ರಿಪ್ಪನ್‌ಪೇಟೆ ; ಇತ್ತೀಚೆನ ವರ್ಷಗಳಲ್ಲಿ ಅಡಿಕೆ ಬೆಳೆಗೆ ಎಲೆಚುಕ್ಕೆ ರೋಗದಿಂದಾಗಿ ಇಳುವರಿ ಕುಂಠಿತಗೊಂಡಿದ್ದು ಅಲ್ಲದೆ ಅಡಿಕೆ ಸೇವನೆಯಿಂದ ಮಾರಕ ರೋಗ ಕ್ಯಾನ್ಸರ್ ನಂತಹ ಕಾಯಿಲೆ ಬರುತ್ತದೆಂದು ಸುಪ್ರೀಂಕೋರ್ಟ್‌ನಲ್ಲಿ ದೂರು ದಾಖಲಾಗಿರುವ ಬಗ್ಗೆ ಅಡಿಕೆ ಬೆಳೆಗಾರರಲ್ಲಿ ಗೊಂದಲ ನಿರ್ಮಾಣವಾಗಿದೆ. ಕಳೆದ ವರ್ಷದಲ್ಲಿ ಮಲೆನಾಡಿನ ವ್ಯಾಪ್ತಿಯಲ್ಲಿನ ಹೊಸನಗರ, ಸಾಗರ, ತೀರ್ಥಿಹಳ್ಳಿ, ಕೊಪ್ಪ, ಶೃಂಗೇರಿ ಹಲವು ಕಡೆಯಲ್ಲಿ ಅಡಿಕೆಯಲ್ಲಿ ಎಲೆಚುಕ್ಕೆ ರೋಗದಿಂದಾಗಿ ಅಡಿಕೆ ತೋಟ ಬರಿದಾಗುತ್ತಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ವಿಷಾದ ವ್ಯಕ್ತಪಡಿಸಿದರು.
ಅವರು ರಿಪ್ಪನ್‌ಪೇಟೆ ಸಮೀಪ ಕೆಂಚನಾಲ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಕೆದಲುಗುಡ್ಡೆಯ ಸೆಲಿ ಜೋಸೆಫ್ ಅವರ ಅಡಿಕೆ ತೋಟದಲ್ಲಿನ ಮಿಶ್ರಬೆಳೆ ಕಾಳುಮೆಣಸು, ಕಾಫಿ ತೋಟಕ್ಕೆ ಭೇಟಿ ನೀಡಿ ರೈತರೊಂದಿಗೆ ಸಮಲೋಚನೆ ನಡೆಸಿ ತೋಟಗಾರಿಕೆಯಲ್ಲಿ ಮಿಶ್ರ ಬೆಳೆಯನ್ನು ಬೆಳೆಯುವುದರಿಂದ ಹೆಚ್ಚು ಲಾಭವಾಗುವುದೆಂದು ಹೇಳಿದರು.
9 ಅಡಿ ಅಗಲ 9 ಅಡಿ ಉದ್ದದ ಅಂತರದಲ್ಲಿ ಹಾಕಲಾದ ಅಡಿಕೆ ಗಿಡಗಳ ಮಧ್ಯದಲ್ಲಿ ಮಿಶ್ರಬೆಳೆಯಾದ ಕಾಫಿ ಮತ್ತು ಕಾಳುಮೆಣಸು ಗಿಡಗಳನ್ನು ಬೆಳೆಸುವುದರಿಂದಾಗಿ ಹೆಚ್ಚು ಲಾಭವಾಗುವುದೆಂದು ವಿವರಿಸಿದ ಅವರು, ಕಾಲ ಕ್ರಮೇಣ ಅಡಿಕೆ ಗಿಡಗಳಲ್ಲಿ ರೋಗ ಉಲ್ಬಣಗೊಂಡು ಗಿಡಗಳು ಸಂಪೂರ್ಣ ನಾಶವಾದರೂ ಕೂಡಾ ಮಿತ್ರ ಬೆಳೆಗಳಾದ ಕಾಫಿ ಮತ್ತು ಕಾಳುಮೆಣಸಿನ ಉತ್ಪಾದನೆಯಂದಾಗಿ ಒಂದು ಬೆಳೆಯಲ್ಲಿ ನಷ್ಟವಾದರೆ ಇನ್ನೊಂದರಲ್ಲಿ ಲಾಭವಾಗುವುದೆಂದು ರೈತರು ಮನಗಾಣಬೇಕಾದ ಬಗ್ಗೆ ಇಲ್ಲಿನ ಸೆಲಿ ಜೋಸೆಫ್ ತೋಟದಲ್ಲಿ ಹಾಕಲಾದ ಕಾಫಿ ಕಾಳುಮೆಣಸಿನ ಪ್ರಾತ್ಯಕ್ಷಿಕೆಯನ್ನು ರೈತರಿಗೆ ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ತೀರ್ಥಹಳ್ಳಿ ಕ್ಷೇತ್ರದಿಂದ ಪ್ರಗತಿಪರ ರೈತರನ್ನು ಕರೆತಂದು ತೋಟದ ಮಿಶ್ರಬೆಳೆಗಳಾದ ಅಡಿಕೆ, ಕಾಫಿ, ಕಾಳುಮೆಣಸು ಮತ್ತು ಸಿಲ್ವರ್ ಗಿಡಗಳ ಬಗ್ಗೆ ಮಾಲೀಕರಿಂದ ಪ್ರಾತ್ಯಕ್ಷಿಕೆಯನ್ನು ಪಡೆದರು.
ಪಿ.ಜೆ.ಸೆಲಿ ಜೋಸೆಫ್, ಪಿ.ಜೆ. ವರ್ಗೀಶ್, ಅಭಿನಂದನ್, ಜ್ಞಾನೇಂದ್ರ, ಮಹೇಶ ಹೆದ್ದೂರು, ಸಚಿನ್ ಕೆಂಚನಾಲ, ಇನ್ನಿತರರು ಹಾಜರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





