ಹೊಸನಗರ: ತಾಲ್ಲೂಕಿನ ಹೊನ್ನೆಬೈಲು ಗ್ರಾಮದ ಸರ್ಕಾರಿ ಗೋಮಾಳ ಜಮೀನಿನಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯನ್ನು ತಕ್ಷಣ ನಿಯಂತ್ರಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜನ ಸಂಗ್ರಾಮ ಪರಿಷತ್ ತಾಲೂಕು ಆಡಳಿತವನ್ನು ಒತ್ತಾಯಿಸಿದೆ.
ಈ ಕುರಿತು ಜನ ಸಂಗ್ರಾಮ ಪರಿಷತ್‌ನ ಗಿರೀಶ್ ಆಚಾರ್ ಹೊಸನಗರ ತಹಶೀಲ್ದಾರ್‌ಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.
ಹೊನ್ನೆಬೈಲು ಗ್ರಾಮದ ಸರ್ವೆ ನಂ. 11 ರ ಸರ್ಕಾರಿ ಗೋಮಾಳ ಜಮೀನಿನಲ್ಲಿ ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಅಕ್ರಮವಾಗಿ ಸ್ಫೋಟಕ ಹಾಗೂ ಮದ್ದು ಮಾರಕ ವಸ್ತುಗಳನ್ನು ಬಳಸಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ಇದರಿಂದಾಗಿ ಸ್ಥಳೀಯ ನಿವಾಸಿಗಳಿಗೆ ತೀವ್ರ ತೊಂದರೆಯಾಗುತ್ತಿದ್ದು, ಜಾನುವಾರುಗಳ ಮೇವಿಗೂ ಸಂಕಷ್ಟ ಎದುರಾಗಿದೆ. ಜೊತೆಗೆ ಸರ್ಕಾರದ ಬೆಲೆಬಾಳುವ ಖನಿಜ ಸಂಪತ್ತು ಲೂಟಿಯಾಗುತ್ತಿದ್ದು, ಸರ್ಕಾರದ ಬೊಕ್ಕಸಕ್ಕೆ ಭಾರಿ ಪ್ರಮಾಣದ ನಷ್ಟ ಉಂಟಾಗುತ್ತಿದೆ ಎಂದು ತಿಳಿಸಿದ್ದಾರೆ.
ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಹಾಗೂ ಕರ್ನಾಟಕ ಉಪ ಖನಿಜ ನಿಯಮಾವಳಿ 1994 (ತಿದ್ದುಪಡಿ 2020)ರ ನಿಯಮ 41(1)ರ ಅಡಿಯಲ್ಲಿ ಭಾರೀ ದಂಡ ವಿಧಿಸಬೇಕೆಂದು ಆಗ್ರಹಿಸಲಾಗಿದೆ.
ಪ್ರಕರಣ ಅತ್ಯಂತ ಗಂಭೀರ ಹಾಗೂ ಸೂಕ್ಷ್ಮವಾಗಿರುವುದರಿಂದ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಕ್ರಮ ಜರುಗಿಸಬೇಕು. ಒಂದು ವೇಳೆ ಕಾನೂನು ಕ್ರಮ ಕೈಗೊಳ್ಳಲು ವಿಫಲವಾದರೆ, ಅಧಿಕಾರಿಗಳ ಕರ್ತವ್ಯ ಲೋಪ ಹಾಗೂ ಅಧಿಕಾರ ದುರುಪಯೋಗದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

