ಹೊಸನಗರ: ಭಾರತದ ಸ್ವಾತಂತ್ರ್ಯಕ್ಕಾಗಿ ಅಹಿಂಸಾತ್ಮಕ ಹೋರಾಟ ನಡೆಸಿದ ಮಹಾತ್ಮ ಗಾಂಧೀಜಿಯವರು ತಮ್ಮ ಉನ್ನತ ಮೌಲ್ಯಗಳಿಂದಾಗಿ ಜನಮಾನಸದಲ್ಲಿ ಶಾಶ್ವತ ಸ್ಥಾನ ಗಳಿಸಿದ್ದಾರೆ ಎಂದು ಹೊಸನಗರ ತಹಶೀಲ್ದಾರ್ ಭರತ್‌ರಾಜ್ ಅಭಿಪ್ರಾಯಪಟ್ಟರು.
ಇಲ್ಲಿನ ಪಟ್ಟಣ ಪಂಚಾಯಿತಿ ಆವರಣದಲ್ಲಿ ಆಯೋಜಿಸಲಾಗಿದ್ದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಹನೀಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿ, ಸತ್ಯ ಮತ್ತು ಅಹಿಂಸೆಯನ್ನು ಉಸಿರಾಗಿಸಿಕೊಂಡಿದ್ದ ಗಾಂಧೀಜಿಯವರು, ಕೇವಲ ದೈಹಿಕ ಹಿಂಸೆಯಲ್ಲದೆ ಆಲೋಚನೆ ಹಾಗೂ ಮಾತುಗಳಲ್ಲಿಯೂ ಅಹಿಂಸೆ ಇರಬೇಕು ಎಂದು ಪ್ರತಿಪಾದಿಸಿದ್ದರು. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ‘ಸತ್ಯಾಗ್ರಹ’ ಎಂಬ ಅಸ್ತ್ರವನ್ನು ಬಳಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಅವರ ಸರಳತೆ, ‘ಸತ್ಯಮೇವ ಜಯತೇ’ ತತ್ವ ಮತ್ತು ಆದರ್ಶಗಳನ್ನು ನಾವೆಲ್ಲರೂ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹರೀಶ್ ಎಂ.ಎನ್. ಮಾತನಾಡಿ, ಇಂದಿನ ಯುವಪೀಳಿಗೆಯು ಗಾಂಧೀಜಿಯವರು ತೋರಿದ ಸತ್ಯ ಹಾಗೂ ಅಹಿಂಸೆಯ ಮಾರ್ಗದಲ್ಲಿ ಮುನ್ನಡೆದರೆ ಸುಖ-ಶಾಂತಿಯ ಜೀವನ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದರು.
ಈ ಸಮಾರಂಭದಲ್ಲಿ ಪಟ್ಟಣ ಪಂಚಾಯಿತಿ ಸಿಬ್ಬಂದಿ ವರ್ಗದವರಾದ ಮಂಜುನಾಥ್, ಶ್ರುತಿ, ಆಸ್ಮಾ, ಪರಶುರಾಮ್, ಗಿರೀಶ್, ನವೀನ್, ಬಸವರಾಜ್, ನೇತ್ರಾವತಿ, ಅಕ್ಷತಾ, ಅಮೃತ, ವರುಣ, ಸಂಧ್ಯಾ, ಚಂದ್ರಪ್ಪ, ಸರೋಜ ಹಾಗೂ ಎಲ್ಲಾ ಪೌರಕಾರ್ಮಿಕರು ಉಪಸ್ಥಿತರಿದ್ದರು.

