ಹೊಸನಗರ ; ಸೇವಾನಿರತ ವೃತ್ತಿಯಲ್ಲಿ ನಿವೃತ್ತಿ ಅನಿವಾರ್ಯ. ಆದರೆ, ತನ್ನ ಕರ್ತವ್ಯದಲ್ಲಿ ಶಿಸ್ತು, ಶ್ರದ್ದೆ, ನಿಷ್ಠೆ, ಪ್ರಾಮಾಣಿಕತೆ, ಸಮಯ ಪಾಲನೆ ಹೊಂದಿರುವ ವ್ಯಕ್ತಿಗೆ ಇಡೀ ಮನುಕುಲವೇ ಗೌರವ ನೀಡುತ್ತದೆ ಎಂಬುದಕ್ಕೆ ಇಂದಿನ ಸಮಾರಂಭ ಸಾಕ್ಷಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್. ಕೃಷ್ಣಮೂರ್ತಿ ತಿಳಿಸಿದರು.
ಶಿಕ್ಷಣ ಇಲಾಖೆಯಲ್ಲಿ ನಿರಂತರ 31 ವರ್ಷಗಳ ಕಾಲ ಪ್ರಾಮಾಣಿಕ ಸೇವೆ ಸಲ್ಲಿಸಿ, ಶುಕ್ರವಾರ ವಯೋನಿವೃತ್ತಿ ಹೊಂದಿದ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಾಲಚಂದ್ರರಾವ್ ಕುರಿತು ತಾಲೂಕು ದೈಹಿಕ ಶಿಕ್ಷಕರ ಸಂಘ ಇಲ್ಲಿನ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರ ಮಾತನಾಡಿದರು.
ನಿರಂತರ ಶ್ರಮ, ಶಿಸ್ತು, ಸಮಯಪಾಲನೆಯಿಂದ ಮಹತ್ತರ ಸಾಧಿಸಲು ಸಾಧ್ಯ ಎಂಬುದಕ್ಕೆ ಬಾಲಚಂದ್ರ ಅವರ ಬದುಕು, ಸಾಧನೆಗಳೇ ಜೀವಂತ ಸಾಕ್ಷಿಯಾಗಿದೆ. ಖಾಸಗಿ ಕಾಲೇಜಿನ ಉಪನ್ಯಾಸಕ ವೃತ್ತಿ ತೊರೆದು ಸರ್ಕಾರಿ ಸೇವೆಗೆ ಸೇರಿ, ಹಲವು ಕಷ್ಟ ಕಾರ್ಪಣ್ಯಗಳ ನಡುವೆ ಹಲವಾರು ರಾಜ್ಯ, ರಾಷ್ಟ್ರೀಯ ಕ್ರೀಡಾಪಟುಗಳನ್ನು ತಯಾರು ಮಾಡಿ ಸಮಾಜಕ್ಕೆ ಕೊಡುಗೆ ನೀಡಿದ ಕೀರ್ತಿ ಇವರದು. ಇವರ ಮೃದು ಮಾತು, ಸದಾ ಹಸನ್ಮುಖಿ, ಶಾಂತ ಸ್ವಭಾವವೇ ಇವರು ರಾಜ್ಯವ್ಯಾಪ್ತಿ ಅನೇಕ ಸನ್ಮಿತ್ರರ ಸಂಪಾದಿಸಲು ಕಾರಣವೆಂದರು. ಇವರ ನಿವೃತ್ತಿ ಜೀವನ ಆರೋಗ್ಯ, ಸಮೃದ್ದಿಯಿಂದ ಕೂಡಿರಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ತಾಲೂಕು ಪಂಚಾಯತಿ ಇಒ ನರೇಂದ್ರ ಕುಮಾರ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಂಡಿ ಸೋಮಶೇಖರ್, ಕಾರ್ಯದರ್ಶಿ ಪುಟ್ಟಸ್ವಾಮಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಪ್ರಕಾಶ್, ದೈಹಿಕ ಶಿಕ್ಷಕ ನಿರಂಜನಮೂರ್ತಿ, ಕ್ಷೇತ್ರ ಸಮನ್ವಯಾಧಿಕಾರಿ ರಂಗನಾಥ್, ಜಿಲ್ಲಾ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಆಂಜನಪ್ಪ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಶೇಷಾಚಲ ನಾಯ್ಕ್, ಶಿಕ್ಷಕ ರೇಣುಕೇಶ್, ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಗುರುರಾಜ್, ಚಂದ್ರಬಾಬು, ಈಶ್ವರಪ್ಪ, ಗುರುಮೂರ್ತಿ, ದೈಹಿಕ ಶಿಕ್ಷಣ ಇಲಾಖೆಯ ಪ್ರಭು, ಚಂದ್ರಪ್ಪ, ರಮೇಶ್ ಬಾಬು, ಸ್ಥಳೀಯರಾದ ರಾಜುಶೆಟ್ಟಿ, ಸುರೇಶ್, ನಾಗರಾಜ್, ಜಗನ್ನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ರಿಪ್ಪನ್‌ಪೇಟೆ ಶ್ರೀ ರಾಮಕೃಷ್ಣ ಶಾಲೆಯ ಕೋಚ್ ವಿನಯ್ ಹಾಗು ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.