ಹೊಸನಗರ

ಹೊಸನಗರ: ಗಂಗನಕೊಪ್ಪ ರೈತರ ನಿದ್ದೆಗೆಡಿಸಿದ ಯೋಜನೆ – ಶಾಸಕರಿಗೆ ಆಕ್ಷೇಪಣಾ ಮನವಿ

ರಾಜ್ಯ ಸರ್ಕಾರ ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಿಂದ ತಾತ್ಕಾಲಿಕವಾಗಿ ಅನುಮೋದನೆಗೊಂಡಿರುವ 'ರೋಡ್ ನೆಟ್‌ವರ್ಕ್ ಗ್ರಿಡ್ ಪ್ಲಾನ್' (Road Network Grid Plan) ಯೋಜನೆಯು ಹೊಸನಗರ ತಾಲೂಕಿನ ಗಂಗನಕೊಪ್ಪ ಗ್ರಾಮದ ರೈತರ ನಿದ್ದೆಗೆಡಿಸಿದೆ.

ಗಂಗನಕೊಪ್ಪದಲ್ಲಿ ರೋಡ್ ನೆಟ್‌ವರ್ಕ್ ಗ್ರಿಡ್ ಪ್ಲಾನ್ ವಿರುದ್ಧ ಶರಾವತಿ ಸಂತ್ರಸ್ತ ರೈತರ ಆಕ್ರೋಶ Villager's

ಹೊಸನಗರ: ರಾಜ್ಯ ಸರ್ಕಾರ ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಿಂದ ತಾತ್ಕಾಲಿಕವಾಗಿ ಅನುಮೋದನೆಗೊಂಡಿರುವ ‘ರೋಡ್ ನೆಟ್‌ವರ್ಕ್ ಗ್ರಿಡ್ ಪ್ಲಾನ್’ (Road Network Grid Plan) ಯೋಜನೆಯು ಹೊಸನಗರ ತಾಲೂಕಿನ ಗಂಗನಕೊಪ್ಪ ಗ್ರಾಮದ ರೈತರ ನಿದ್ದೆಗೆಡಿಸಿದೆ. ಸಾಗುವಳಿ ಜಮೀನುಗಳ ಮೂಲಕ ಹಾದುಹೋಗುವ 18 ಮೀಟರ್ ಅಗಲದ ಪ್ರಸ್ತಾವಿತ ರಸ್ತೆ ನಿರ್ಮಾಣಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸ್ಥಳೀಯ ರೈತರು, ಯೋಜನೆಯನ್ನು ಕೈಬಿಡುವಂತೆ ಸಾಗರ-ಹೊಸನಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರಿಗೆ ಸುದೀರ್ಘ ಮನವಿ ಸಲ್ಲಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ವಿವರ:

ಕರ್ನಾಟಕ ನಗರ ಮತ್ತು ಯೋಜನಾ ಕಾಯ್ದೆ 1961ರ ಅಡಿಯಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ಪಟ್ಟಣ ಸೇರಿದಂತೆ ರಾಜ್ಯದ 52 ಪಟ್ಟಣಗಳಿಗೆ ರಸ್ತೆ ಗ್ರಿಡ್ ಪ್ಲಾನ್ ಸಿದ್ಧಪಡಿಸಿ ಸರ್ಕಾರ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ. ಇದರ ಭಾಗವಾಗಿ ಎಂ.ಗುಡ್ಡೆಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಂಗನಕೊಪ್ಪ ಗ್ರಾಮದ ಸರ್ವೇ ನಂಬರ್ 20, 21, 22, 23 ಮತ್ತು 5ರ ಮೂಲಕ 18 ಮೀಟರ್ ಅಗಲದ ರಸ್ತೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಆದರೆ, ಈ ನಿರ್ಧಾರದಿಂದ ಗ್ರಾಮದಲ್ಲಿ ಸುಮಾರು 150-200 ವರ್ಷಗಳಿಂದ ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ ಮೂಲ ಕುಟುಂಬಗಳು ಮತ್ತು ಶರಾವತಿ ಯೋಜನೆಯ ಸಂತ್ರಸ್ತ ಸಣ್ಣ ರೈತರು ಬೀದಿಗೆ ಬೀಳುವ ಭೀತಿ ಎದುರಿಸುತ್ತಿದ್ದಾರೆ.

