾಗಲೇ ಸುಮಾರು 700 ಸರ್ಕಾರಿ ಶಾಲೆಗಳ ಬಾಗಿಲು ಮುಚ್ಚಿವೆ. ಸುಮಾರು 3500ಕ್ಕೂ ಹೆಚ್ಚು ಶಾಲೆಗಳು ಏಕೋಪಧ್ಯಾಯ ಶಾಲೆಗಳಾಗಿ ಕಾರ್ಯ ನಿರ್ವಹಿಸುತ್ತಿದೆ. ಇದು ಹೀಗೆಯೇ ಮುಂದುವರಿದಲ್ಲಿ ಇನ್ನಷ್ಟು ಸರ್ಕಾರಿ ಶಾಲೆಗಳು ಖಾಯಂ ಬಂದ್ ಆಗುವ ದಿನಗಳು ದೂರವಿಲ್ಲ. ನೈಜ್ಯ ಶಿಕ್ಷಣ ಹಾಗೂ ಅಗತ್ಯ ಸೌಲಭ್ಯ ನೀಡಿದಲ್ಲಿ ಮಾತ್ರವೇ ಸಂವಿಧಾನದ ಮೂಲ ಆಶಯಕ್ಕೆ ಮಹತ್ವ ನೀಡಿದಂತೆ ಆಗುವುದು ಎಂದರು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಬಿ. ಚಿದಂಬರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಲೂಕಿನಲ್ಲಿ ಭೌಗೋಳಿಕವಾಗಿ ಹಲವಾರು ಗಣನೀಯ ಸವಾಲುಗಳಿದ್ದರೂ ಎಲ್ಲವನ್ನು ಮೆಟ್ಟಿ ಶೈಕ್ಷಣಿಕವಾಗಿ ರಾಜ್ಯಮಟ್ಟದಲ್ಲಿ ಹೆಸರುಗಳಿಸಲು ಸಹಕರಿಸಿದ ಇಡೀ ಶಿಕ್ಷಕ ವೃಂದ ಅಭಿನಂದನರ್ಹ ಎಂದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಪಟ್ಟಣ ಪಂಚಾಯತಿ ಅಧ್ಯಕ್ಷ ನಾಗರಾಜ ರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಡಯೆಟ್ ಉಪ ನಿರ್ದೇಶಕ (ಅಭಿವೃದ್ದಿ) ಹೆಚ್.ಆರ್. ಕೃಷ್ಣಮೂರ್ತಿ, ತಾ.ಪಂ. ಇಒ ನರೇಂದ್ರ ಕುಮಾರ್, ಪ್ರಭಾರಿ ಬಿಇಒ ಚೇತನ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸೋಮಶೇಖರ, ಪಿ.ಎಂ. ಪೋಷನ್ ಶಕ್ತಿ ನಿರ್ಮಾಣ್ ಯೋಜನೆಯ ಸಹಾಯಕ ನಿರ್ದೇಶಕ ಶೇಷಾಚಲ ನಾಯ್ಕ, ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಂಗಸ್ವಾಮಿ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ರೇಣುಕೇಶ್, ಶಿಕ್ಷಕರ ಸಂಘದ ರಮೇಶ್ ಕುಮಾರ್, ಲಿಲ್ಲಿ ಡಿಸೋಜಾ, ರಾಜುಶೆಟ್ಟಿ, ಕತ್ರಿಕೊಪ್ಪ ಪುಟ್ಟಸ್ವಾಮಿ ಪ್ರಭಾರಿ ತಾಲೂಕು ದೈಹಿಕ ಶಿಕ್ಷಕ ಪರಿವೀಕ್ಷಕ ವಿನಯ್ ಹೆಗ್ಡೆ ಕರ್ಕಿ ಮೊದಲಾದವರು ಇದ್ದರು.

ಇದೇ ವೇಳೆ ನಿವೃತ್ತ ಶಿಕ್ಷಕರಿಗೆ, ತಾಲೂಕು ಉತ್ತಮ ಶಿಕ್ಷಕರಿಗೆ, ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದ ತಾಲೂಕಿನ 19 ಶಾಲಾ ಮುಖ್ಯಸ್ಥರಿಗೆ ಸನ್ಮಾನ ನಡೆಯಿತು.

ಸಭೆಗೆ ಗೈರಾಗಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು, ಆರಗ ಜ್ಞಾನೇಂದ್ರ ಹಾಗು ಪರಿಷತ್ತಿನ ಸದಸ್ಯ ಎಸ್.ಎಲ್ ಭೋಜೆಗೌಡ ಅವರ ಸಂದೇಶವನ್ನು ಶಿಕ್ಷಕರು ವಾಚಿಸಿದರು.

ಬಿಇಒ ಚೇತನ ಸ್ವಾಗತಿಸಿ, ಶಿಕ್ಷಕ ಪ್ರವೀಣ್ ಹಾಗೂ ರೇಖಾ ಕುಲಾಲ್ ನಿರೂಪಿಸಿ, ಕಾರ್ಯಕ್ರಮದ ನೋಡಲ್ ಅಧಿಕಾರಿ ಕರಿಬಸಪ್ಪ ವಂದಿಸಿದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]