ಅ.26ರಂದು ಸೊರಬದ ಬಂಗಾರಧಾಮದಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ 93ನೇ ಜನ್ಮದಿನೋತ್ಸವ

Written by Koushik G K

Published on:

ಶಿವಮೊಗ್ಗ, ಅಕ್ಟೋಬರ್ 23 (ಕರ್ನಾಟಕ ವಾರ್ತೆ): ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ 93ನೇ ಜನ್ಮದಿನೋತ್ಸವವನ್ನು ಅಕ್ಟೋಬರ್ 26ರಂದು ಸೊರಬದ ಬಂಗಾರಧಾಮದಲ್ಲಿ ವೈಭವದಿಂದ ಆಚರಿಸಲು ಸಜ್ಜಾಗಲಾಗಿದೆ. ಈ ಕಾರ್ಯಕ್ರಮವನ್ನು ಎಸ್. ಬಂಗಾರಪ್ಪ ಫೌಂಡೇಷನ್ ಹಾಗೂ ಎಸ್. ಬಂಗಾರಪ್ಪ ವಿಚಾರ ವೇದಿಕೆ ಸಂಯುಕ್ತಾಶ್ರಯದಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ವಿಚಾರ ವೇದಿಕೆಯ ಅಧ್ಯಕ್ಷ ವೇಣುಗೋಪಾಲ್ ನಾಯಕ್ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಬಂಗಾರಪ್ಪನವರು ಸಮಾಜವಾದಿ ಚಿಂತಕರಾಗಿದ್ದು, ಬಡವರ ಹಿತಚಿಂತಕರಾಗಿದ್ದರು. ಜನಪರ ಯೋಜನೆಗಳನ್ನು ಜಾರಿಗೆ ತಂದು, ಜನಮನದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ. ಅವರ ಜನ್ಮದಿನೋತ್ಸವವನ್ನು ನಮನ–ಚಿಂತನ–ಸನ್ಮಾನದ ರೂಪದಲ್ಲಿ ಆಚರಿಸಲಾಗುತ್ತಿದೆ,” ಎಂದರು.

ಈ ಸಂದರ್ಭದಲ್ಲಿ ನಾಲ್ವರು ಗಣ್ಯರಿಗೆ ‘ಬಂಗಾರ ಪ್ರಶಸ್ತಿ’ ನೀಡಿ ಸನ್ಮಾನಿಸಲಾಗುತ್ತದೆ. ಈ ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಹಾಗೂ ಫಲಕ ಒಳಗೊಂಡಿರುತ್ತದೆ.

  • ‘ಸಾಹಿತ್ಯ ಬಂಗಾರ’ ಪ್ರಶಸ್ತಿ: ಖ್ಯಾತ ಸಾಹಿತಿ ಡಾ. ಕಾಳೇಗೌಡ ನಾಗವಾರ
  • ‘ಧರ್ಮ ಬಂಗಾರ’ ಪ್ರಶಸ್ತಿ: ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಎಲ್. ರೇವಣಸಿದ್ದಯ್ಯ (ಗುಬ್ಬಿ ತೋಟದಪ್ಪ ಧರ್ಮ ಸಂಸ್ಥೆ ಪರವಾಗಿ)
  • ‘ಜಾನಪದ ಬಂಗಾರ’ ಪ್ರಶಸ್ತಿ: ಚೌಡಿಕೆ ಕಲಾವಿದೆ ರಾಧಾಬಾಯಿ ಮಾದರ್
  • ‘ಕಲಾ ಬಂಗಾರ’ ಪ್ರಶಸ್ತಿ: ರಂಗಭೂಮಿ ಕಲಾವಿದ ಜೇವರ್ಗಿ ರಾಜಣ್ಣ

ಪ್ರಶಸ್ತಿ ಪ್ರದಾನ ಸಮಾರಂಭ ಸಂಜೆ 5 ಗಂಟೆಗೆ ಬಂಗಾರಧಾಮದಲ್ಲಿ ನಡೆಯಲಿದ್ದು, ಸಚಿವ ಕೆ.ಹೆಚ್. ಮುನಿಯಪ್ಪ ಅವರು ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಆರ್.ವಿ. ದೇಶಪಾಂಡೆ, ಸಚಿವ ಸಂತೋಷ್ ಲಾಡ್, ಶಾಸಕ ಬೇಳೂರು ಗೋಪಾಲಕೃಷ್ಣ, ಪ್ರಜಾ ವಾಣಿ–ಡೆಕ್ಕನ್ ಹೆರಾಲ್ಡ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ತಿಲಕ್ ಕುಮಾರ್, ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಕೆ.ವಿ. ನಾಗರಾಜ್ ಮೂರ್ತಿ ಮುಖ್ಯ ಅತಿಥಿಗಳಾಗಲಿದ್ದಾರೆ. ಸಚಿವ ಎಸ್. ಮಧು ಬಂಗಾರಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಇದೇ ವೇಳೆ ಬಂಗಾರಪ್ಪ ವಿಚಾರ ಸಂಕಿರಣವನ್ನು ಅ.26ರ ಬೆಳಗ್ಗೆ 10.30ಕ್ಕೆ ಸೊರಬದ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. “ಬಂಗಾರಪ್ಪನವರ ಚಿಂತನೆಗಳು ಮತ್ತು ಸುಸ್ಥಿರ ಬದುಕಿನ ಪ್ರಸ್ತುತತೆ” ಎಂಬ ವಿಷಯದ ಕುರಿತು ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಅವರು ಉದ್ಘಾಟನೆ ನೆರವೇರಿಸಲಿದ್ದು, ಡಾ. ಕಾಳೇಗೌಡ ನಾಗವಾರ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಹೆಚ್.ಎಲ್. ಪುಷ್ಪಾ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಉಪನ್ಯಾಸ ನೀಡಲಿದ್ದಾರೆ.

ಕಾರ್ಯಕ್ರಮದ ಅಂತ್ಯದಲ್ಲಿ ಮೂಡಬಿದರೆಯ ಆಳ್ವಾಸ್ ವಿದ್ಯಾರ್ಥಿಗಳಿಂದ “ಆಳ್ವಾಸ್ ಸಾಂಸ್ಕೃತಿಕ ವೈಭವ” ಎಂಬ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ವಿಚಾರ ವೇದಿಕೆ ಪ್ರಮುಖ ಜಿ.ಡಿ. ಮಂಜುನಾಥ್ ಮಾತನಾಡಿ, “ಬಂಗಾರಪ್ಪನವರ ಚಿಂತನೆಗಳು ಎಲ್ಲ ಕಾಲಕ್ಕೂ ವರ್ತಮಾನವಾಗಿಯೇ ಇರುತ್ತವೆ. ಅವರ ಆದರ್ಶಗಳು ಸಮಾಜದ ಮಾರ್ಗದರ್ಶಕ” ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಬಂಗಾರಪ್ಪನವರ ಅಭಿಮಾನಿಗಳು, ಹಿತೈಷಿಗಳು ಹಾಗೂ ಸಾರ್ವಜನಿಕರನ್ನು ಭಾಗವಹಿಸಲು ಆಯೋಜಕರು ಮನವಿ ಮಾಡಿದ್ದಾರೆ.

ಹಿರೇಸಾನಿ ಗ್ರಾಮದಲ್ಲಿ ರಕ್ತದಾನ ಶಿಬಿರ ; ಥಲಸೇಮಿಯಾ ರೋಗಿಗಳಿಗೆ ಜೀವದಾನ

Leave a Comment