ರೈತರ ಆಕ್ಷೇಪಣೆ ಹಾಗೂ ಪ್ರಮುಖ ನಿಯಮಾವಳಿಗಳ ಉಲ್ಲಂಘನೆ:

ಜಮೀನು ಇಬ್ಬಾಗ ಹಾಗೂ ಕೃಷಿಗೆ ಪೆಟ್ಟು:

ಪ್ರಸ್ತಾವಿತ ರಸ್ತೆಯಿಂದಾಗಿ 16 ಜಂಟಿ ಖಾತೆದಾರರಿಗೆ ಸೇರಿದ ಸಾಗುವಳಿ ಭೂಮಿ ಇಬ್ಬಾಗವಾಗಲಿದ್ದು, ನೀರಾವರಿ ಹಾಗೂ ವ್ಯವಸಾಯಕ್ಕೆ ತೀವ್ರ ಅಡಚಣೆಯಾಗಲಿದೆ. “ಯಾವುದೇ ಚಾಲ್ತಿಯಲ್ಲಿರುವ ಸಾಗುವಳಿ ಜಮೀನುಗಳನ್ನು ಇಬ್ಬಾಗ ಮಾಡಿ ರಸ್ತೆ ನಿರ್ಮಿಸಬಾರದು” ಎಂಬ ಸರ್ಕಾರದ ಸ್ಪಷ್ಟ ನಿಯಮವಿದ್ದರೂ ಅದನ್ನು ಕಡೆಗಣಿಸಲಾಗಿದೆ ಎಂದು ರೈತರು ಆರೋಪಿಸಿದ್ದಾರೆ.

ಅಡಿಕೆ ತೋಟಕ್ಕೆ ಹಾನಿ:

ಸರ್ವೇ ನಂ. 20 ಮತ್ತು 23 ರಲ್ಲಿ ಈಗಾಗಲೇ ಅಡಿಕೆ ತೋಟ ಮಾಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಯೋಜನೆಯಿಂದ ಅಪಾರ ಪ್ರಮಾಣದ ಆರ್ಥಿಕ ನಷ್ಟ ಉಂಟಾಗಲಿದೆ.

ಈಗಾಗಲೇ ಭೂಸ್ವಾಧೀನ:

ಗಂಗನಕೊಪ್ಪ ಗ್ರಾಮದ ಸರ್ವೇ ನಂ. 3ರಲ್ಲಿ ಹಾದುಹೋಗುವ NH-766 C ಯ ಮಾವಿನಕೊಪ್ಪ-ಅಡಗೋಡಿ ಬೈಪಾಸ್ ರಸ್ತೆಗಾಗಿ ಈಗಾಗಲೇ 0.30 ಗುಂಟೆ ಜಮೀನು ಹಾಗೂ 1 ಆರ್‌ಸಿಸಿ ಮನೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿದೆ. ಹೀಗಿರುವಾಗ ಮತ್ತೊಮ್ಮೆ ಗ್ರಿಡ್ ಪ್ಲಾನ್ ಹೆಸರಿನಲ್ಲಿ 2 ಎಕರೆ ಜಮೀನು ಕಳೆದುಕೊಂಡರೆ ಬಡ ರೈತರ ಜೀವನ ಕಷ್ಟಕರವಾಗಲಿದೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಅವೈಜ್ಞಾನಿಕ ಯೋಜನೆ ಮತ್ತು ಸರ್ಕಾರದ ಹಣ ಪೋಲು:

