ಹೊಸನಗರ ; ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಿನ್ನಾಭರಣ ಹಾಗೂ ನಗದು ಅಪಹರಿಸಿರುವ ಘಟನೆ ತಾಲೂಕಿನ ನಿಟ್ಟೂರು ಸಮೀಪ ನಡೆದಿದೆ.
ಗೌರಿಕೆರೆ ನಿವಾಸಿ ರಾಜೇಂದ್ರ ಶೆಟ್ಟಿ ಎಂಬುವವರು ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳಿದ್ದು, ಅವರ ಪತ್ನಿ ಸಂಬಂಧಿಕರ ಮನೆಗೆ ಹೋಗಿದ್ದರು. ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಈ ಸಂದರ್ಭವನ್ನು ಬಳಸಿಕೊಂಡ ಕಳ್ಳರು ಮನೆಯ ಮುಂಭಾಗದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ ವೈರ್‌ಗಳನ್ನು ಕತ್ತರಿಸಿ, ಮನೆಯ ಮುಂಬಾಗಿಲು ಮುರಿದು ನುಗ್ಗಿದ್ದಾರೆ. ಮನೆಯಲ್ಲಿಟ್ಟಿದ್ದ ಸುಮಾರು 10.80 ಲಕ್ಷ ರೂ. ಚಿನ್ನಾಭರಣ ಹಾಗೂ 2 ಲಕ್ಷ ರೂ. ಬೆಳೆಬಾಳುವ ಬೆಳ್ಳಿಯ ವಸ್ತುಗಳು ಮತ್ತು ಅಲ್ಮೆರಾದಲ್ಲಿಟ್ಟಿದ್ದ 1.75 ಲಕ್ಷ ರೂ. ನಗದು ಸೇರಿದಂತೆ 14.55 ಲಕ್ಷ ರೂ. ಮೌಲ್ಯದ ನಗ-ನಾಣ್ಯ ಕಳವು ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ.

ಮನೆಯ ಮುಂದಿದ್ದ ತಮ್ಮ ಟಿಪ್ಪರ್ ವಾಹನದ ಚಾಲಕ ಮನೆಯ ಮುಂಬಾಗಿಲು ಒಡೆದಿರುವುದನ್ನು ಗಮನಿಸಿದಾಗ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು ಕಳ್ಳರ ಬೇಟೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





