ಹೊಸನಗರ ; 1944 ರ ಏಪ್ರಿಲ್ 14 ರಂದು ಮುಂಬೈನ ವಿಕ್ಟೋರಿಯಾ ಡಾಕ್ ಬಂದರಿನಲ್ಲಿ ಸ್ಪೋಟಕ ವಸ್ತು ಸಾಗಾಟ ಮಾಡುತ್ತಿದ್ದ ‘ಎಸ್.ಎಸ್. ಪೋರ್ಟ್ ಸ್ಪೈಕೈನ್ ‘ ಎಂಬ ಹಡಗು ಘೋರ ಅಗ್ನಿ ದುರಂತಕ್ಕೆ ಒಳಗಾಗಿ, ಬೆಂಕಿ ನಂದಿಸಲು ತೆರಳಿದ್ದ ವೇಳೆ ಹಡಗು ಏಕಾಏಕಿ ಸ್ಪೋಟಗೊಂಡು ಅಗ್ನಿಶಾಮಕ ದಳದ ಬ್ರಿಗೇಡಿಯರ್ ಸೇರಿದಂತೆ 66 ಸಿಬ್ಬಂದಿಗಳ ಘಟನೆಯಲ್ಲಿ ಹುತಾತ್ಮರಾದ ಹಿನ್ನಲೆಯಲ್ಲಿ ರಾಜ್ಯ ವ್ಯಾಪ್ತಿ ಪ್ರತಿ ವರ್ಷ ಏಪ್ರಿಲ್ 14 ರಿಂದ 20ರವಗೆರೆ ಅಗ್ನಿಶಾಮಕ ಸೇವಾ ಸಪ್ತಾಹ ಆಚರಣೆ ನಡೆಯುತ್ತಿದೆ ಎಂದು ಇಲ್ಲಿನ ಅಗ್ನಿಶಾಮಕ ಇಲಾಖೆಯ ಠಾಣಾಧಿಕಾರಿ ಎನ್. ಆನಂದಪ್ಪ ತಿಳಿಸಿದರು.
ಪಟ್ಟಣದ ಕಛೇರಿ ಆವರಣದಲ್ಲಿ ಆಯೋಜಿಸಿದ್ದ ಅಗ್ನಿಶಾಮಕ ಸೇವಾ ಸಪ್ತಾಹ ಕಾರ್ಯಕ್ರಮದಲ್ಲಿ ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸೂಚಿಸಿ ಮಾತನಾಡಿದರು.

ಸಾರ್ವಜನಿಕರಲ್ಲಿ ಅಗ್ನಿ ಸುರಕ್ಷತೆ ಕುರಿತಂತೆ ಜಾಗೃತಿ ಮಾಡಿಸಬೇಕಿದೆ. ಕರಪತ್ರದ ಮೂಲಕ ಜನವಸತಿ ಪ್ರದೇಶಗಳು, ಕಾರ್ಖಾನೆ, ಮಾಲ್, ಪೆಟ್ರೋಲ್ ಬಂಕ್ ಸೇರಿದಂತೆ ವಿವಿಧೆಡೆ ಜಾಗೃತಿ ಮೂಡಿಸುವ ಅಗತ್ಯವಿದೆ. ಈ ಬಗ್ಗೆ ವಿವಿಧೆಡೆ ಹಲವು ಉಪನ್ಯಾಸ, ಅಣಕು ಪ್ರದರ್ಶನಗಳ ಮೂಲಕ ಜನಜಾಗೃತಿ ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಇಲಾಖೆ ಕಾರ್ಯೋನ್ಮುಖವಾಗಿದೆ ಎಂದರು.
ಇದೇ ವೇಳೆ ಅಗ್ನಿ ಸುರಕ್ಷತೆ ಕಾರ್ಯಾಚರಣೆ ವೇಳೆ ಹುತಾತ್ಮರಾದ ಇಲಾಖೆಯ ಸಿಬ್ಬಂದಿಗಳಿಗೆ ಮೌನಾಚರಣೆ ನಡೆಯಿತು.

ಪಟ್ಟಣದ ಶಿವಪ್ಪನಾಯಕ ರಸ್ತೆ, ಬಸ್ ನಿಲ್ದಾಣ, ವಿವಿಧ ಪೆಟ್ರೋಲ್ ಬಂಕ್ ಸೇರಿದಂತೆ ಹಲವಡೆ ಅಗ್ನಿ ಸುರಕ್ಷತೆ ಕುರಿತಂತೆ ಕರಪತ್ರ ನೀಡುವ ಮೂಲಕ ಸಾರ್ವಜನಿಕರಲ್ಲಿ ಇಲಾಖಾ ಸಿಬ್ಬಂದಿಗಳು ಅರಿವು ಮೂಡಿಸಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಗ್ನಿ ಸುರಕ್ಷತೆ ಕುರಿತು ಧ್ವನಿವರ್ಧಕದ ಮೂಲಕ ಜನಜಾಗೃತಿ ಮೂಡಿಸಲು ಇಲಾಖೆ ಬೈಕ್ ಜಾಥ ಹಮ್ಮಿಕೊಂಡಿತ್ತು.

ಈ ವೇಳೆ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಕೆ.ಟಿ.ರಾಜಪ್ಪ, ಸಿಬ್ಬಂದಿಗಳಾದ ಜೆ.ರವಿ, ಸುರೇಶ್ ಗೌಡ ಪಾಟೀಲ್, ನರೇಶ್ ಎಸ್ ಖಾರ್ವಿ, ಬಿ. ಪ್ರವೀಣ್ ಕುಮಾರ್, ಕೆ.ರವೀಂದ್ರ, ಬಿ.ಜೆ. ಶಿವರಾಜ್, ಎಂ.ಪಿ. ಸುಭಾಷಚಂದ್ರ, ಬಿ. ಮಂಜುನಾಥ, ಬಿ.ಸಿ.ಆಂಜನೇಯ, ಭೀಷ್ಮಾಚಾರಿ ಕಮ್ಮಾರ, ಟಿ.ಜೆ. ಹೇಮಂತ ಕುಮಾರ್ ಉಪಸ್ಥಿತರಿದ್ದರು.