ಹೊಸನಗರ ; ಪಟ್ಟಣದಲ್ಲಿ ನಾಳೆಯಿಂದ ಜ. 28ರವರೆಗೆ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ನಡೆಯಲಿದ್ದು ಸಾವಿರಾರು ಜನರು ಜಾತ್ರಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅಂಗಡಿಯವರು, ಸಮಿತಿಯವರು ಹಾಗೂ ಸಾರ್ವಜನಿಕರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸ್ವಚ್ಛತೆಯಿಲ್ಲದಿದ್ದರೆ ಅಂಗಡಿಯವರ ಮೇಲೆ ಕೇಸ್ ಹಾಕಲಾಗುವುದು ಮತ್ತು ದಂಡ ವಸೂಲಿ ಮಾಡಲಾಗುವುದು ಎಂದು ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ತಹಸೀಲ್ದಾರ್ ಭರತ್‌ರಾಜ್ ಎಚ್ಚರಿಸಿದರು.
ಹೊಸನಗರದ ಪ್ರಮುಖ ಬೀದಿಗಳಲ್ಲಿ ಹಾಗೂ ಜಾತ್ರೆ ನಡೆಯುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಊರಿನ ನಾಗರೀಕರಾದ ತಾವು ನಮ್ಮ ಮನೆಯ ಜೊತೆಗೆ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯವಾಗಿದೆ. ಜಾತ್ರೆಗೆ ಬಂದು ಅಂಗಡಿ ಹಾಕಿರುವ ಅಂಗಡಿ ಮಾಲೀಕರು ನಿಮ್ಮ ಅಂಗಡಿಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಎಲ್ಲಿ ಬೇಕಾದಲ್ಲಿ ಪ್ಲಾಸ್ಟಿಕ್ ಹಾಕುವುದು ಮಾಡಿದರೆ ದಂಡ ಗ್ಯಾರಂಟಿ. ಅದೇ ರೀತಿ ಜಾತ್ರೆಯಲ್ಲಿ ಹೋಟೆಲ್ ಇತ್ಯಾದಿ ಅಂಗಡಿಗಳನ್ನು ಇಟ್ಟುಕೊಂಡವರು ಅಲ್ಲೆ ತಿಂದು ಅಲ್ಲಿಯೇ ಎಂಜಲು ಎಸೆಯುವುದು ಅಲ್ಲಲ್ಲಿ ನೀರು ಚೆಲ್ಲುವುದು ಮಾಡಬೇಡಿ. ಸ್ವಚ್ಛತೆಯೇ ಮನುಷ್ಯನ ಆರೋಗ್ಯಕ್ಕೆ ಒಳ್ಳೆಯದಾಗಿದ್ದು ನಮ್ಮ ಸಿಬ್ಬಂದಿಗಳು ಗಂಟೆ-ಗಂಟೆಗೆ ಭೇಟಿ ನೀಡುತ್ತಿರುತ್ತಾರೆ. ಸ್ವಚ್ಛತೆಯನ್ನು ಕಾಪಾಡಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹರೀಶ್, ಆರೋಗ್ಯಾಧಿಕಾರಿ ಶೃತಿ, ಗ್ರಾಮ ಆಡಳಿತಾಧಿಕಾರಿ ಲೋಹಿತ್, ಗ್ರಾಮ ಸಹಾಯಕ ಗಣೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





