ಹೊಸನಗರ

ಕಣ್ಣೆದುರೇ ಒಣಗಿದ ಬೆಳೆ, ಹೆಗಲೇರಿದ ಸಾಲ: ಬದುಕಿನ ಹೋರಾಟದಲ್ಲೇ ಸೋತು ವಿಷ ಕುಡಿದ ಅನ್ನದಾತ!

ತೀವ್ರ ಮಳೆಯ ಕೊರತೆಯಿಂದ ಬೆಳೆ ನಾಶವಾಗಿ, ಸಾಲ ತೀರಿಸಲಾಗದೆ ನೊಂದ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಸವಾಪುರದಲ್ಲಿ ನಡೆದಿದೆ.

Suresh Basavapura

ರಿಪ್ಪನ್‌ಪೇಟೆ: ತೀವ್ರ ಮಳೆಯ ಕೊರತೆಯಿಂದ ಬೆಳೆ ನಾಶವಾಗಿ, ಸಾಲ ತೀರಿಸಲಾಗದೆ ನೊಂದ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಸನಗರ ತಾಲೂಕಿನ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಾಪುರ ಗ್ರಾಮದಲ್ಲಿ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಬಸವಾಪುರ ಗ್ರಾಮದ ಸುರೇಶ್ ಟಿ (59) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ರೈತ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಘಟನೆಯ ವಿವರ:

ಸುರೇಶ್ ಬಸವಾಪುರ ಗ್ರಾಮದ ಸರ್ವೆ ನಂಬರ್ 33ರಲ್ಲಿ ಸುಮಾರು 3.3 ಎಕರೆ ಕೃಷಿ ಜಮೀನು ಹೊಂದಿದ್ದು, ಅದರಲ್ಲಿ ಅಡಿಕೆ, ಭತ್ತ ಹಾಗೂ ಕಬ್ಬು ಬೆಳೆದಿದ್ದರು. ಆದರೆ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ಬೆಳೆದ ಬೆಳೆಗಳೆಲ್ಲ ಒಣಗಿ ತೀವ್ರ ನಷ್ಟ ಸಂಭವಿಸಿತ್ತು.

ಕೃಷಿ ಚಟುವಟಿಕೆಗಳಿಗಾಗಿ ಅವರು ಅರಸಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ₹75 ಸಾವಿರ ಸಾಲ ಪಡೆದಿದ್ದರು. ಇದರ ಜೊತೆಗೆ ವಿವಿಧ ಸಂಘ-ಸಂಸ್ಥೆಗಳು ಹಾಗೂ ಸ್ಥಳೀಯವಾಗಿ ₹5 ರಿಂದ ₹6 ಲಕ್ಷದಷ್ಟು ಕೈಸಾಲ ಮಾಡಿಕೊಂಡಿದ್ದರು. ಬೆಳೆ ಕೈಕೊಟ್ಟ ಕಾರಣ ಸಾಲ ಮರುಪಾವತಿಸಲು ಸಾಧ್ಯವಾಗದೆ ತೀವ್ರ ಆರ್ಥಿಕ ಸಂಕಷ್ಟ ಹಾಗೂ ಮಾನಸಿಕ ವೇದನೆಗೆ ಒಳಗಾಗಿದ್ದರು. ಇದೇ ಚಿಂತೆಯಿಂದಾಗಿ ಅವರು ಇತ್ತೀಚೆಗೆ ಮದ್ಯವ್ಯಸನಕ್ಕೂ ದಾಸರಾಗಿದ್ದರು ಎನ್ನಲಾಗಿದೆ.

ಆಸ್ಪತ್ರೆಯಲ್ಲಿ ಸಾವು:

ಸಾಲಬಾಧೆಯಿಂದ ತೀವ್ರವಾಗಿ ನೊಂದಿದ್ದ ಸುರೇಶ್ ಅವರು ನವೆಂಬರ್ 5ರಂದು ಮಧ್ಯಾಹ್ನ ಸುಮಾರು 12 ಗಂಟೆಯ ಸುಮಾರಿಗೆ ತಮ್ಮ ಮನೆಯ ಮುಂಭಾಗದ ಜಮೀನಿನಲ್ಲಿ ಕಳೆನಾಶಕ (ವಿಷ) ಸೇವಿಸಿದ್ದಾರೆ. ಇದನ್ನು ಗಮನಿಸಿದ ಪತ್ನಿ ಮತ್ತು ಪುತ್ರ, ತಕ್ಷಣವೇ ಸ್ಥಳೀಯರ ನೆರವಿನೊಂದಿಗೆ ಅವರನ್ನು ಶಿವಮೊಗ್ಗದ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ರಾತ್ರಿ 8:30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

ಈ ದುರಂತದ ಕುರಿತು ಮೃತನ ಪುತ್ರ ಕಾರ್ತಿಕ್ ನೀಡಿದ ದೂರಿನ ಮೇರೆಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]