ಈಗಾಗಲೇ ಮಾವಿನಕೊಪ್ಪ-ಅಡಗೋಡಿ ಬೈಪಾಸ್ ರಸ್ತೆ ಸಂಪರ್ಕ ಕಲ್ಪಿಸುತ್ತಿರುವುದರಿಂದ, ಹೊಸದಾಗಿ ಮತ್ತೊಂದು ರಿಂಗ್ ರಸ್ತೆ ನಿರ್ಮಿಸುವ ಅವಶ್ಯಕತೆ ಇಲ್ಲ. ವಾರಕೋಡು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಈಗಾಗಲೇ ಸೂಕ್ತ ರಸ್ತೆ ಸಂಪರ್ಕವಿದ್ದು, ಅಗತ್ಯವಿದ್ದರೆ ಅವುಗಳನ್ನು ದುರಸ್ತಿಗೊಳಿಸಬಹುದು. ಅನಗತ್ಯವಾಗಿ ಭೂ-ಪರಿಹಾರ ಹಾಗೂ ರಸ್ತೆ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡುವುದು ಸರ್ಕಾರಕ್ಕೆ ಆರ್ಥಿಕ ಹೊರೆಯಾಗಲಿದೆ.

ಹಿರಿಯ ನಾಗರಿಕರ ಅಳಲು:

“ನಾವು 60 ರಿಂದ 75 ವರ್ಷ ವಯೋಮಾನದ ಹಿರಿಯ ನಾಗರಿಕರಾಗಿದ್ದು, ಶರಾವತಿ ಯೋಜನೆಯಲ್ಲಿ ಒಮ್ಮೆ ಭೂಮಿ ಕಳೆದುಕೊಂಡು ಸಂತ್ರಸ್ತರಾಗಿದ್ದೇವೆ. ಈಗ ಉಳಿದಿರುವ ಅಲ್ಪಸ್ವಲ್ಪ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಪ್ರಭಾವಿಗಳ ಅನುಕೂಲಕ್ಕಾಗಿ ಬಡ ರೈತರ ಹೊಟ್ಟೆಯ ಮೇಲೆ ಹೊಡೆಯುವುದು ಸಾಮಾಜಿಕ ನ್ಯಾಯವೇ?” ಎಂದು ಗ್ರಾಮಸ್ಥರಾದ ಜಿ.ಹೆಚ್. ಜಯದೇವಪ್ಪ ಮತ್ತು ಜಿ.ಹೆಚ್. ಷಣ್ಮುಖಪ್ಪ, ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಮನವಿ:

ಪ್ರಸ್ತಾವಿತ ರಸ್ತೆ ಯೋಜನೆಯು ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಸರ್ಕಾರ ಹಾಗೂ ಶಾಸಕರು ತಕ್ಷಣ ಮಧ್ಯಪ್ರವೇಶಿಸಿ ಪರ್ಯಾಯ ಮಾರ್ಗದ ಬಗ್ಗೆ ಮರು ಪರಿಶೀಲನೆ ನಡೆಸಬೇಕು. ಗಂಗನಕೊಪ್ಪ ಗ್ರಾಮಸ್ಥರ ಜಮೀನಿನ ಮೂಲಕ ಹಾದುಹೋಗುವ ಈ ಯೋಜನೆಯನ್ನು ತಕ್ಷಣವೇ ಕೈಬಿಟ್ಟು, ಅಗತ್ಯವಿರುವ ಬೇರೆ ಭಾಗಕ್ಕೆ ವರ್ಗಾಯಿಸಬೇಕು ಎಂದು ಈ ಭಾಗದ ರೈತರಾದ ಜಿ.ಹೆಚ್. ಜಯದೇವಪ್ಪ, ಜಿ.ಹೆಚ್. ಮುರುಗೇಂದ್ರಪ್ಪ, ಜಿ.ಹೆಚ್ ಷಣ್ಮುಖಪ್ಪ, ಜಿ.ಹೆಚ್ ಈಶ್ವರಪ್ಪ, ಮಂಜುನಾಥ ಜಿ.ಎಸ್. ಮತ್ತು ಗಂಗನಕೊಪ್ಪದ ಇತರ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಯಾವುದೇ ಕಾರಣಕ್ಕೂ ತಮ್ಮ ಜೀವನಾಧಾರವಾದ ಜಮೀನನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ರೈತರು ಸ್ಪಷ್ಟಪಡಿಸಿದ್ದಾರೆ.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!