HOSANAGARA ; ಸರ್ಕಾರಿ ನೌಕರರಿಗೆ ವರ್ಗಾವಣೆ ಸಾಮಾನ್ಯ ಹಾಗು ಅನಿವಾರ್ಯ. ಇದು ವ್ಯಕ್ತಿತ್ವ ವಿಕಸನ ಮತ್ತು ಸ್ಥಳೀಯ ಪರಿಸರ ಅರಿಯಲು ಸಹಕಾರಿಯಾಗಿದ್ದು ವ್ಯಕ್ತಿಯನ್ನು ಪರಿಪೂರ್ಣತೆಯತ್ತ ಒಯ್ಯುತ್ತದೆ ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಉಮೇಶ್ ಎಸ್ ಗುಡ್ಡದ್ ಹೇಳಿದರು.
ಇತ್ತೀಚೆಗೆ ಪದೋನ್ನತಿ ಹೊಂದಿ ವಿಜಯಪುರ ಜಿಲ್ಲೆಯ ಮಹಾನಗರ ಪಾಲಿಕೆಗೆ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಶನಿವಾರ ಪಟ್ಟಣ ಪಂಚಾಯತಿ ಆಡಳಿತ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಅಧಿಕಾರಿಗಳು ಸರ್ಕಾರಿ ದಾಖಲೆಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಕಾರಣ, ಇದು ಸಾರ್ವಜನಿಕ ಸರಕಾರಿ ದಾಖಲೆಗಳಾಗಿದೆ. ಜನಸಾಮಾನ್ಯರಿಗೂ ದಾಖಲೆಗಳ ಸ್ಥಿತಿ-ಗತಿಯ ಅರಿವಾಗುವಂತೆ ಜತನದಿಂದ ಕಾಯ್ದು ಕೊಳ್ಳಬೇಕಾದ ಗುರುತರ ಜವಾಬ್ದಾರಿ ಸಿಬ್ಬಂದಿಗಳ ಮೇಲಿದೆ ಎಂದರು.
ತಾವು ಕರ್ತವ್ಯ ನಿರ್ವಹಿಸಿದ ವೇಳೆ ತುಂಬು ಸಹಕಾರ ನೀಡಿದ ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.
ಅಧ್ಯಕ್ಷ ನಾಗಪ್ಪ ಮಾತನಾಡಿ, ಜನಪ್ರತಿನಿಧಿಗಳ ಅಧಿಕಾರ ಶಾಶ್ವತ ಅಲ್ಲ. ಆದರೆ, ಸರ್ಕಾರಿ ನೌಕರರ ಅಧಿಕಾರ ನಿರಂತರ, ಈ ವೇಳೆಯಲ್ಲಿ ಜನಪರ ಸೇವೆಗೆ ಸಿಬ್ಬಂದಿಗಳು ಮುಂದಾದರೆ ಮಾತ್ರವೇ ನಿವೃತ್ತಿ ಬಳಿಕವೂ ಜನರ ಮನಸ್ಸಿನಲ್ಲಿ ಸ್ಥಿರಸ್ಥಾನ ಪಡೆಯಲು ಸಾಧ್ಯವೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಉಪಾಧ್ಯಕ್ಷೆ ಚಂದ್ರಕಲಾ, ಸದಸ್ಯ ಅಶ್ವಿನಿಕುಮಾರ್, ಸಿಬ್ಬಂದಿಗಳಾದ ಮಂಜುನಾಥ್, ಗಿರೀಶ್ ಅಭಿಪ್ರಾಯ ಹಂಚಿಕೊಂಡರು.
ಈ ವೇಳೆ ನೂತನ ಮುಖ್ಯಾಧಿಕಾರಿ ಸುರೇಶ್, ಸದಸ್ಯರಾದ ಗುಲಾಬಿ, ಕೃಷ್ಣವೇಣಿ, ಗುರುರಾಜ್, ನಿತ್ಯಾನಂದ್, ಸಿಬ್ಬಂದಿಗಳಾದ ಆಸ್ಮಾ, ನೇತ್ರಾವತಿ, ಅಕ್ಷತಾ, ಶೃತಿ, ಸರೋಜಾ, ಚಂದ್ರಪ್ಪ, ಪರಶುರಾಮ್, ಬಸವರಾಜ್, ಉಮಾಶಂಕರ್ ಮೊದಲಾದವರು ನಿರ್ಗಮಿತ ಮುಖ್ಯಾಧಿಕಾರಿ ಉಮೇಶ್ ಅವರಿಗೆ ಶುಭಕೋರಿ ಆತ್ಮೀಯವಾಗಿ ಬೀಳ್ಕೊಟ್ಟರು.